ಶಿವಾನಂದ ಪಿ.ಮಹಾಬಲಶೆಟ್ಟಿಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಇನ್ನೇನು ಮುಂಗಾರು ಆರಂಭವಾಗುವ ದಿನಗಳು ಬಂದೇ ಬಿಟ್ಟವು ಎನ್ನುವಷ್ಟರಲ್ಲಿ ನದಿ ಪಾತ್ರದ ಗ್ರಾಮಗಳಾದ ತಾಲೂಕಿನ ಮದನಮಟ್ಟ, ಆಸಂಗಿ, ಅಸ್ಕಿ, ಹಳಿಂಗಳಿ ಹಿಪ್ಪರಗಿ, ತಮದಡ್ಡಿ ಹೀಗೆ ಹತ್ತು ಹಲವು ಹಳ್ಳಿಗಳ ರೈತಾಪಿ ಜನರು ನದಿ ನೀರಿನಮಟ್ಟ ಇಳಿಕೆಯಾಗುತ್ತಿದ್ದಂತೆ ವಿವಿಧ ಬೆಳೆಗಳನ್ನು ಬೆಳೆದು ಉತ್ತಮ ಇಳುವರಿ ಪಡೆಯುತ್ತಿದ್ದಾರೆ.
ನದಿ ತಟದಲ್ಲಿ ಫಲವತ್ತಾದ ಕೆನೆಭರಿತ ಹಾಲಿನಂತಹ ಮಣ್ಣು ಪ್ರತಿ ವರ್ಷ ನದಿ ದಂಡೆಯಲ್ಲಿ ಬಿಟ್ಟು ಹೋಗುತ್ತದೆ. ಇಲ್ಲಿ ಬೀಜ ಬಿತ್ತಿದರೆ ಸಾಕು ಕಡಿಮೆ ಅವಧಿಯಲ್ಲಿ ಉತ್ತಮ ಬೆಳೆ ಬರುತ್ತದೆ. ಅದರಲ್ಲೂ ೬೦ ರಿಂದ ೯೦ ದಿನಗಳಲ್ಲಿ ಬರುವ ಬೆಳೆಗಳಾದ ಮೆಕ್ಕೆಜೋಳ, ದನಕರುಗಳಿಗೆ ಜೋಳದ ಮೇವು, ಅಲಸಂದಿ, ಚಂಡುಹೂವು, ಬೇಸಿಗೆ ಶೇಂಗಾ ಹೀಗೆ ಹತ್ತು ಹಲವು ಮಾದರಿಯ ಬೆಳೆಗಳನ್ನು ಈ ಭಾಗದ ರೈತರು ಬೆಳೆಯುತ್ತಾರೆ.ಮುಂಗಾರು ಪ್ರಾರಂಭವಾಗಿ ನದಿಗೆ ನೀರು ಬಂದು ಒಡಲುಗಳೆರಡು ತುಂಬಿ ಹರಿಯುವುದರೊಳಗಾಗಿ ಫಸಲು ಕೈಗೆ ದೊರಕುವಂತೆ ಬಿತ್ತನೆ ಮಾಡಿರುತ್ತಾರೆ. ಇದು ಪ್ರತಿವರ್ಷದ ಪದ್ಧತಿ ಕೂಡ ಆಗಿದೆ. ಫಲವತ್ತಾದ ಮಣ್ಣಿನಲ್ಲಿ ಬೆಳೆ ಬೆಳೆಯುವುದರಿಂದ ಉತ್ತಮ ಇಳುವರಿ ಕೂಡ ಬರುತ್ತವೆ ಎನ್ನುತ್ತಾರೆ ಇಲ್ಲಿನ ರೈತಾಪಿ ಜನರು.
ಆದರೆ ಈ ಪರಿಸ್ಥಿತಿ ನದಿ ತಟದ ಗ್ರಾಮಗಳಾದ ತಮದಡ್ಡಿ, ಹಳಿಂಗಳಿ ಗ್ರಾಮಗಳಲ್ಲಿ ಭಿನ್ನವಾಗಿದೆ. ಇಲ್ಲಿನ ರೈತರು ಕಬ್ಬು ಬೆಳೆಯನ್ನೇ ಅವಲಂಬಿಸಿದ್ದು, ಬೆಳೆಗಳಿಗೆ ಉಣಿಸಲು ನೀರಿದ್ದರೂ ಹೆಸ್ಕಾಂ ಇಲಾಖೆ ವಿದ್ಯುತ್ ಸರಬರಾಜು ಸ್ಥಗಿತ ಮಾಡಿದ ಕಾರಣ ಬೆಳೆಗಳು ಒಣಗುತ್ತಿವೆ. ಹೀಗಾಗಿ ತೇರದಾಳ, ತಮದಡ್ಡಿ, ಹಳಿಂಗಳಿ, ಹನಗಂಡಿ ಭಾಗದ ರೈತರು ಪ್ರತಿಭಟನೆ ಹಾದಿಯಲ್ಲಿರುವಾಗಲೇ, ಸದ್ಯ ಸುರಿದ ಮಳೆಯಿಂದಾಗಿ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.ನಾವು ಪ್ರತಿವರ್ಷ ನದಿ ನೀರು ಇಳಿಯುತ್ತಿದ್ದಂತೆ ಹಂತಹಂತವಾಗಿ ವಿವಿಧ ಬೆಳೆಗಳನ್ನು ಬೆಳೆಯಲು ಬಿತ್ತನೆ ಮಾಡುತ್ತೇವೆ. ದನಕರುಗಳನ್ನು ನದಿ ದಡದಲ್ಲಿಯೇ ಇರುವಂತೆ ವ್ಯವಸ್ಥೆ ಕೂಡ ಮಾಡಿಕೊಂಡಿರುತ್ತೇವೆ. ಬೇಸಿಗೆ ಸಂದರ್ಭದಲ್ಲಿ ಮೂರು ತಿಂಗಳು ಹಸಿ ಮೇವು ದೊರಕುವಂತೆ ವ್ಯವಸ್ಥೆ ಮಾಡಿಕೊಂಡಿರುತ್ತೇವೆ. ಇದರಿಂದ ಬೇಸಿಗೆ ಸಂದರ್ಭದಲ್ಲಿ ಉತ್ತಮ ಹೈನುಗಾರಿಕೆ ಮಾಡಿ ಆರ್ಥಿಕವಾಗಿ ಸಬಲರಾಗುತ್ತೇವೆ. ನದಿಗೆ ನೀರು ಬರುವಷ್ಟರಲ್ಲಿ ಮತ್ತೆ ಯಥಾಸ್ಥಿತಿಯಾಗಿ ನಾವು ಎತ್ತರದ ಪ್ರದೇಶಕ್ಕೆ ಹೋಗುತ್ತೇವೆ.---ನಂದೆಪ್ಪ ಹೊಳೆಪ್ಪಗೋಳ. ಅಸ್ಕಿ ಗ್ರಾಮದ ರೈತ