ಬಿ. ಶೇಖರ್ ಗೋಪಿನಾಥಂ
ಕನ್ನಡಪ್ರಭ ವಾರ್ತೆ ಮೈಸೂರುಶ್ವೇತಾಶ್ವ ಮಿಲಟರಿ ಪೊಲೀಸರ ತಂಡದಿಂದ ಬೈಕ್ ಸಾಹಸ, ಅಶ್ವರೋಹಿದಳ ತಂಡದಿಂದ ಟೆಂಟ್ ಪೆಗ್ಗಿಂಗ್, ಡ್ರೋನ್ ಶೋ, ಸಾಂಸ್ಕೃತಿಕ ಕಾರ್ಯಕ್ರಮ, ಪಂಜಿನ ಬೆಳಕಿನ ಚಿತ್ತಾರದ ಕವಾಯತಿನೊಂದಿಗೆ 2024ನೇ ಸಾಲಿನ ಮೈಸೂರು ದಸರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.
ದಸರಾ ಮಹೋತ್ಸವದ ಅಂಗವಾಗಿ ಬನ್ನಿಮಂಟಪದಲ್ಲಿ ಶನಿವಾರ ರಾತ್ರಿ ನಡೆದ ಪಂಜಿನ ಕವಾಯತು (ಟಾರ್ಚ್ ಲೈಟ್ ಪೆರೇಡ್) ಪ್ರದರ್ಶನವು ಆಕರ್ಷಕವಾಗಿ ಮೂಡಿಬಂತು. ನೆರೆದಿದ್ದ ಸಾವಿರಾರು ಜನರು ಬೆಳಕಿನ ವೈಭವವನ್ನು ಕಣ್ಣು ತುಂಬಿಕೊಂಡರು.ಆರಂಭದಲ್ಲಿ ರಾಷ್ಟ್ರಗೀತೆಯನ್ನು ಪೊಲೀಸ್ ಬ್ಯಾಂಡ್ ಸದಸ್ಯರು ನುಡಿಸಿದರು. ನಂತರ ನಾಡಗೀತೆಯನ್ನು ಅನನ್ಯ ಭಟ್ ಹಾಡಲಾಯಿತು. ನಂತರ ನಡೆದ 50 ಹೆಚ್ಚು ಮಕ್ಕಳು ಹಾಗೂ ಇನ್ನಿತರರು ಯೋಗ ನೃತ್ಯ, ಹುಲಿವೇಷ, ಜಾನಪದ ಕಲಾತಂಡಗಳ ನೃತ್ಯವು ಗಮನ ಸೆಳೆಯಿತು.
ಮೈಸೂರಿನ ಅಶ್ವರೋಹಿದಳದ ತಂಡದ ಸಿಬ್ಬಂದಿ ಕುದುರೆಯಲ್ಲಿ ಶರ ವೇಗವಾಗಿ ಆಗಮಿಸಿ ಟೆಂಟ್ ಪೆಗ್ಗಿಂಗ್ ಮಾಡುವ ಮೂಲಕ ನೆರೆದಿದ್ದವರನ್ನು ಕೆಲಕಾಲ ರೋಮಾಂಚನಗೊಳಿಸಿದರು.1500 ಡ್ರೋಣ್ ಶೋ:
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ವತಿಯಿಂದ ನಡೆದ ಡ್ರೋನ್ ಶೋ ಆಕರ್ಷಕವಾಗಿ ಮೂಡಿ ಬಂತು. 1500 ಡ್ರೋನ್ ಗಳಿಂದ ಬಾನಂಗಳದಲ್ಲಿ ಮೂಡಿದ ಚಿತ್ತಾರಗಳನ್ನು ಕಂಡು ಜನ ರೋಮಾಂಚನಗೊಂಡರು. ರಾಷ್ಟ್ರಧ್ವಜ, ಚಂದ್ರಯಾನ, ವಿಶ್ವ ಭೂಪಟ, ಯೋಧ, ಕರ್ನಾಟಕ ಭೂಪಟ, ಅಂಬಾರಿ ಹೊತ್ತ ಆನೆ, ಸುವರ್ಣ ಕರ್ನಾಟಕ ಸಂಭ್ರಮ, ಅರಳಿ ಮರ, ತಿಮಿಂಗಿಲ, ಚಾಮುಂಡೇಶ್ವರಿ ದೇವಿ ಸೇರಿದಂತೆ 15 ಹೆಚ್ಚು ವಿನ್ಯಾಸಗಳು ಡ್ರೋನ್ ಗಳಿಂದ ಮೂಡಿ ಬಂದವು.ಲೇಸರ್ ಶೋ:
ನಂತರ ನಡೆದ ಲೇಸರ್ ಶೋ ಮೂಲಕ ರಾಜ್ಯದ ವೈಭವವನ್ನು ತೋರಿಸಲಾಯಿತು. ಮೈಸೂರು ಅರಮನೆ, ವಿಜಯನಗರದ ಕಲ್ಲಿನ ರಥ, ಶಿಲಾಬಾಲಕಿ, ಸೋಮನಾಥಪುರ ಚೆನ್ನಕೇಶವ ದೇವಾಲಯ, ಶ್ರವಣ ಬೆಳಗೊಳ ಏಕಶಿಲಾ ಗೊಮ್ಮಟೇಶ್ವರ ಮೂರ್ತಿ, ಮಲೆ ಮಹದೇಶ್ವರಸ್ವಾಮಿ ದೇವಸ್ಥಾನ, ಗೋಲಗುಮ್ಮಟ, ಜೋಗ್ ಜಲಪಾತ, ಯಕ್ಷಗಾನ, ಉಳುಮೆ ಮಾಡುತ್ತಿರುವ ರೈತ, ಜ್ಞಾನಪೀಠ ಪುರಸ್ಕೃತ ಸಾಹಿತಿಗಳು, ಸರ್.ಎಂ. ವಿಶ್ವೇಶ್ವರಯ್ಯ, ಡಾ. ರಾಜ್ ಕುಮಾರ್, ಡಾ. ಪುನೀತ್ ರಾಜ್ ಕುಮಾರ್, ವಿಧಾನಸೌಧ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಚಿತ್ರಣವನ್ನು ಲೇಸರ್ ಬೆಳಕಿನಲ್ಲಿ ಮೂಡಿ ಬಂದವು.ಶ್ವೇತಾಶ್ವ ಬೈಕ್ ಸಾಹಸ:
ಇದಾದ ಬಳಿಕ ಮೋಟಾರ್ ಮಿಲಟರಿ ಪೊಲೀಸರ ಶ್ವೇತಾಶ್ವ ತಂಡವು ಮೈಮನ ರೋಮಾಂಚನಗೊಳಿಸುವ ಬೈಕ್ ಸಾಹಸವನ್ನು ಪ್ರದರ್ಶಿಸಿದರು. ಮೂರು ಬೈಕ್ ಗಳಲ್ಲಿ ಆಗಮಿಸಿದ ಸೈನಿಕರು ಬೆಂಕಿಯಲ್ಲಿ ಹಾರಿದರು. ಹತ್ತಾರು ಜನನ್ನು ಒಟ್ಟಿಗೆ ಮಲಗಿಸಿ ಅವರ ಮೇಲೆ ಬೈಕ್ ಹಾರಿಸುವ ಮೂಲಕ ಉಸಿರು ಬಿಗಿ ಹಿಡಿದುಕೊಳ್ಳುವಂತೆ ಮಾಡಿದರು. ಒಂದೇ ಬೈಕಿನಲ್ಲಿ ಹಲವರು ಹತ್ತಿ ಸವಾರಿ ಮಾಡಿದರು. ಟ್ಯೂಬ್ ಲೈಟ್, ಇಟ್ಟಿಗೆ ಮಾದರಿಯನ್ನು ಇರಿಸಿ ಬೈಕ್ ಜಂಪ್ ಮಾಡಿ ಸಾಹಸಮಯ ಪ್ರದರ್ಶನ ತೋರಿದರು. ಮಧ್ಯೆ ಮಧ್ಯೆ ಜೋಕರ್ ಗಳ ಹಾಸ್ಯವು ಕಚಗುಳಿ ಮೂಡಿಸಿತು.ಪಂಜಿನ ಕವಾಯತು:
ಅಂತಿಮವಾಗಿ ಕರ್ನಾಟಕ ಪೊಲೀಸ್ ಇಲಾಖೆಯ 307 ಮಂದಿ ಸಿಬ್ಬಂದಿ ಆಕರ್ಷಕವಾಗಿ ಪಂಜಿನ ಕವಾಯತು ಪ್ರಸ್ತುತಪಡಿಸಿದರು. ಎಲ್ಲಾ ಪೊಲೀಸರು ಬಿಳಿ ಸಮವಸ್ತ್ರದೊಂದಿಗೆ ಬನ್ನಿಮಂಟಪ ಮೈದಾನದಕ್ಕೆ ಪಂಜಿನ ಕವಾಯತುನೊಂದಿಗೆ ಪ್ರವೇಶಿಸಿ, ಸುಸ್ವಾಗತ, ಕರ್ನಾಟಕ ಪೊಲೀಸ್ ಆಲ್ ವೇಯ್ಸ್ ವಿತ್ ಯು, ಜೈ ಚಾಮುಂಡಿ, ಹ್ಯಾಪಿ ದಸರಾ, ಸುವರ್ಣ ಕರ್ನಾಟಕ- 50, ಕನ್ನಡವೇ ನಿತ್ಯ, ಜೈ ಹಿಂದ್, ಥ್ಯಾಂಕ್ ಯು ಎಂಬ ಪದಗಳನ್ನು ಕನ್ನಡ ಮತ್ತು ಇಂಗ್ಲಿಷ್ ಅಕ್ಷರಗಳಲ್ಲಿ ಪಂಜಿನ ಮೂಲಕ ಮೂಡಿಸಿದರು.ರಾಜ್ಯಪಾಲರು ಭಾಗಿ:
ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರು ತೆರೆದ ಜೀಪಿನಲ್ಲಿ ತೆರಳಿ ವಿವಿಧ ಪೊಲೀಸ್ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಡಾ.ಎಂ.ಸಿ. ಸುಧಾಕರ್, ಶಾಸಕರಾದ ತನ್ವೀರ್ ಸೇಠ್, ಎ.ಆರ್. ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮೊದಲಾದವರು ಭಾಗವಹಿಸಿದ್ದರು.