ಬೆಳಗಾವಿ ಕಾಂಗ್ರೆಸ್ ಭವನದ ಕ್ರೆಡಿಟ್ ವಾರ್ ವಿಷಯ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ವೇವಾಲಾ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲೂ ಪ್ರತಿಧ್ವನಿಸಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಕಾಂಗ್ರೆಸ್ ಭವನದ ಕ್ರೆಡಿಟ್ ವಾರ್ ವಿಷಯ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ವೇವಾಲಾ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲೂ ಪ್ರತಿಧ್ವನಿಸಿತು. ಈ ವಿಚಾರವಾಗಿ ಸಭೆಯಲ್ಲಿ ಗದ್ದಲ ಏರ್ಪಟ್ಟು, ಗೊಂದಲದ ವಾತಾವರಣ ನಡುವೆಯೇ ಸಭೆ ಮುಕ್ತಾಯಗೊಂಡಿತು.ಗಾಂಧಿ ಭಾರತ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಸುರ್ವೇವಾಲಾ ಅವರು ಬೆಳಗ್ಗೆ ಕಾಂಗ್ರೆಸ್ ಭವನದಲ್ಲಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಕಾಂಗ್ರೆಸ್ ಶಾಸಕರೊಂದಿಗೆ ಸಭೆ ನಡೆಸಿದರು. ಮಧ್ಯಾಹ್ನದ ಬಳಿಕ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ವೇಳೆ ಸುರ್ಜೇವಾಲಾ ಅವರು ಗಾಂಧಿ ಭಾರತ ಸಮಾವೇಶದ ಹಿನ್ನೆಲೆಯಲ್ಲಿ ಈಗಾಗಲೇ ಸಭೆ ಮಾಡಲಾಗಿದೆ ಎಂದು ಹೇಳಿದ ಮಾತು ಕಾರ್ಯಕರ್ತರನ್ನು ಕೆರಳಿಸಿತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರ್ಯಕರ್ತರು ಈ ವಿಷಯವಾಗಿ ಯಾವುದೇ ಸಭೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್ ಭವನ ವಿಚಾರ ಪ್ರಸ್ತಾಪಿಸಿದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಕಾಂಗ್ರೆಸ್ ಭವನವನ್ನು ಸತೀಶ ಜಾರಕಿಹೊಳಿ ಅವರೇ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸುರ್ಜೇವಾಲಾ, ನೀವು ಸತೀಶ ಜಾರಕಿಹೊಳಿ ಅವರನ್ನು ಖುಷಿಪಡಿಸಲು ಹೇಳುತ್ತಿದ್ದೀರಿ ಎನ್ನುತ್ತಿದ್ದಂತೆಯೇ ಆಕ್ಷೇಪಿಸಿದ ಕೆಪಿಸಿಸಿ ಸದಸ್ಯೆ ಆಯೇಷಾ ಸನದಿ, ಸತೀಶ ಅವರು ನಮ್ಮ ಹೆಮ್ಮೆ. ಅವರ ಸಲುವಾಗಿ ನಾವು ಪ್ರಾಣ ಕೊಡಲು ಸಿದ್ಧರಿದ್ದೇವೆ. ನಾವೆಲ್ಲ ಅವರಿಗಾಗಿಯೇ ಬಂದಿದ್ದೇವೆ ಎಂದು ತಿರುಗೇಟು ನೀಡಿದರು. ಇದಕ್ಕೆ ಸುರ್ಜೇವಾಲಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕಾರ್ಯಕರ್ತರ ಗದ್ದಲ ಮುಂದುವರಿಯಿತು. ವೇದಿಕೆ ಮೇಲಿದ್ದ ಸಚಿವ ಸತೀಶ ಜಾರಕಿಹೊಳಿ ಕಾರ್ಯಕರ್ತರಿಗೆ ಮನವಿ ಮಾಡಿದರೂ ಗದ್ದಲ ಮುಂದುವರಿದು, ಗೊಂದಲದಲ್ಲೇ ಸಭೆ ಮುಕ್ತಾಯವಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.