ಎರಡು ವರ್ಷದ ಹಿಂದಿನ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆವ ನಿರ್ಧಾರ ವಿರುದ್ಧ ಬಿಜೆಪಿಗರ ಆಕ್ರೋಶ

KannadaprabhaNewsNetwork |  
Published : Oct 13, 2024, 01:13 AM ISTUpdated : Oct 13, 2024, 08:06 AM IST
ಬೆಳಗಾವಿ ಕಾಡಾ ಕಚೇರಿ ಕಟ್ಟಡದಲ್ಲಿ ಸಂಸದ ಜಗದೀಶ ಶೆಟ್ಟರ ಅವರ ಕಚೇರಿ ಕಾರ್ಯಾರಂಭಗೊಂಡಿದೆ | Kannada Prabha

ಸಾರಾಂಶ

ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಹಿಂಪಡೆಯಲು ಕಾಂಗ್ರೆಸ್‌ ಸರ್ಕಾರ ನಿರ್ಧರಿಸಿರುವ ಕ್ರಮ ಕಾನೂನುಬಾಹಿರ ಹಾಗೂ ಸಂವಿಧಾನ ವಿರೋಧಿಯಾಗಿದೆ ಎಂದು ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ್ ಆರೋಪಿಸಿದರು.

ಬೆಂಗಳೂರು: ಎರಡು ವರ್ಷದ ಹಿಂದೆ ಹಳೆ ಹುಬ್ಬಳ್ಳಿಯಲ್ಲಿ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದವರ ವಿರುದ್ಧದ ಕ್ರಿಮಿನಲ್‌ ಕೇಸುಗಳನ್ನು ಸಚಿವ ಸಂಪುಟ ಸಭೆಯಲ್ಲಿ ಹಿಂಪಡೆದಿರುವುದರ ವಿರುದ್ಧ ಬಿಜೆಪಿ ನಾಯಕರು ತೀವ್ರ ಕಿಡಿ ಕಾರಿದ್ದಾರೆ. ಈ ಬಗ್ಗೆ ಹೋರಾಟ ನಡೆಸುವುದಾಗಿ ಹಾಗೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ :  ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಹಿಂಪಡೆಯಲು ಕಾಂಗ್ರೆಸ್‌ ಸರ್ಕಾರ ನಿರ್ಧರಿಸಿರುವ ಕ್ರಮ ಕಾನೂನುಬಾಹಿರ ಹಾಗೂ ಸಂವಿಧಾನ ವಿರೋಧಿಯಾಗಿದೆ ಎಂದು ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ್ ಆರೋಪಿಸಿದರು.

ನಗರದಲ್ಲಿ ಶನಿವಾರ ಕಾಡಾ ಕಚೇರಿ ಕಟ್ಟಡದಲ್ಲಿ ತಮ್ಮ ಕಚೇರಿ ಉದ್ಘಾಟನಾ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ಹುಬ್ಬಳ್ಳಿ ಗಲಭೆಯ ಕ್ರಿಮಿನಲ್‌ ಪ್ರಕರಣ ಹಿಂಪಡೆಯುವ ಮೂಲಕ ಸರ್ಕಾರ ಕ್ಯಾಬಿನೆಟ್‌ ಸಭೆ ದುರುಪಯೋಗಪಡಿಸಿಕೊಂಡಿದೆ ಎಂದು ದೂರಿದರು.

ದಂಗೆ ಪ್ರಕರಣ, ಹಲವರು ಪೊಲೀಸ್‌ ಠಾಣೆ ಮತ್ತು ಮನೆಗಳ ಮೇಲೆ ದಾಳಿ ಮಾಡಿದ್ದರು. ಪೊಲೀಸರ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿತ್ತು. ಗಂಭೀರವಾದ ಈ ಪ್ರಕರಣ ಹಿಂಪಡೆಯಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವುದು ತಪ್ಪು. ಈ ನಿರ್ಧಾರ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡದೇ ಸಿಎಂ ಸಿದ್ದರಾಮಯ್ಯ ಭಂಡತನ ಪ್ರದರ್ಶಿಸುತ್ತಿದ್ದಾರೆ. ರಾಜ್ಯದ ಜನತೆಯ ಗಮನ ಬೇರೆಡೆಗೆ ಸೆಳೆಯಲು ಈ ರೀತಿ ಮಾಡಲಾಗುತ್ತಿದೆ. ಈ ಹಿಂದೆ ಪಿಎಫ್‌ಐ ಮೇಲಿನ ಪ್ರಕರಣ ಹಿಂಪಡೆಯಲಾಗಿತ್ತು. ಹಾಗಾಗಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದರು.

ಸಾರ್ವಜನಿಕ ಹಿತಾಸಕ್ತಿಗಾಗಿ ನಡೆದ ಹೋರಾಟಗಳಲ್ಲಿ ಭಾಗಿಯಾದವರ ಮೇಲೆ ದಾಖಲಾಗಿದ್ದ ಪ್ರಕರಣವನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಹಿಂಪಡೆಯಲಾಗಿದೆ. ಆದರೆ, ಈ ಪ್ರಕರಣ ಹಿಂದಕ್ಕೆ ಪಡೆಯುವಂತಹದ್ದಲ್ಲ. ಹಿಂಪಡೆಯುವುದಾದರೆ, ಮಹದಾಯಿ ಹೋರಾಟದಲ್ಲಿ ರೈತರ ಮೇಲಿನ ಪ್ರಕರಣ ಏಕೆ ಹಿಂದಕ್ಕೆ ಪಡೆದಿಲ್ಲ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‌ ಸರ್ಕಾರ ಹೇಳುವುದೊಂದು, ಮಾಡುವುದು ಇನ್ನೊಂದು. ದುಷ್ಟರನ್ನು ಸಂಹರಿಸುವುದಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿದೆ. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಕೆಲಸ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೇ ಕೊಡುತ್ತಾರೆ. ಅವರಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್‌ ಸರ್ಕಾರ ಉರುಳಿಸಲು ನಾವೇನೂ ಆಪರೇಷನ್‌ ಕಮಲ ಮಾಡುತ್ತಿಲ್ಲ. ಕಾಂಗ್ರೆಸ್‌ ಸರ್ಕಾರ ಸ್ವಯಂಕೃತ ಅಪರಾಧದಿಂದ ಪತನವಾಗಲಿದೆ. ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ ಎಂದರು.

ಮಹದಾಯಿ ನೀರಾವರಿ ಯೋಜನೆ ಕಾಮಗಾರಿ ವಿಳಂಬವಾಗುತ್ತಿರುವ ಕುರಿತು ಕೇಂದ್ರ ಪರಿಸರ ಸಚಿವರಿಗೆ ಮನವರಿಕೆ ಮಾಡಲಾಗಿದೆ. ಈ ಬಗ್ಗೆ ಕೂಡಲೇ ನಿರ್ಧಾರ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಕಾಮಗಾರಿ ಆರಂಭಿಸಲು ಎಲ್ಲ ಹಂತದಲ್ಲಿಯೂ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದರು.

ಸಂಸದರ ಕಚೇರಿ ಕಾರ್ಯಾರಂಭ:

ನಗರದ ಕಿತ್ತೂರು ಚನ್ನಮ್ಮ ವೃತ್ತದ ಬಳಿಯಿರುವ ಕಾಡಾ ಕಚೇರಿ ಕಟ್ಟಡದ ಮೊದಲನೇ ಮಹಡಿಯಲ್ಲಿ ಸಂಸದ ಜಗದೀಶ ಶೆಟ್ಟರ್ ಅವರ ನೂತನ ಕಚೇರಿ ಉದ್ಘಾಟನೆ ಹಾಗೂ ಪೂಜಾ ಕಾರ್ಯಕ್ರಮ ನೆರವೇರಿಸಿತು. ಈ ವೇಳೆ ಮಾತನಾಡಿದ ಸಂಸದ ಶೆಟ್ಟರ್‌ ಬೆಳಗಾವಿ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ನಿರಂತರವಾಗಿ ಆಲಿಸುವ ಹಿನ್ನೆಲೆಯಲ್ಲಿ ಕಚೇರಿ ಕಾರ್ಯಾರಂಭ ಮಾಡಲಾಗಿದೆ ಎಂದರು.

ಈ‌ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ರಮೇಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್‌, ಮಾಜಿ ಸಂಸದೆ ಮಂಗಲಾ ಅಂಗಡಿ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಮಹಾಪೌರ ಸವಿತಾ ಕಾಂಬಳೆ, ಮಾಜಿ ಶಾಸಕರಾದ ಅನಿಲ ಬೆನಕೆ, ಮಹಾಂತೇಶ ಕವಟಗಿಮಠ, ಸಂಜಯ ಪಾಟೀಲ, ಜಗದೀಶ ಮಟಗುಡ್ಡ, ವಿಶ್ವನಾಥ ಪಾಟೀಲ ಸೇರಿದಂತೆ ಜಿಲ್ಲೆಯ ಪ್ರಮುಖ ನಾಯಕರು, ಪಕ್ಷದ ಪದಾಧಿಕಾರಿಗಳು ನಗರಸೇವಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ