ಹಾವೇರಿ: ಹುಟ್ಟಿನೊಂದಿಗೆ ಬಂದ ಅಂಗವೈಕಲ್ಯವನ್ನು ಮೆಟ್ಟಿ ನಿಂತು, ಕನ್ನಡ ರಂಗಭೂಮಿಗೆ ಹೊಸ ಆಯಾಮ ನೀಡಿ, ಬೀದಿ ನಾಟಕಗಳ ಮೂಲಕ ರಂಗ ಸಂಸ್ಕೃತಿಯನ್ನು ಗ್ರಾಮೀಣ ಜನರಿಗೆ ತಲುಪಿಸಿದ ಶ್ರೇಯಸ್ಸು ರಂಗಕರ್ಮಿ ಸಿ.ಜಿ.ಕೃಷ್ಣಮೂರ್ತಿ (ಸಿಜಿಕೆ) ಅವರಿಗೆ ಸಲ್ಲುತ್ತದೆ ಎಂದು ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಪ್ರಾಚಾರ್ಯ ಮಂಜುನಾಥ ಹೊಳ್ಳಿಯವರ ಹೇಳಿದರು.
ರಂಗಭೂಮಿಯ ಇಂದಿನ ಸ್ಥಿತಿಗತಿ ಕುರಿತು ರಂಗಭೂಮಿ ಕಲಾವಿದ ಆರ್.ಸಿ. ನಂದಿಹಳ್ಳಿ ಮಾತನಾಡಿ, ಬೀದಿ ನಾಟಕಗಳು ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಲು ಮತ್ತು ಜನಸಾಮಾನ್ಯರ ಜೊತೆಗೆ ನೇರ ಸಂವಾದ ನಡೆಸಲು ಪ್ರಭಾವಶಾಲಿ ಮತ್ತು ಪರಿಣಾಮಕಾರಿ ಮಾಧ್ಯಮವಾಗಿದೆ. ಯಾವುದೇ ಶುಲ್ಕವಿಲ್ಲದೇ ಮುಖಾಮುಖಿಯಾಗುವ ಈ ಮಾಧ್ಯಮವು ಕಡಿಮೆ ವೆಚ್ಚದಲ್ಲಿ ಗರಿಷ್ಠ ಪ್ರಭಾವವನ್ನು ಬೀರುತ್ತದೆ. ಆದ್ದರಿಂದ ಇಂದು ನಾಟಕಗಳ ಕಮ್ಮಟಗಳು ಹೆಚ್ಚು ನಡೆಯಬೇಕು. ಯುವ ಪೀಳಿಗೆಯನ್ನು ಬೀದಿ ನಾಟಕದತ್ತ ಎಳೆಯುವ ಕೆಲಸವಾಗಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಕಲಾವಿದರಾದ ಚಂದ್ರಶೇಖರ ಹೆಬ್ಬಾರ, ಮಲ್ಲಿಕಾರ್ಜುನ ಚಂದ್ರಾಪಟ್ಟಣ, ಜಗದೀಶ ಕಟ್ಟಿಮನಿ, ಜ್ಯೋತಿ ಅರ್ಕಸಾಲಿ ಅವರಿಗೆ ಸಿಜಿಕೆ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಲಾಬಳಗದ ಅಧ್ಯಕ್ಷ ಕೆ.ಆರ್. ಹಿರೇಮಠ ವಹಿಸಿದ್ದರು.ಪ್ರಾಸ್ತಾವಿಕವಾಗಿ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಜಿಲ್ಲಾ ಕಲಾಬಳಗವು ಅನೇಕ ಕಲಾವಿದರನ್ನು ಕಟ್ಟಿಕೊಂಡು ಬೀದಿ ನಾಟಕಗಳ ಮೂಲಕ ಮೂಢನಂಬಿಕೆ, ಪರಿಸರ ಜಾಗೃತಿ, ಸಾಹಿತ್ಯ ಮತ್ತು ಸಂಸ್ಕೃತಿ ಬೆಳೆಸುವದು ಹಾಗೂ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದು, ಸಿಜಿಕೆ ಪ್ರಶಸ್ತಿ ಪ್ರದಾನ ಸಮಾರಂಭದಂತಹ ಕಾರ್ಯವು ಸದಾ ಶ್ಲಾಘನೀಯ ಎಂದರು.