ಮಹಿಳೆಯರ ಮನದಾಳದ ಧ್ವನಿ ಜಾನಪದ: ವೀಣಾ ಪಾಟೀಲ್

KannadaprabhaNewsNetwork |  
Published : Oct 19, 2024, 12:35 AM IST
18ಕೆಪಿಎಲ್23 ಅಳವಂಡಿಯಲ್ಲಿ ಕಸಾಪ ವತಿಯಿಂದ ನಡೆದ ಉಪನ್ಯಾಸ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಪ್ರಮುಖರಾದ ಶಂಕ್ರಮ್ಮ, ರಾಮಚಂದ್ರಗೌಡ, ವೀಣಾ, ನೀಲಪ್ಪ, ಶಾರಮ್ಮ, ಬಿ.ಎನ್.ಹೊರಪೇಟಿ, ಜುನಸಾಬ, ಜಗದೀಶ್ವರಿ, ಜಯಶ್ರೀ ಹಾಗೂ ಇತರರು ಇದ್ದರು. | Kannada Prabha

ಸಾರಾಂಶ

ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ಶುಕ್ರವಾರ ನಡೆದ ಕನ್ನಡ ಸಾಹಿತ್ಯದಲ್ಲಿ ಜಾನಪದ ಹಾಗೂ ಮಹಿಳೆಯರ ಪಾತ್ರ ಕುರಿತು ಉಪನ್ಯಾಸ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರು ಹಾಕುವ ಮೂಲಕ ಸಾಹಿತಿ ವೀಣಾ ಪಾಟೀಲ್‌ ಚಾಲನೆ ನೀಡಿದರು.

ಕೊಪ್ಪಳ: ಪ್ರಾಚೀನ ಕಾಲದಲ್ಲಿ ಮಹಿಳೆಯರ ಮನದಾಳದ ಧ್ವನಿಯಿಂದ ಜಾನಪದ ಹುಟ್ಟಿದೆ. ಅಕ್ಷರ ರೂಪವಿಲ್ಲದ ಜನಪದ ಸಾಹಿತ್ಯಕ್ಕೆ ಪ್ರಚಲಿತ ದಿನಗಳಲ್ಲಿ ಬಲ ಸಿಕ್ಕು ಮುಖ್ಯವಾಹಿನಿಗೆ ಪರಿಚಯವಾಗಿ ಉಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಾಹಿತಿ ವೀಣಾ ಪಾಟೀಲ ಹೇಳಿದರು.

ತಾಲೂಕಿನ ಅಳವಂಡಿ ಗ್ರಾಮದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕಸಾಪ ಅಳವಂಡಿ ಹೋಬಳಿ ಘಟಕ ಹಾಗೂ ಶ್ರೀಬಾಂಧವ್ಯ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟದ ವತಿಯಿಂದ ಶುಕ್ರವಾರ ನಡೆದ ಕನ್ನಡ ಸಾಹಿತ್ಯದಲ್ಲಿ ಜಾನಪದ ಹಾಗೂ ಮಹಿಳೆಯರ ಪಾತ್ರ ಕುರಿತು ಉಪನ್ಯಾಸ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಜಾನಪದ ಕಲೆ ನಮ್ಮ ಜೀವನದ ಒಂದು ಭಾಗವಾಗಿದೆ. ಕಲೆ ಬಾಯಿಂದ ಬಾಯಿಗೆ ಪಸರಿಸಿದೆ. ಹೆಚ್ಚಾಗಿ ಅನಕ್ಷರಸ್ಥರು ಇದರಲ್ಲಿ ಸಾಧನೆ ಮಾಡಿದ್ದಾರೆ. ಜನಪದ ಕಲೆಗಳು ನಮ್ಮ ಆಚಾರ-ವಿಚಾರ, ಸಂಸ್ಕೃತಿಗಳನ್ನು ಮುಂದಿನ ತಲೆಮಾರಿವನರಿಗೆ ಅಂದರೆ ತಲೆಮಾರಿನಿಂದ ತಲೆಮಾರಿನ ವರೆಗೆ ಹೊತ್ತು ಸಾಗುತ್ತವೆ. ಈ ಕಲೆ ದುಡಿದು ದಣಿದ ದೇಹಗಳಿಗೆ ಉಲ್ಲಾಸ, ಉತ್ಸಾಹ ನೀಡುತ್ತವೆ. ಜತೆಗೆ ಆಯಾಸ ಕಡಿಮೆ ಮಾಡಿ ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಕಾರಣ ಜನಪದ ಕಲೆಯನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

ಶಿಕ್ಷಕ ನೀಲಪ್ಪ ಹಕ್ಕಂಡಿ ಮಾತನಾಡಿ, ಕನ್ನಡ ಭಾಷೆ ವೈಜ್ಞಾನಿಕ ತಳಹದಿಯ ಮೇಲೆ ರೂಪಿತವಾಗಿದೆ. ಮಾತೃ ಭಾಷೆ ಬಳಕೆ ಬಗ್ಗೆ ಹಿಂಜರಿಕೆ ಬೇಡ. ಕನ್ನಡ ಹೃದಯದ ಭಾಷೆಯಾಗಿದೆ. ಕಾರಣ ಕನ್ನಡ ಉಳಿಸಿ ಬೆಳೆಸುವ ಕಾರ್ಯ ಆಗಬೇಕು. ಅರಿವಿನ ಜೋಳಿಗೆಯೊಂದಿಗೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಕನ್ನಡವೆಂದರೆ ಬರಿ ಪದವಲ್ಲ, ಅದು ಶಬ್ದಕೋಶದ ಮಹಾನ್ ನಿಘಂಟು. ಭಾಷೆಯ ಬಗ್ಗೆ ಗೌರವವಿರಲಿ. ಜಾನಪದ ಸಾಹಿತ್ಯದ ಮೂಲಕ ಬದುಕು ರೂಪಿಸಿಕೊಳ್ಳಬೇಕು. ಮನಸ್ಸುಗಳನ್ನು ಒಗ್ಗೂಡಿಸುವ ಶಕ್ತಿ ಜಾನಪದಕ್ಕಿದೆ ಎಂದರು,

ಸಾಹಿತಿ ಬಿ.ಎನ್. ಹೊರಪೇಟಿ, ಕಸಾಪ ತಾಲೂಕು ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಉಪಾಧ್ಯಕ್ಷೆ ಶಾರಮ್ಮ ಇಳಿಗೇರ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಜಗದೀಶ್ವರಿ ಜಾಣಗಾರ, ಕಾರ್ಯದರ್ಶಿ ಜಯಶ್ರೀ ಹಂಚಿನಾಳ, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಸುರೇಶ ಸಂಗರಡ್ಡಿ, ಪ್ರಮುಖರಾದ ಪ್ರತಿಭಾ ಮೇಟಿ, ಜುನಸಾಬ ವಡ್ಡಟ್ಟಿ, ಸಂಜೀವಿನಿ ಒಕ್ಕೂಟದ ಸುನೀಲ ಹಾಗೂ ಸಂಘದ ಮಹಿಳೆಯರು ಇತರರು ಇದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''