ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಾಸಿಕ ಗೌರವಧನ ನಿಗದಿಗೊಳಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿಯ 2ನೇ ದಿನಕ್ಕೆ ಕಾಲಿಟ್ಟಿದೆ.ಓಬವ್ವ ವೃತ್ತದ ಬಳಿ ನಿರ್ಮಿಸಿರುವ ಪೆಂಡಾಲ್‌ನಲ್ಲಿ ಧರಣಿ ಕುಳಿತಿರುವ ಆಶಾ ಕಾರ್ಯಕರ್ತೆಯರು ರಾತ್ರಿಯಿಡೀ ಬರುತ್ತಲೇ ಇದ್ದ ಮಳೆಗೆ ಜಗ್ಗದೇ ತಮ್ಮ ಧರಣಿಯನ್ನು ಮುಂದುವರೆಸಿದರು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಸಂಚಾಲಕ ರವಿಕುಮಾರ್, ನಿಗದಿತ ಗೌರವಧನಕ್ಕಾಗಿ ಅವಿರತ ಹೋರಾಟ ನಡೆಸಿದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಠ 10,000 ರು. ಗೌರವಧನ ನೀಡುವುದಾಗಿ ಮಾತುಕೊಟ್ಟಿದ್ದ ಮುಖ್ಯಮಂತ್ರಿಗಳು ತಮ್ಮ ಮಾತು ಮರೆತು ನಡೆದುಕೊಳ್ಳುತ್ತಿರುವುದು ರಾಜ್ಯದ ಆಶಾಗಳಿಗೆ ಬಗೆಯುತ್ತಿರುವ ದ್ರೋಹವೇ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಮಾರ್ಗದರ್ಶಿ ನಿಯಮಗಳ ಪ್ರಕಾರ ಪ್ರತಿ ಜನವಸತಿ ಪ್ರದೇಶಕ್ಕೊಬ್ಬ ಆಶಾ ಕಾರ್ಯಕರ್ತೆ ಇರಬೇಕು ಹಾಗೂ ಅವರು ಕಾರ್ಯ ನಿರ್ವಹಿಸುವ ಜನವಸತಿಯ ಜನಸಂಖ್ಯೆ ಗರಿಷ್ಠ 1000 ದಾಟಬಾರದು. 1000ಕ್ಕಿಂತ ಹೆಚ್ಚಿದ್ದರೆ ಅದೇ ಜನವಸತಿ ಪ್ರದೇಶಕ್ಕೆ ಮತ್ತೊಬ್ಬ ಆಶಾಳನ್ನು ಸೇವೆಗೆ ತೆಗೆದುಕೊಳ್ಳಬೇಕಾಗಿದೆ. ಕನಿಷ್ಟ ಜನಸಂಖ್ಯೆ ಇಂತಿಷ್ಟೇ ಇರಬೇಂಬ ಯಾವುದೇ ಷರತ್ತು ಇಲ್ಲ. ಆದರೆ ರಾಜ್ಯ ಸರ್ಕಾರವು ಎನ್‌ಎಚ್‌ಎಂ ನಿಯಮಗಳನ್ನು ಗಾಳಿಗೆ ತೂರಿ ಆಶಾ ಕಾರ್ಯಕರ್ತೆಯರು ಕೆಲಸ ಮಾಡುವಲ್ಲಿ ಕನಿಷ್ಠ 1000 ಜನರಿರಬೇಕು ಹಾಗೂ ಗರಿಷ್ಠ 2000 ಜನರಿರಬಹುದು ಎಂದು ನಿಗದಿಪಡಿಸಿದೆ. ಸಾಲದೆಂಬಂತೆ ತರ್ಕಬದ್ಧಗೊಳಿಸುವ ಹೆಸರಿನಲ್ಲಿ 1000 ಕ್ಕಿಂತ ಕಡಿಮೆ ಜನರಿರುವ ಗ್ರಾಮದ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯುವ ಹುನ್ನಾರವನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅವೈಜ್ಞಾನಿಕವಾಗಿ ಅವರ ಮೇಲೆ ಕಾರ್ಯನಿರ್ವಹಣಾ ಮೌಲ್ಯಮಾಪನ ಹೇರಿ ಮೌಲ್ಯಮಾಪನವನ್ನಾಧರಿಸಿ ಕರ್ತವ್ಯದಲ್ಲಿಮುಂದುವರೆಸುವ ಅಥವಾ ತೆಗೆದು ಹಾಕುವ ಬೆದರಿಕೆ ಒಡ್ಡಲಾಗುತ್ತಿದೆ. ಕೆಲಸಕ್ಕೆ ಸೂಕ್ತ ಗೌರವಧನ ಕೇಳಿದರೆ ಅದನ್ನು ಕೊಡುವ ಬದಲು ಕೆಲಸದಿಂದಲೇ ತೆಗೆದು ಹಾಕುವ ಕ್ರಮ ಅತ್ಯಂತ ಖಂಡನೀಯ ಎಂದರು.
ಆಶಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಮಾತನಾಡಿ, ಕಳೆದ 15-20 ವರ್ಷಗಳಿಂದ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದುತ್ತಿರುವ ಆಶಾಗಳನ್ನು ಸರ್ಕಾರ ಖಾಲಿ ಕೈಲಿ ಮನೆಗೆ ಕಳಿಸುತ್ತಿದೆ ಜನರ ಆರೋಗ್ಯ ರಕ್ಷಣೆಗಾಗಿ ಸೇವೆ ಸಲ್ಲಿಸಿದ ಆಶಾಗಳು ತಮ್ಮ ವೃದ್ಧಾಪ್ಯದಲ್ಲಿ ಯಾವುದೇ ಆಸರೆ ಇಲ್ಲದಂತಾಗುತ್ತಿದ್ದಾರೆ. ಆದ್ದರಿಂದ ಪಶ್ಚಿಮ ಬಂಗಾಳದ ಮಾದರಿಯಲ್ಲಿ ನಿವೃತ್ತರಾಗುವ ಆಶಾಗಳಿಗೆ ತಮ್ಮ ಮುಂದಿನ ಬದುಕಿಗಾಗಿ 5 ಲಕ್ಷ ರು.ಇಡಿಗಂಟು ನೀಡಬೇಕು ಎಂದರು.ಧರಣಿ ನಿರತರನ್ನು ಬೆಂಬಲಿಸಿ ಆರ್ಥಿಕ ತಜ್ಞ ಪ್ರೊ. ಜಿ. ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಮುಖ್ಯಮಂತ್ರಿಗಳು ತಾವು 7 ತಿಂಗಳ ಹಿಂದೆ ಕೊಟ್ಟ ಮಾತನ್ನು ಇದೂವರೆಗೂ ಕಾರ್ಯರೂಪಕ್ಕೆ ತರದಿದ್ದರೆ ಇದು ಅತ್ಯಂತ ಬೇಜವಾಬ್ದಾರಿತನವಾಗುತ್ತದೆ. ಸರ್ಕಾರವೇ ತಾನು ಕೊಟ್ಟ ಮಾತನ್ನು ಮರೆತರೆ ಜನರಿಗೆ ಹೋರಾಟ ಅನಿವಾರ್ಯ. ಆದ್ದರಿಂದ ಆಶಾಗಳ ಹೋರಾಟ ನ್ಯಾಯಸಮ್ಮತವಾಗಿದ್ದು ನಿಮ್ಮ ಹೋರಾಟಕ್ಕೆ ಜಯವಾಗಲಿ ಎಂದರು.
ಈ ಸಂರ್ಭದಲ್ಲಿ ಎಐಡಿಎಸ್‌ಒ ಜಿಲ್ಲಾ ಸಂಚಾಲಕ ಈರಣ್ಣ ಎಐಎಂಎಸ್‌ಎಸ್ ಜಿಲ್ಲಾ ಸಂಚಾಲಕ ಡಿ.ಸುಜಾತ ಧರಣಿ ಉದ್ದೇಶಿಸಿ ಮಾತನಾಡಿದರು. ಅನಂತರ ಧರಣಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ|| ರೇಣುಪ್ರಸಾದ್ ಅವರ ಮೂಲಕ ಸರ್ಕಾರಕ್ಕೆ ಈ ಕೆಳಗಿನ ಹಕ್ಕೊತ್ತಾಯಗಳ ಮನವಿ ಸಲ್ಲಿಸಲಾಯಿತು. ಎಐಯುಟಿಯುಸಿ ಜಿಲ್ಲಾ ಸಂಚಾಲಕ ರವಿಕುಮಾರ್, ಆಶಾ ಸಂಘದ ಜಿಲ್ಲಾಧ್ಯಕ್ಷೆ ಗಿರಿಜಮ್ಮ ಮುಖಂಡರುಗಳಾದ ಮಂಜುಳಮ್ಮ ಲಕ್ಷ್ಮೀಬಾಯಿ ಗುರುಶಾಂತ ನಾಗವೇಣಿ ಪಾರ್ವತಮ್ಮ ರಾಜಮ್ಮ ಮಮತ ಸವಿತ ಪುಟ್ಟಮ್ಮ ನೇತ್ರಾವತಿ ವಸಂತಮ್ಮ ವೀಣಾ ಓಂಕಾರಮ್ಮ ನಿಂಗಮ್ಮ ಮೊದಲಾದವರು ಧರಣಿಯ ನೇತೃತ್ವ ವಹಿಸಿದ್ದರು.