ಕುಂದಾಪುರ: ಕೊರೋನಾ ಬಳಿಕ ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದರೂ, ಸಮಾಜದ ಸಂವೇದನೆ ಮತ್ತು ಮಾನವೀಯತೆ ಕುಂದುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅಂಕಣಕಾರ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಅಭಿಪ್ರಾಯಪಟ್ಟಿದ್ದಾರೆ.ಕುಂಭಾಶಿಯ ಆನೆಗುಡ್ಡೆಯ ಶ್ರೀ ವಿನಾಯಕ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಘಟಕ ಆಯೋಜಿಸಿದ್ದ ಕುಂದಾಪುರ ತಾಲೂಕಿನ 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಕಳೆದ ಐದು ವರ್ಷಗಳಲ್ಲಿ ಕೊರೋನಾ ಕುರಿತು ಲಕ್ಷಾಂತರ ಗಂಟೆಗಳ ಟಿವಿ ಪ್ರಸಾರ ಮತ್ತು ಸಾವಿರಾರು ಲೇಖನಗಳು ಪ್ರಕಟವಾಗಿವೆ. ಆದರೆ ಈ ಅವಧಿಯಲ್ಲಿ ನಮ್ಮ ಮನಸ್ಸು ಎಷ್ಟು ಬದಲಾಗಿದೆ ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ. ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ ಜ್ಞಾನ ನೀಡುವುದಲ್ಲ. ಸಂವೇದನೆ, ಬಹುತ್ವ, ಭಾರತೀಯತೆ, ಮಾನವೀಯತೆ ಹಾಗೂ ಬಂಧುತ್ವದ ಮೌಲ್ಯಗಳನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ಹೇಳಿದರು.ಸಮ್ಮೇಳನಾಧ್ಯಕ್ಷ ಯು. ಸುರೇಂದ್ರ ಶೆಣೈ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ನೆರವಾಗಿದ್ದರೂ ಅವುಗಳನ್ನು ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಜೋಡಿಸಿದ್ದರೆ ಸರ್ಕಾರಿ ಕನ್ನಡ ಶಾಲೆಗಳಿಗೆ ಹೊಸ ಚೈತನ್ಯ ದೊರೆಯುತ್ತಿತ್ತು ಎಂದು ಅಭಿಪ್ರಾಯಪಟ್ಟರು.ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ಕನ್ನಡ ಧ್ವಜವನ್ನು ಸಮ್ಮೇಳನಾಧ್ಯಕ್ಷರಿಗೆ ಹಸ್ತಾಂತರಿಸಿ, ಕುಂದಾಪ್ರ ಕನ್ನಡವನ್ನು ಮಕ್ಕಳಿಗೆ ಮನೆಯಲ್ಲೇ ಕಲಿಸುವ ಸಂಸ್ಕೃತಿ ಬೆಳೆಸಬೇಕಿದೆ. ಅಂಕಗಳ ಸ್ಪರ್ಧೆ ಮಕ್ಕಳನ್ನು ಮೌಲ್ಯಗಳಿಂದ ದೂರ ಮಾಡುತ್ತಿರುವುದರಿಂದ ಮಾತೃ ಭಾಷೆ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.
ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಕಾರ್ಯಾಧ್ಯಕ್ಷ ಕೆ.ಆರ್. ನಾಯ್ಕ್, ಕಾರ್ಯದರ್ಶಿಗಳಾದ ದಿನಕರ ಆರ್. ಶೆಟ್ಟಿ ಮತ್ತು ಅಕ್ಷತಾ ಗಿರೀಶ್, ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಸ್ತಾಪಿಸಿದರು. ತಾಲೂಕು ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಸ್ವಾಗತಿಸಿದರು. ತೆಂಕನಿಡಿಯೂರು ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕೋಶಾಧಿಕಾರಿ ಕೆ.ಎಸ್. ಮಂಜುನಾಥ ವಂದಿಸಿದರು.ಸಮ್ಮೇಳನದಲ್ಲಿ ''''''''ಚೋಲಿ ಕೆ ಪೀಚೆ'''''''' ಹಾಡಿಗೆ ನೃತ್ಯ!: ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮವೊಂದು ವಿವಾದಕ್ಕೆ ಕಾರಣವಾಗಿದೆ. ವೇದಿಕೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಹಿಂದಿಯ ‘ಚೋಲಿ ಕೆ ಪೀಚೆ ಕ್ಯಾ ಹೈ...’ ಹಾಡಿಗೆ ನೃತ್ಯ ಪ್ರದರ್ಶಿಸಿರುವುದು ಕನ್ನಡಾಭಿಮಾನಿಗಳ ತೀವ್ರ ಆಕ್ರೋಶಕ್ಕೆ ವ್ಯಕ್ತವಾಗಿದೆ.ವಿಶ್ವಂಭರ ಪುರಸ್ಕಾರ ಪ್ರದಾನ ಕಾರ್ಯಕ್ರಮದ ಬಳಿಕ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಈ ಹಿಂದಿ ಚಿತ್ರದ ಹಾಡಿಗೆ ನೃತ್ಯ ಪ್ರದರ್ಶಿಸಿದ್ದು, ಕಾರ್ಯಕ್ರಮದ ನೇರಪ್ರಸಾರದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಸಾಹಿತ್ಯ ಸಮ್ಮೇಳನದಂತಹ ಕನ್ನಡದ ಪ್ರತಿಷ್ಠಿತ ವೇದಿಕೆಯಲ್ಲಿ ಕನ್ನಡ ಹಾಡುಗಳಿಗೆ ಆದ್ಯತೆ ನೀಡುವ ಬದಲು ವಿವಾದಾತ್ಮಕ ಹಿಂದಿ ಹಾಡಿಗೆ ಅವಕಾಶ ನೀಡಿರುವುದನ್ನು ಕನ್ನಡಾಭಿಮಾನಿಗಳು ಪ್ರಶ್ನಿಸಿದ್ದಾರೆ.