ಜಿಲ್ಲಾಧಿಕಾರಿಗಳ ಕಚೇರಿ ಶಿರಸ್ತೇದಾರ್‌ಗೆ ಮನವಿ ಸಲ್ಲಿಕೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಮೀನುಗಳಲ್ಲಿ ಚಿರತೆಗಳು ಕಾಣಿಸಿಕೊಂಡು ಕೃಷಿ ಚಟುವಟಿಕೆಗೆ ತೀವ್ರ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಚಿರತೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ತಾಲೂಕಿನ ಕರ್ತಿಕೆರೆ, ಮಲ್ಲೇದೇವರಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಶಿರಸ್ತೇದಾರ್ ಹೇಮಂತ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಕನ್ನೇನಹಳ್ಳಿ, ಬಂಡಿಹಳ್ಳಿ, ಕರ್ತಿಕೆರೆ, ಮಲ್ಲೇದೇವರಹಳ್ಳಿ ಹಾಗೂ ಹಿರೇಮಗಳೂರು ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಚಿರತೆಗಳ ಓಡಾಟದಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಎಂದರು. ಕೃಷಿ ಚಟುವಟಿಕೆಗೆ ತೆರಳುವ ರೈತಾಪಿ ವರ್ಗ ಚಿರತೆಯಿಂದ ಕಾಯಕ ಕೈಬಿಟ್ಟಿದ್ದಾರೆ. ಅಲ್ಲದೇ ದನಕರುಗಳಿಗೆ ಮೇವು, ಭೂಮಿ ಬೀಜ ಬಿತ್ತುವುದು, ಬೆಳೆಗಳಿಗೆ ಔಷಧಿ ಸಿಂಪಡಣೆ ಇನ್ನಿತರೆ ಕೃಷಿ ಚಟುವಟಿಕೆಯಿಂದ ಜೀವನ ಸಾಗಿಸುವವರಿಗೆ ಕಳೆದೆರಡು ದಿನಗಳಿಂದ ಚಿರತೆ ಕಾಟದಿಂದ ಕೆಲಸ ಸ್ಥಗಿತಗೊಳಿಸಿ ಗಾಬರಿಗೊಂಡಿದ್ದಾರೆ ಎಂದು ಹೇಳಿದರು.ಈ ಸಂಬಂಧ ಅರಣ್ಯ ಇಲಾಖೆಯವರು ಸ್ಥಳಕ್ಕಾಗಮಿಸಿ ಪಟಾಕಿ ಸಿಡಿಸಿದ್ದಾರೆ ಹೊರತು ಚಿರತೆಗಳು ಸಂಚರಿಸಿದ ಸ್ಥಳಿಗಳಿಗೆ ಭೇಟಿ ನೀಡಿಲ್ಲ. ಎತ್ತರದ ಮರಗಳಲ್ಲಿ ವೀಕ್ಷಣೆ ನಡೆಸಿಲ್ಲ. ಹೀಗಾಗಿ ಜಿಲ್ಲಾಡಳಿತ ಗ್ರಾಮಸ್ಥರ ಹಿತದೃಷ್ಟಿಯಿಂದ ಹಾಗೂ ಕೃಷಿ ಚಟುವಟಿಕೆ ಪೂರಕವಾಗಿ ಸಾಗಲು ಕಟ್ಟುನಿಟ್ಟಿನ ಕ್ರಮ ಕೈ ಗೊಳ್ಳಬೇಕು ಎಂದರು.ಜಿಲ್ಲಾಡಳಿತ ಚಿರತೆಗಳ ಹಾವಳಿ ತಪ್ಪಿಸಲು ಸಲುವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಗ್ರಾಮಸ್ಥರ ಆತಂಕ ತಿಳಿಗೊಳಿಸಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮಾಧ್ಯಮ ಸಹ ಪ್ರಮುಖ್ ಕೇಶವಮೂರ್ತಿ, ರೈತ ಮೋರ್ಚಾ ಉಪಾಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಧನಂಜಯ, ರೈತರಾದ ಎಸ್.ಬಸವರಾಜ್, ಲೋಕೇಶ್, ಶಿವಕುಮಾರ್, ರವಿಕುಮಾರ್, ರಾಜಣ್ಣ, ದೇವರಾಜ್ ಹಾಜರಿದ್ದರು.
23 ಕೆಸಿಕೆಎಂ 3ಚಿಕ್ಕಮಗಳೂರು ತಾಲೂಕಿನ ಕರ್ತಿಕೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಓಡಾಡುತ್ತಿರುವ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರ್ ಹೇಮಂತ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.