ಗದಗ: ಶ್ರಮ ಜೀವಿಗಳು ಮತ್ತು ಅಸಂಘಟಿತ ಕಾರ್ಮಿಕರ ಸಮಗ್ರ ಏಳ್ಗೆಗಾಗಿ ನಮ್ಮ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಿದ್ದು ಅವುಗಳ ಮೂಲಕ ಶ್ರಮಿಕರ ಬದುಕಿನ ಗುಣಮಟ್ಟ ಎತ್ತರಿಸುವ ಪ್ರಾಮಾಣಿಕ ಪ್ರಯತ್ನವನ್ನು ನಮ್ಮ ಇಲಾಖೆ ಮಾಡುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಅವರು ಗದಗ ವಿವೇಕಾನಂದ ಸಭಾಂಗಣದಲ್ಲಿ ಶುಕ್ರವಾರ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಪಂ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ 91 ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಗುರುತಿಸಲಾಗಿದ್ದು, 30ರಿಂದ 40 ಲಕ್ಷ ಕಾರ್ಮಿಕರು ಒಳಗೊಂಡಿದ್ದು, ಈ ಕಾರ್ಮಿಕರನ್ನು ಉಚಿತವಾಗಿ ನೋಂದಾಯಿಸಿ ಸ್ಮಾರ್ಟ್ ಕಾರ್ಡಗಳನ್ನು ನೀಡಲಾಗುತ್ತಿದೆ ಎಂದರು.ಅಪಘಾತಗಳಿಂದ 18ರಿಂದ 45 ವರ್ಷ ವಯೋಮಾನದ ಒಳಗಿನ ಜನರೇ ಹೆಚ್ಚಾಗಿ ಮರಣ ಹೊಂದುತ್ತಿದ್ದಾರೆ. ವಾಹನ ಸವಾರರ ಸುರಕ್ಷತೆಗಾಗಿ ಹೆಲ್ಮೆಟ್ ಕಡ್ಡಾಯಗೊಳಿಸಬೇಕು ಅಲ್ಲದೇ ಸಂಚಾರಿ ನಿಯಮಗಳ ಪಾಲನೆಯಾಗಬೇಕು ಆ ಮೂಲಕ ಹೆಚ್ಚಾಗಿ ದುಡಿವ ವರ್ಗದ ಜೀವಹಾನಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದರು. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡಜನರ ಬದುಕನ್ನು ಬಂಗಾರವಾಗಿಸಿವೆ. 500 ಕೋಟಿ ಹೆಣ್ಣು ಮಕ್ಕಳು ಶಕ್ತಿ ಯೋಜನೆ ಫಲಾನುಭವಿಗಳಾಗಿದ್ದಾರೆ. ಸರ್ಕಾರದಿಂದ ಬಡಜನರ ಶ್ರೇಯೋಭಿವೃದ್ಧಿಗೆ ಪಂಚ ಗ್ಯಾರಂಟಿ ಯೋಜನೆಗಳಿಗೆ ಒಂದು ವರ್ಷಕ್ಕೆ 58 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದರು. ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿ ರಾಜ್ಯದ ಎಲ್ಲ ಅಸಂಘಟಿತ ಕಾರ್ಮಿಕರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಸಾಮಾಜಿಕ ಭದ್ರತೆ ಒದಗಿಸಿ ಅವರ ಜೀವನ ಮಟ್ಟ ಸುಧಾರಿಸಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಜಿಲ್ಲೆಯ ಅಸಂಘಟಿತ ಕಾರ್ಮಿಕರಿಗೆ 25 ಸ್ಮಾಟ್ ಕಾರ್ಡಗಳನ್ನು, 4 ಅಪಘಾತ ಪರಿಹಾರ ಚೆಕ್, 1 ಆಶಾ ದೀಪ ಯೋಜನೆ ಚೆಕ್‌ನ್ನು ಕಾರ್ಮಿಕ ಸಚಿವರು ವಿತರಿಸಿದರು. ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಜಂಟಿ ಕಾರ್ಯದರ್ಶಿ, ಜಂಟಿ ಕಾರ್ಮಿಕ ಆಯುಕ್ತ ಡಾ.ಎಸ್.ಬಿ. ರವಿಕುಮಾರ್ ಅವರು ಸಂವಿಧಾನ ಪೀಠಿಕೆಯನ್ನು ಬೋಧಿಸಿದರು ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ , ಜಿ.ಪಂ. ಸಿಇಓ ಭರತ್ ಎಸ್, ಎಸ್ಪಿ ರೋಹನ್ ಜಗದೀಶ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಕೃಷ್ಣಗೌಡ ಎಚ್. ಪಾಟೀಲ, ಬರ್ಕತ್ ಅಲಿ ಮುಲ್ಲಾ, ಕಾರ್ಮಿಕ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ, ಸಚಿನ್ ಹಳೇಮನಿ , ಹಿರಿಯ ಕಾರ್ಮಿಕ ನಿರೀಕ್ಷಕರು, ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರು ಹಾಜರಿದ್ದರು. ಡಿ.ಜಿ.ನಾಗೇಶ ಸ್ವಾಗತಿಸಿದರು. ಬಾಹುಬಲಿ ಜೈನರ್ ನಿರೂಪಿಸಿದರು.
ಸರ್ಕಾರಿ ಕಾರ್ಯಕ್ರಮದಲ್ಲೂ ಯುವ ಕಾಂಗ್ರೆಸ್ ಪದಾಧಿಕಾರಿಗಳ ದಂಡುಶುಕ್ರವಾರ ನಡೆದ ಕಾರ್ಮಿಕ ಇಲಾಖೆಯ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರೇ ತುಂಬಿ ತುಳುಕುತ್ತಿದ್ದರು. ಯಾವುದೇ ಚುನಾಯಿತ ಪ್ರತಿನಿಧಿಗಳು ಅಲ್ಲದೇ ಇದ್ದರೂ ವೇದಿಕೆಯ ಮುಂದಿನ ಸಾಲಿನಲ್ಲಿಯೇ ಸಚಿವರೊಟ್ಟಿಗೆ ಕುಳಿತಿದ್ದರು. ಇವರು ಮಾಡಿದ್ದು ಸಾಲದೆಂಬಂತೆ ವೇದಿಕೆಯ ತುಂಬೆಲ್ಲಾ ಯುವ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳ ದಂಡೇ ಇತ್ತು. ಇದು ಸರ್ಕಾರಿ ಕಾರ್ಯಕ್ರಮ ಇದಕ್ಕೆ ಪ್ರೋಟೋಕಾಲ್ ಇರುತ್ತದೆ ಎನ್ನುವುದನ್ನು ಹೇಳಬೇಕಾದ ಕಾರ್ಮಿಕ ಇಲಾಖೆಯ ಅಧಿಕಾರಿಗಳೇ ಪಕ್ಷದ ಕಾರ್ಯಕರ್ತರಂತೆ ವರ್ತಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.