ಮದರಸಾ ತೆರೆಯಬೇಕೊ ಬೇಡವೊ ಎಂಬುದರ ಬಗ್ಗೆ ನಿರ್ಧರಿಸಲು ಡಿಸಿ ಸಭೆ

KannadaprabhaNewsNetwork | Published : Apr 2, 2025 1:05 AM

ಸಾರಾಂಶ

ರಡೂ ಕಡೆಯ ಮುಖಂಡರ ಅಭಿಪ್ರಾಯ ಸಂಗ್ರಹಿಸಿರುವ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರು, ಅಂತಿಮವಾಗಿ ನ್ಯಾಯಾಲಯಕ್ಕೆ ಲಿಖಿತವಾಗಿ ತಮ್ಮ ನಿರ್ಧಾರ ತಿಳಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಕ್ಯಾತಮಾರನಹಳ್ಳಿ ರಸ್ತೆಯ ಗಾಯತ್ರಿಪುರಂ 2ನೇ ಹಂತದಲ್ಲಿರುವ ಮದರಸಾ ತೆರೆಯಬೇಕೊ ಬೇಡವೊ ಎಂಬುದರ ಬಗ್ಗೆ ನಿರ್ಧರಿಸಲು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರು ಮಂಗಳವಾರ ಮತ್ತೊಮ್ಮೆ ಹಿಂದೂ ಮತ್ತು ಮುಸ್ಲಿಂ ಮುಖಂಡರ ಸಭೆ ನಡೆಸಿದರು.

ಸಿದ್ದಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕ್ಯಾತಮಾರನಹಳ್ಳಿಯ ಗ್ರಾಮಸ್ಥರು ಹಾಗೂ ಮುಸ್ಲಿಂ ಮುಖಂಡರು ಭಾಗಿಯಾಗಿದ್ದರು. ಈ ಸ್ಥಳವು ಆರ್ ಎಸ್ಎಸ್ ಕಾರ್ಯಕರ್ತ ರಾಜು ಕೊಲೆಗೆ ಕಾರಣವಾಗಿತ್ತು. ಕಳೆದ 9 ವರ್ಷಗಳಿಂದ ಮದರಸಾ ಮುಚ್ಚಿದೆ.

ವಿವಾದಿತ ಸ್ಥಳದಲ್ಲಿ ನಾವು ಮದರಸಾ ನಡೆಸುತ್ತೇವೆ‌. ನಮಗೆ ಅವಕಾಶ ಕಲ್ಪಿಸಿ‌ಕೊಡಿ ಎಂದು ಮುಸ್ಲಿಂ ಮುಖಂಡರು ಮನವಿ ಮಾಡಿದರು. ಅದು ಮಸೀದಿಯಲ್ಲ ಕೇವಲ ಮದರಸಾ, ನಾವು ಅಲ್ಲಿ ಶಾಲೆ ಮಾಡಿಕೊಳ್ಳುತ್ತೇವೆ‌. ನಾವು ಅಲ್ಲಿ ಪ್ರಾರ್ಥನೆ ಮಾಡುವುದಿಲ್ಲ ಎಂದು ಮುಸ್ಲಿಂ ಮುಖಂಡರು ತಿಳಿಸಿದರು.

ಇದಕ್ಕೆ ಒಪ್ಪದ ಸ್ಥಳೀಯ ಹಿಂದು ಮುಖಂಡರು, ಅಲ್ಲಿ ಮಸೀದಿಯೂ ಬೇಡ, ಮದರಸಾವು ಬೇಡ. ಮದರಸಾ ತೆರೆಯಲು ಅವರಿಗೆ ಬೇರೆ ಕಡೆ ಜಾಗ ಕೊಡಿ. ಈ ಸ್ಥಳದಲ್ಲಿ ಮಾತ್ರ ಬೇಡ. ಈ ಸ್ಥಳದಲ್ಲಿ ಯತಾಸ್ಥಿತಿ ಮುಂದುವರೆಯಬೇಕು. ಮದರಸಾ ಆರಂಭಕ್ಕೂ ನಮ್ಮ ವಿರೋಧವಿದೆ ಎಂದು ಹಿಂದು ಮುಖಂಡರು ಹೇಳಿದರು.

ಎರಡೂ ಕಡೆಯ ಮುಖಂಡರ ಅಭಿಪ್ರಾಯ ಸಂಗ್ರಹಿಸಿರುವ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರು, ಅಂತಿಮವಾಗಿ ನ್ಯಾಯಾಲಯಕ್ಕೆ ಲಿಖಿತವಾಗಿ ತಮ್ಮ ನಿರ್ಧಾರ ತಿಳಿಸಲಿದ್ದಾರೆ.

ಸಭೆಯಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕಾರ್, ಡಿಸಿಪಿ ಎಂ. ಮುತ್ತುರಾಜು ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.

ಕಂದಕ ಸೃಷ್ಟಿ ಆಗಬಾರದು

ಸಭೆಯ ಬಳಿಕ ಹಿಂದೂ ಮುಖಂಡ ಶಿವಕುಮಾರ್ ಮಾತನಾಡಿ, ಈ ಹಿಂದೆ ಹೇಗಿತ್ತೋ ಮುಂದೆಯೂ ಹಾಗೆಯೇ ಇರಲಿ ಅಂತ ಹೇಳಿದ್ದೇವೆ. ಯಾವುದೇ ಕಾರಣಕ್ಕೂ ಅಲ್ಲಿ ಮಸೀದಿ, ಸ್ಕೂಲ್ ಏನು ಬೇಡ. ಹಿಂದೂ- ಮುಸ್ಲಿಂ ಎರಡು ಜನಾಂಗದವರು ಅಲ್ಲಿ ವಾಸವಿದ್ದೇವೆ. ಇಬ್ಬರಿಗೂ ತೊಂದರೆ ಆಗುವುದು ಬೇಡ. ನಾವು ನಮ್ಮ ಹಬ್ಬಗಳಿಗೆ ಭಜನೆ ಎಲ್ಲಾ ಮಾಡುತ್ತೇವೆ. ಈಗ ಬಂದ್ ಆಗಿರುವ ಮಸೀದಿಯ ಸ್ಥಳ ಹಾಗೆಯೇ ಇರಲಿ. ಪುನಃ ಆರಂಭ ಮಾಡಿ ಇಬ್ಬರ ನಡುವೆ ಕಂದಕ ಸೃಷ್ಟಿ ಆಗಬಾರದು. ಮುಸ್ಲಿಂ ಬಾಂಧವರು ಸ್ಕೂಲ್ ತೆಗೆಯಲು ಬೇರೆ ಜಾಗಗಳಿವೆ, ಅಲ್ಲಿ ಮಾಡಿಕೊಳ್ಳಲಿ ಎಂದರು.

--- ಬಾಕ್ಸ್‌--

-- ಸ್ಕೂಲ್ ಕಟ್ಟಲು ಅನುಮತಿ ಕೇಳಿದ್ದೇವೆ--

ನಗರ ಪಾಲಿಕೆ ಮಾಜಿ ಸದಸ್ಯ, ಮುಸ್ಲಿಂ ಮುಖಂಡ ಶೌಕತ್ ಪಾಷಾ ಮಾತನಾಡಿ, ನಾವು ಮದರಸಾ ಸ್ಕೂಲ್ ಕಟ್ಟಲು ಅನುಮತಿ ಕೇಳಿದ್ದೇವೆ. ಈಗಾಗಲೇ ಕೋರ್ಟ್ ನಲ್ಲಿ ಕೇಸ್ ಇದೆ. ಸಂವಿಧಾನದ ಹಕ್ಕಿನ ಪ್ರಕಾರ ನಾವು ಸ್ಕೂಲ್ ಕಟ್ಟಬೇಕು ಅಂತ ಇದ್ದೇವೆ. ಯಾವುದೇ ರೀತಿಯ ಮಸೀದಿ ಮಾಡುವುದಿಲ್ಲ. ಹಿಂದೂ ಸಹೋದರರು ಇದಕ್ಕೆ ಅವಕಾದ ಕಲ್ಪಿಸಿ ಅಂತ ಮನವಿ ಮಾಡಿದ್ದೇವೆ. ಅವಕಾಶ ಕೊಡ್ತಾರೆ ಎನ್ನುವ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಏ.3 ರಂದು ಕೋರ್ಟ್ ನಲ್ಲಿ ವಿಚಾರಣೆ ಇದೆ. ಜಿಲ್ಲಾಧಿಕಾರಿಗಳು ಸಭೆಯಲ್ಲಿ ಎಲ್ಲರ ಅಭಿಪ್ರಾಯ ಕೇಳಿದ್ದಾರೆ. ಕೋರ್ಟ್ ಏನು ಹೇಳುತ್ತದೆಯೊ ಮುಂದೆ ನೋಡೋಣ ಎಂದರು.

Share this article