ಮೊಳಕಾಲ್ಮುರು : ತಾಲೂಕಿನಲ್ಲಿ ಕಳೆದೆರೆಡು ದಿನಗಳಿಂದ ಸುರಿದ ಮಳೆಯಿಂದಾಗಿ ಕೆರೆಕಟ್ಟೆಗಳು ಸಂಪೂರ್ಣವಾಗಿ ಭರ್ತಿಯಾಗಿ ಕೃಷಿ ಜಮೀನುಗಳಿಗೆ ನೀರು ನುಗ್ಗಿ ಭಾರಿ ಆವಾಂತರ ಸೃಷ್ಟಿ ಮಾಡಿದೆ.
ತಾಲೂಕಿನ ದೇವಸಮುದ್ರ ಹೋಬಳಿಗೆ ಹೋಲಿಕೆ ಮಾಡಿಕೊಂಡಲ್ಲಿ ಕಸಬಾ ಹೋಬಳಿಯ ರಾಯಪುರ ಗ್ರಾಮದಲ್ಲಿ ದಾಖಲೆಯ 104 ಮಿ.ಮೀ ಮಳೆ ಸುರಿದಿದ್ದು, ಗುಂಡ್ಲೂರು ಮತ್ತು ತುಪ್ಪದಕ್ಕನ ಹಳ್ಳಿ, ಕೋನಸಗರ, ಬಿಜಿಕೆರೆ, ದುಪ್ಪಿಕೆರೆ ಸಂಪೂರ್ಣವಾಗಿ ಭರ್ತಿಯಾಗಿ ಕೃಷಿ ಜಮೀನುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಗಳ ನಷ್ಟ ಸಂಭವಿದೆ.
ಪಟ್ಟಣದಲ್ಲಿ ಕೂಗೆ ಗುಡ್ಡ ಕೆರೆ ತುಂಬಿ ಹರಿಯುತ್ತಿದ್ದು, ನೀರು ದವಲಪ್ಪನ ಕುಂಟೆ ಮಾರ್ಗವಾಗಿ ತುಪ್ಪದಕ್ಕನ ಹಳ್ಳಿ ಕೆರೆಗೆ ಸೇರುತ್ತಿದೆ. ಕೋತಲಗೊಂದಿ ಕೆರೆ ಭರ್ತಿಯಾಗಿ, ಹಾನಗಲ್ ಮಾರ್ಗವಾಗಿ ಹರಿಯುತ್ತಿದೆ. ಚರಂಡಿ ನೀರು ಹರಿದು ಪಿ.ಟಿ. ಹಟ್ಟಿ ಜಮೀನುಗಳಿಗೆ ಮತ್ತು ಸ್ಥಳೀಯ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ
ದೇವಸಮುದ್ರ ಹಾಗೂ ಕಸಬಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ 8.2 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, ಮೆಕ್ಕೆಜೋಳ, ತೊಗರಿ, ಹತ್ತಿ ಬೆಳೆಗೆ ಹಾನಿಯಾಗಿದೆ. ಕಸಬಾ ಹೋಬಳಿಯ ಗುಂಡ್ಲೂರು, ನೆರ್ಲ ಹಳ್ಳಿ ಭಾಗದಲ್ಲಿ 4 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಕಸಬಾ ಹೋಬಳಿಯ ನೆರ್ಲ ಹಳ್ಳಿ, ಮಠದ ಜೋಗಿ ಹಳ್ಳಿ, ಚಿಕ್ಕೋಬನ ಹಳ್ಳಿ, ದೇವಸಮುದ್ರ ಹೋಬಳಿಯ ಮೇಲಿನ ಕಣಿವೆ, ತಿಮ್ಲಾಪುರ ಗ್ರಾಮ ಸೇರಿದಂತೆ ಒಟ್ಟು 5 ಮನೆಗಳು ಭಾಗಶಃ ಹಾನಿಯಾಗಿದೆ.
ದೇವಸಮುದ್ರ ಭಾಗದ ಸಿದ್ದಾಪುರ, ಜಾಗಿರ ಬುದ್ದೇನಹಳ್ಳಿ, ಗೌರಸಮುದ್ರ ಚಿಕ್ಕನಹಳ್ಳಿ ಕೆರೆಗಳು ಭರ್ತಿಯಾಗಿದ್ದು, ಮಳೆ ಈ ಭಾಗದ ರೈತರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.
ಬಯಲು ಸೀಮೆಯ ಜನರ ಜೀವನಾಡಿ ರಂಗಯ್ಯನ ದುರ್ಗ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಒಳ ಹರಿವಿನ ಪ್ರಮಾಣ ಹೆಚ್ಚಿರುವ ಪರಿಣಾಮವಾಗಿ, ನಾಲ್ಕು ಕ್ರೇಸ್ ಓಪನ್ ಮಾಡಿದ್ದು, ಅಪಾರ ಪ್ರಮಾಣದ ನೀರು ಚಿನ್ನಹಗರಿ ನದಿಗೆ ಬಿಡಲಾಗುತ್ತಿದೆ. ಜಲಾಶಯದ ಸಮೀಪದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಬಿಗಿ ಭದ್ರತೆ ಕೈಗೊಳ್ಳಗಿತ್ತು. ನೀರು ಬರುತ್ತಿರುವ ಸಮೀಪದಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಜಲಾಶಯದಿಂದ ನೀರು ಬಿಟ್ಟಿದ್ದರಿಂದಾಗಿ ಜನರು ಭಾರಿ ಸಂಖ್ಯೆಯಲ್ಲಿ ಜಲಾಶಯಕ್ಕೆ ಧಾವಿಸುತ್ತಿದ್ದಾರೆ. ಇದರಿಂದಾಗಿ ಜಲಾಶಯದ ಮುಖ್ಯ ರಸ್ತೆಯಲ್ಲಿ ವಾಹನ ಸವಾರರು ಪರದಾಡುವಂತಾಗಿತ್ತು. ನೀರಿನಲ್ಲಿ ಸಾಗಿದ ಕೆಲ ದ್ವಿ ಚಕ್ರ ವಾಹನಗಳು ಕೆಟ್ಟು ಮಧ್ಯೆದಲ್ಲಿ ನಿಂತ ಪ್ರಸಂಗವೂ ನಡೆಯಿತು. ಜಲಾಶಯಕ್ಕೆ ಸಾಗುವ ದಾರಿಯಲ್ಲಿ ವಾಹನ ಸಂಚಾರ ದಟ್ಟಣೆ ಕೂಡಿತ್ತು.