ಧಾರವಾಡ: ಜಿಲ್ಲೆಯ ಸಾಹಿತ್ಯ, ಸಂಗೀತ ಮತ್ತು ಕಲೆಯನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದ ಮಹನೀಯರ ಭಾವಚಿತ್ರಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಕಾಯುವ ಕೊಠಡಿ ಮತ್ತು ಆವರಣ ಗೋಡೆಯು ಅಲಂಕರಿಸಿರುವುದು 79ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಕಚೇರಿಯ ಸೊಗಡನ್ನು ಮತ್ತಷ್ಟು ಹೆಚ್ಚಿಸಿದೆ.
ವಿಶೇಷವಾಗಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದ ಡಾ. ದ.ರಾ. ಬೇಂದ್ರೆ, ಡಾ. ವಿ.ಕೃ. ಗೋಕಾಕ, ಡಾ. ಗಿರೀಶ ಕಾರ್ನಾಡರ ಭಾವಚಿತ್ರಗಳು, ಸಂಗೀತಗಾರರಾದ ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಶಿ, ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು ಅವರ ಭಾವಚಿತ್ರಗಳನ್ನು ಚಿತ್ರಿಸಿದ್ದಾರೆ.
ಯಾವ್ಯಾವ ಕಲೆ: ಭಾರತೀಯ ಜಾನಪದ ಕಲೆ, ಮಹಾರಾಷ್ಟ್ರ ಮೂಲದ ವರ್ಲಿಕಲೆಯ ಸೊಬಗು, ಸ್ಥಳೀಯ ಸ್ಮಾರಕಗಳು, ವಾದ್ಯಗಳನ್ನು ನುಡಿಸುವುದು, ಗ್ರಾಮೀಣ ಸೊಗಡು, ಪಕ್ಷಿಗಳ ನೈಸರ್ಗಿಕ ಸೌಂದರ್ಯ, ವನ್ಯಜೀವಿಗಳ ಜೀವನ ಶೈಲಿ ಹಾಗೂ ಸಾಹಿತ್ಯದ ಪ್ರೇರಣೆಯನ್ನು ಕಲಾತ್ಮಕವಾಗಿ ಚಿತ್ರಗಳ ಮೂಲಕ ಬಿತ್ತರಿಸುತ್ತಿದ್ದಾರೆ. ಅಲ್ಟ್ರೀಮಾ ಬಣ್ಣ, ಅಕ್ರಾಲಿಕ್ ಬಣ್ಣವನ್ನು ಬಳಸಿಕೊಂಡು ಚಿತ್ರಗಳನ್ನು ಬಿಡಿಸಿದ್ದಾರೆ. ಇದು ಹಲವು ವರ್ಷಗಳವರೆಗೆ ಬಾಳಿಕೆ ಬರುತ್ತದೆ. ಕಲಾವಿದರಿಗೆ ಸಹಕಾರಿಯಾಗಿ ಪ್ರೊ. ಎಸ್.ಕೆ. ಪತ್ತಾರ, ಶಿವಕುಮಾರ ಕಂಕನವಾಡಿ ಇದ್ದಾರೆ ಎಂದು ಸರ್ಕಾರಿ ಚಿತ್ರಕಲಾ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಕುರಿ ಮಾಹಿತಿ ನೀಡಿದರು.ಹೆಮ್ಮೆಯ ಸ್ಮರಣೆ: ಸ್ಥಳೀಯ ಕಲೆ, ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯ ಸಾಧಕರನ್ನು ಸರ್ಕಾರಿ ಕಚೇರಿ ಹಾಗೂ ಕಟ್ಟಡಗಳಲ್ಲಿ ಚಿತ್ರಿಸುವುದರಿಂದ ನಮ್ಮ ಪರಂಪರೆ, ಸಂಸ್ಕೃತಿ ಸಾಧನೆಯನ್ನು ಹೆಮ್ಮೆಯಿಂದ ನೆನಪಿಸಿಕೊಂಡಂತೆ ಆಗುತ್ತದೆ. ಯುವ ಪೀಳಿಗೆಗೆ ನಮ್ಮ ಜಿಲ್ಲೆಯ ಹೆಮ್ಮೆಯ ಸಂಗತಿಗಳು, ಸಾಧನೆಗಳನ್ನು ತಿಳಿಸುವುದು ಈ ಚಿತ್ರಕಲೆಗಳ ಉದ್ದೇಶವಾಗಿದೆ. ದಿನನಿತ್ಯ ನೂರಾರು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿಗೆ ವಿವಿಧ ಕಾರಣಗಳಿಗಾಗಿ ಭೇಟಿ ನೀಡುವುದರಿಂದ ಅವರ ಮನ, ಮನೆಗಳಿಗೆ ಜಿಲ್ಲೆಯ ಇತಿಹಾಸ, ಸಾಧಕರ ಮಾಹಿತಿ ತಲಪುತ್ತದೆ. ಜಿಲ್ಲಾಡಳಿತ ಸ್ಥಳೀಯ ಕಲೆ, ಸಾಹಿತ್ಯ, ಸಂಗೀತ ಪೋಷಣೆಗೆ ಆದ್ಯತೆ ನೀಡಿ, ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.