ಸುಬ್ರಮಣ್ಯ ಧಾರೇಶ್ವರ ನಿಧನ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟ

ಭಾಗವತಿಕೆಯಲ್ಲಿ ಸಾಧನೆ ಮಾಡಿದ್ದ ಸುಬ್ರಮಣ್ಯ ಧಾರೇಶ್ವರ ನಿಧನ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸೀತೂರಿನ ಗುತ್ತಿ ಯಡೇಹಳ್ಳಿ ಗುತ್ಯಮ್ಮ ಯಕ್ಷಗಾನ ಮಂಡಳಿ ವ್ಯವಸ್ಥಾಪಕ ಹಾಗೂ ಯಕ್ಷಗಾನ ಕಲಾವಿದ ಅನಂತಪದ್ಮನಾಭ ತಿಳಿಸಿದರು.

KannadaprabhaNewsNetwork | Published : Apr 27, 2024 7:48 PM IST

ಸುಬ್ರಮಣ್ಯ ಧಾರೇಶ್ವರ - ಕಾಳಿಂಗ ನಾವುಡ ಭಾಗವತಿಕೆ ದಿಗ್ಗಜರು: ಯಕ್ಷಗಾನ ಕಲಾವಿದ ಅನಂತಪದ್ಮನಾಭ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಭಾಗವತಿಕೆಯಲ್ಲಿ ಸಾಧನೆ ಮಾಡಿದ್ದ ಸುಬ್ರಮಣ್ಯ ಧಾರೇಶ್ವರ ನಿಧನ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸೀತೂರಿನ ಗುತ್ತಿ ಯಡೇಹಳ್ಳಿ ಗುತ್ಯಮ್ಮ ಯಕ್ಷಗಾನ ಮಂಡಳಿ ವ್ಯವಸ್ಥಾಪಕ ಹಾಗೂ ಯಕ್ಷಗಾನ ಕಲಾವಿದ ಅನಂತಪದ್ಮನಾಭ ತಿಳಿಸಿದರು.

ಶನಿವಾರ ಪತ್ರಿಕಾ ಹೇಳಿಕೆ ನೀಡಿ, ಯಕ್ಷಗಾನ ರಂಗದಲ್ಲಿ ಸುಬ್ರಮಣ್ಯ ಧಾರೇಶ್ವರ ಹಾಗೂ ಕಾಳಿಂಗ ನಾವುಡ ಭಾಗವತಿಕೆ ದಿಗ್ಗಜರಾಗಿದ್ದರು. 20ನೇ ವರ್ಷದಲ್ಲಿ ಯಕ್ಷಗಾನ ಲೋಕಕ್ಕೆ ಪಾದರ್ಪಣೆ ಮಾಡಿದ್ದ ಸುಬ್ರಮಣ್ಯ ಧಾರೇಶ್ವರ ಅವರು ತಮ್ಮ ಜೀವಿತಾವಧಿಯಲ್ಲಿ ಭಾಗವತಿಕೆಯಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಪೆರ್ಡೂರ ಮೇಳದಲ್ಲಿ ಧಾರೇಶ್ವರ ಹಾಗೂ ಸಾಲಿಗ್ರಾಮ ಮೇಳದಲ್ಲಿ ಕಾಳಿಂಗ ನಾವುಡು ಭಾಗವತಿಕೆ ಹೇಳುತ್ತಿದ್ದರು. ಇಬ್ಬರ ಶೈಲಿ ಬೇರೆಯಾಗಿತ್ತು. ಸುಬ್ರಮಣ್ಯ ಧಾರೇಶ್ವರ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರು ಸಂಗೀತ ಅಭ್ಯಾಸ ಮಾಡಿದ್ದರು. 400 ಕ್ಕೂ ಹೆಚ್ಚು ದ್ವನಿ ಸುರುಳಿ ಬಿಡುಗಡೆ ಮಾಡಿದ್ದಾರೆ. ಹೊಸ, ಹೊಸ ರಾಗಗಳನ್ನು ಸಂಯೋಜನೆ ಮಾಡಿದ್ದಾರೆ. ಜಾನಪದ, ಭಾವಗೀತೆ, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಯಕ್ಷಗಾನಕ್ಕೆ ತಂದ ಕೀರ್ತಿ ಸುಬ್ರಮಣ್ಯ ಧಾರೇಶ್ವರ ಅವರಿಗೆ ಸಲ್ಲುತ್ತದೆ.

ಕರ್ನಾಟಕ ಸಂಗೀತವನ್ನು ಯಕ್ಷಗಾನದ ಶೈಲಿಯಲ್ಲಿ ಹಾಡಿದ್ದಾರೆ. ಅನೇಕ ಭಾಗವತರು ಕಾಳಿಂಗ ನಾವುಡು ಹಾಗು ಸುಬ್ರಮಣ್ಯ ಧಾರೇಶ್ವರ ಶೈಲಿಯನ್ನು ಅನುಕರಣೆ ಸಹ ಮಾಡಿದ್ದಾರೆ ಎಂದರು.

ಸೀತೂರಿನ ಗುತ್ಯಮ್ಮ ಯಕ್ಷಗಾನ ಮಂಡಳಿ ಹಲವಾರು ಪ್ರದರ್ಶನಗಳಲ್ಲಿ ಭಾಗವತಿಗೆಗಾಗಿ ಸುಬ್ರಮಣ್ಯ ಧಾರೇಶ್ವರ ಅವರನ್ನು ಕರೆಸಿದ್ದೆವು. ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದಾರೆ. ಅವರ ಇಂಪಾದ ಕಂಠ ಕೇಳುಗರಿಗೆ ರೋಮಾಂಚನ ತರಿಸುತ್ತದೆ. ಕಣಿ ಹೇಳಲು ಬಂದ ಕೊರವಂಜಿ ನಾನಮ್ಮ .. ಎಂಬ ಅವರ ಭಾಗವತಿಕೆಯಲ್ಲಿ ಬರುವ ಇಂಪಾದ ಸಂಗೀತ ಜನರ ಮನಸ್ಸಿನಲ್ಲಿ ಇನ್ನೂ ಹಸಿಯಾಗೇ ಇದೆ. ಪುರಂದರ ದಾಸರು, ಕನಕದಾಸರ ಕೀರ್ತನೆ, ಬಸವಣ್ಣನವರ ವಚನವನ್ನು ಯಕ್ಷಗಾನಕ್ಕೆ ತಂದು ಯಕ್ಷಗಾನ ರಂಗವನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ. ಅವರು ಭಾಗವತಿಕೆಗೆ ತಾರಾಮೌಲ್ಯ ಗಳಿಸಿಕೊಟ್ಟಿದ್ದಾರೆ ಎಂದು ಸ್ಮರಿಸಿದರು.

ಸುಬ್ರಮಣ್ಯ ಧಾರೇಶ್ವೇರ ಅವರು ಹೊಸ ಪ್ರಸಂಗವನ್ನು ನಿರ್ದೇಶನ ಮಾಡಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಸಿಂಧೂರ ಭಾಗ್ಯ, ವಸಂತಸೇನ,ಶೂದ್ರ ತಪಸ್ವಿನಿ ಹೆಸರು ಪಡೆದಿತ್ತು. ಸುಬ್ರಮಣ್ಯ ಧಾರೇಶ್ವರ ನಿಧನದಿಂದ ಯಕ್ಷಗಾನದ ದೃವ ನಕ್ಷತ್ರ ಮರೆಯಾದಂತಾಗಿದೆ ಎಂದು ಅವರು ತಿಳಿಸಿದ್ದಾರೆ.

Share this article