ಲಕ್ಷ್ಮೇಶ್ವರ: ಭೂಮಿಯ ವಾತಾವರಣ ಮಾನವನು ವಾಸಿಸದಷ್ಟು ಹಾಳಾಗಿದೆ. ಮುಂದೊಂದು ದಿನ ಭೂಮಿ ಮೇಲೆ ಬಾಳುವುದೇ ಅಸಾಧ್ಯ ಆಗಬಹುದು ಎಂದು ಇಸ್ರೋ ಹಿರಿಯ ವಿಜ್ಞಾನಿ ಶಿವಾನಂದ ಕಾಮತ ತಿಳಿಸಿದರು.
ಪಟ್ಟಣದ ಕಮಲಾ ಮತ್ತು ವೆಂಕಪ್ಪ ಎಂ. ಅಗಡಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಹಾಗೂ ಕಮಲಾ ಮತ್ತು ವೆಂಕಪ್ಪ ಎಂ. ಅಗಡಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಬೆಂಗಳೂರಿನ ಯು.ಆರ್. ರಾವ್ ಉಪಕೇಂದ್ರದ ವತಿಯಿಂದ ಸೋಮವಾರ ಜರುಗಿದ ವಿಶ್ವ ಅಂತರಿಕ್ಷ ಸಪ್ತಾಹದಲ್ಲಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಭೂಮಿಯನ್ನು ಹೊರತುಪಡಿಸಿ ಬೇರೆ ಗ್ರಹಗಳ ಮೇಲೆ ವಾಸಿಸುವ ಪರಿಸ್ಥಿತಿ ಬಂದರೂ ಅದರಲ್ಲಿ ಅಚ್ಚರಿ ಇಲ್ಲ. ಈ ಕುರಿತು ಈಗಾಗಲೇ ಸಂಶೋಧನೆಗಳು ಭರದಿಂದ ಸಾಗಿವೆ. ಬೇರೆ ಗ್ರಹಗಳಿಂದ ಜೀವಿಗಳು ಭೂಮಿಗೆ ಬರುತ್ತಿರುವ ಬಗ್ಗೆ ಆಗಾಗ ಸುದ್ದಿಗಳು ಕೇಳಿ ಬರುತ್ತಿವೆ. ಅಂದರೆ ಭೂಮಿಯನ್ನು ಬಿಟ್ಟು ಬೇರೆ ಗ್ರಹಗಳಲ್ಲೂ ನಮ್ಮಂತೆ ಜೀವಿಗಳು ಇರಬಹುದು ಎಂಬುದನ್ನು ಇದು ಸಾಬೀತು ಪಡಿಸುತ್ತದೆ. ಭವಿಷ್ಯದಲ್ಲಿ ಅನ್ಯ ಗ್ರಹಗಳ ಮೇಲೆ ಮಾನವರು ಜೀವನ ಸಾಗಿಸಬಹುದು. ಈ ನಿಟ್ಟಿನಲ್ಲಿ ನಿರಂತರ ಸಂಶೋಧನೆಗಳು ನಡೆದಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಪರಶುರಾಮ ಬಾರಕಿ ಮಾತನಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗೆ ಅಂತರಿಕ್ಷ ಚಟುವಟಿಕೆಗಳ ಕುರಿತು ಆಸಕ್ತಿ, ಅರಿವು ಮತ್ತು ಸೃಜನಶೀಲತೆಯನ್ನು ಬೆಳೆಸುವ ಉದ್ದೇಶದಿಂದ ನಮ್ಮ ಕಾಲೇಜಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಅಂತರಿಕ್ಷದ ಕುರಿತು ಕುತೂಹಲ ಬೆಳೆಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಇಸ್ರೋ ವಿಜ್ಞಾನಿಗಳಾದ ಮೀನಾ ರವೀಂದ್ರ, ಟಿ.ಎಸ್. ಗೋವಿಂದರಾಜ, ಸುಮಾ ಲೊಂಕಡೆ, ಬಿಇಒ ಎಚ್.ಎನ್. ನಾಯಕ, ಸ್ವಪ್ನ ಚನ್ನಗೌಡರ, ರತ್ನಾಪ್ರಭಾ, ಆರ್.ಎಂ. ಪಾಟೀಲ, ಸುಭಾಶ ಮೇಟಿ, ಶುಭಾ ಡಿ., ವಿಕ್ರಂ ಶಿರೋಳ, ಪ್ರಕಾಶ ಹೊಂಗಲ, ಮಾಲತೇಶ ಸೂರಣಗಿ ಇದ್ದರು.ಜಿಲ್ಲೆಯ ವಿವಿಧ ಶಾಲಾ- ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಅಂತರಿಕ್ಷ ಪ್ರದರ್ಶನ ವೀಕ್ಷಿಸಿದರು.