‘ಆಶ್ರಯ’ ಯೋಜನೆಯ ಮನೆ ಶೀಘ್ರ ಹಂಚಿಕೆಗೆ ರಾಷ್ಟ್ರಭಕ್ತರ ಬಳಗ ಆಗ್ರಹ

KannadaprabhaNewsNetwork | Published : Jul 19, 2024 12:52 AM

ಸಾರಾಂಶ

ಶಿವಮೊಗ್ಗ ನಗರದ ಹೊರವಲಯದಲ್ಲಿ 9 ವರ್ಷಗಳ ಹಿಂದೆ ನಿರ್ಮಾಣಕ್ಕೆ ಚಾಲನೆ ನೀಡಿದ ಆಶ್ರಯ ಯೋಜನೆಯ ಮನೆಗಳನ್ನು ಫಲಾನುಭವಿಗಳಿಗೆ ತಕ್ಷಣ ನೀಡು ವಂತೆ ಸರ್ಕಾರವನ್ನು ಆಗ್ರಹಿಸಿ ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್‌. ಈಶ್ವರಪ್ಪ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಗೋಪಿ ಶೆಟ್ಟಿ ಮತ್ತು ಗೋವಿಂದಾಪುರದಲ್ಲಿ ಸುಮಾರು 9 ವರ್ಷಗಳ ಹಿಂದೆ ರೂಪಿಸಲಾದ ಆಶ್ರಯ ಯೋಜನೆಯನ್ವಯ ಫಲಾನುಭವಿಗಳಿಗೆ ಮನೆಯನ್ನು ನೀಡಬೇಕು. ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಈ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್‌.ಈಶ್ವರಪ್ಪ ಗುಡುಗಿದರು.

ಅಪೂರ್ಣಗೊಂಡ ಆಶ್ರಯ ವಸತಿ ಯೋಜನೆಯ ಮನೆಗಳನ್ನು ಫಲಾನುಭವಿಗಳಿಗೆ ಶೀಘ್ರವೇ ಹಂಚಿಕೆಯಾಗುವಂತೆ ಸರ್ಕಾರವನ್ನು ಒತ್ತಾಯಿಸಿ ಗುರುವಾರ ಆರಂಭಿಸಲಾದ ಹೋರಾಟದ ಜಾಥಾಕ್ಕೆ ರಾಮಣ್ಣ ಶೆಟ್ಟಿ ಪಾರ್ಕ್‌ ನಲ್ಲಿ ಚಾಲನೆ ನೀಡಿ ಮಾತನಾಡಿದರು.

ಸರ್ಕಾರದ ನೀತಿಯಿಂದಾಗಿ ತಾಳಿ ಮಾರಿ ಮನೆಗಾಗಿ ಹಣ ಕಟ್ಟಿದ ಜನರು ಕಂಗಾಲಾಗಿದ್ದಾರೆ. ಮನೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಮನೆ ಸಿಗುತ್ತದೆ ಯೋ ಇಲ್ಲವೋ ಎಂದು ಆತಂಕದಿಂದ ಕೆಲವರು ಕಟ್ಟಿದ ಹಣ ವಾಪಸ್ಸು ನೀಡಿ ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಹಣ ಕಟ್ಟಿದವರು ಯಾವ ಕಾರಣಕ್ಕೂ ಹಣ ವಾಪಸ್ಸು ಪಡೆಯಬೇಡಿ ಎಂದು ಮನವಿ ಮಾಡಿದರು.

ಫಲಾನುಭವಿಗಳು ನಿರಾಶೆಯಾಗುವುದು ಬೇಡ. ರಾಷ್ಟ್ರಭಕ್ತರ ಬಳಗ ನಿಮ್ಮ ಜೊತೆಗಿದೆ. ನಿಮ್ಮ ಪರವಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ನಿಮಗೆ ಮನೆ ಕೊಡಿಸುವ ತನಕ ನಾವು ವಿರಮಿಸುವುದಿಲ್ಲ ಎಂದು ಭರವಸೆ ನೀಡಿದರು.

ಇದೇ ವೇಳೆಯಲ್ಲಿ ಮಹಾನಗರ ಪಾಲಿಕೆಗೆ ಶೀಘ್ರವೇ ಚುನಾವಣೆಯಾಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಾಲಿಕೆಯ ಮಾಜಿ ಸದಸ್ಯ ಈ. ವಿಶ್ವಾಸ್, ಪಾಲಿಕೆಯ ಮಾಜಿ ಉಪ ಮೇಯರ್ ಗನ್ನಿ ಶಂಕರ್, ಮಾಜಿ ಮೇಯರ್ ಸುವರ್ಣ ಶಂಕರ್, ನಗರಸಭೆಯ ಮಾಜಿ ಅಧ್ಯಕ್ಷ ಎಂ. ಶಂಕರ್, ಬಾಲು, ಕಾಚಿನಕಟ್ಟೆ ಸತ್ಯನಾರಾಯಣ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಮಹಾಲಿಂಗಶಾಸ್ತ್ರಿ, ಮೋಹನ್, ನಾಗರಾಜ್, ವಾಗೀಶ್, ಶ್ರೀಕಾಂತ್, ಜಾಧವ್ ಸೇರಿದಂತೆ ಮತ್ತಿತರರು ಇದ್ದರು.

ಪ್ರತಿಭಟನೆಯು ರಾಮಣ್ಣ ಶ್ರೇಷ್ಟಿ ಪಾರ್ಕ್‌ನಿಂದ ಆರಂಭಗೊಂಡು ಗಾಂಧಿ ಬಜಾರ್‌, ನೆಹರು ರಸ್ತೆ ಮಾರ್ಗವಾಗಿ ಶೀನಪ್ಪ ಶೆಟ್ಟಿ ವೃತ್ತದಲ್ಲಿ ಕೊನೆಯಾಯಿತು. ಈ ವೃತ್ತದಲ್ಲಿ ಸಭೆ ನಡೆಸಲಾಯಿತು.9 ವರ್ಷಗಳೇ ಆಯ್ತು, ಇನ್ಯಾವಾಗ?

ಗೋಪಿ ಶೆಟ್ಟಿ ಮತ್ತು ಗೋವಿಂದಾಪುರದಲ್ಲಿ ಸುಮಾರು 9 ವರ್ಷಗಳ ಹಿಂದೆಯೇ ಈ ಆಶ್ರಯ ಯೋಜನೆಯನ್ನು ರೂಪುಗೊಳಿಸಲಾಗಿತ್ತು. ಮೂರು ವರ್ಷಗಳಲ್ಲಿ ಮನೆಯನ್ನು ಹಂಚಿಕೆ ಮಾಡುವುದಾಗಿ ಆಗ ಹೇಳಲಾಗಿತ್ತು. ಆದರೆ ಇದುವರೆಗೂ ಮನೆ ಹಂಚಿಕೆಯಾಗಿಲ್ಲ. ಮನೆಗಾಗಿ ತಾಳಿ ಮಾರಿ, ಸಾಲ ಸೋಲ ಮಾಡಿ ದುಬಾರಿ ಬಡ್ಡಿ ಕಟ್ಟುತ್ತಿರುವ ಜನರು ಕಂಗಾಲಾಗಿದ್ದಾರೆ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ದೂರಿದರು.ಕೂಡಲೇ ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕು. ಈಗಾಗಲೇ ಮುಗಂಡ ಹಣ ಕೊಟ್ಟಿರುವವರಿಗೆ ಉಳಿದ ಹಣ ಪಾವತಿಸಲು ಬ್ಯಾಂಕ್ ಸೌಲಭ್ಯ ಒದಗಿಸಬೇಕು. ಅಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಬಸ್ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಪಡಿಸಿದರು.

Share this article