ರಾಷ್ಟ್ರದ ವಿವಿಧ ರಾಜ್ಯಗಳಿಂದ ಭೇಟಿ ನೀಡುವಂತಹ ಲಂಬಾಣಿ ಸಮುದಾಯದ ಒಂದು ಧಾರ್ಮಿಕ ಕ್ಷೇತ್ರವಾದ ದೊಡ್ಡೇಣ್ಣೆಗೆರೆ ಗ್ರಾಮದ ಈ ಭೀಮಾಸತಿ ದೇವಸ್ಥಾನದ ಕ್ಷೇತ್ರವನ್ನು ರಾಜ್ಯಮಟ್ಟದ ಪ್ರೇಕ್ಷಣೀಯ ಸ್ಥಳವನ್ನಾಗಿಸುವುದು ನಮ್ಮ ಜವಾಬ್ದಾರಿ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ರಾಷ್ಟ್ರದ ವಿವಿಧ ರಾಜ್ಯಗಳಿಂದ ಭೇಟಿ ನೀಡುವಂತಹ ಲಂಬಾಣಿ ಸಮುದಾಯದ ಒಂದು ಧಾರ್ಮಿಕ ಕ್ಷೇತ್ರವಾದ ದೊಡ್ಡೇಣ್ಣೆಗೆರೆ ಗ್ರಾಮದ ಈ ಭೀಮಾಸತಿ ದೇವಸ್ಥಾನದ ಕ್ಷೇತ್ರವನ್ನು ರಾಜ್ಯಮಟ್ಟದ ಪ್ರೇಕ್ಷಣೀಯ ಸ್ಥಳವನ್ನಾಗಿಸುವುದು ನಮ್ಮ ಜವಾಬ್ದಾರಿ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು. ತಾಲೂಕಿನ ಹಂದನಕೆರೆ ಹೋಬಳಿಯ ದೊಡ್ಡೇಣ್ಣೆಗೆರೆ ಗ್ರಾಮದ ಬಳಿ ಇರುವ ಭೀಮಾಸತಿ ದೇವಾಲಯದ ಆವರಣದಲ್ಲಿ ೫೦ಲಕ್ಷ ರು. ವೆಚ್ಚದ ಯಾತ್ರಿನಿವಾಸ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ನಮ್ಮ ಸಮಾಜದಲ್ಲಿರುವ ಎಲ್ಲಾ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕು. ಎಲ್ಲರೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ದಿಯಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ೬ ಕೋಟಿ ಅನುದಾನದಲ್ಲಿ ಹಿಂದುಳಿದಂತಹ ಲಂಬಾಣಿ, ಉಪ್ಪಾರ, ಯಾದವ, ಮಡಿವಾಳ, ಕುರುಬ ಸೇರಿದಂತೆ ಇತರೆ ಎಲ್ಲಾ ಸಮುದಾಯಗಳಿಗೆ ತಲಾ ೫೦ಲಕ್ಷ ರು. ವೆಚ್ಚದ ಅನುದಾವನ್ನು ನೀಡಿದ್ದೇನೆ. ಅದೇ ರೀತಿ ವೀರಶೈವ, ಹಾಗೂ ಒಕ್ಕಲಿಗ ಸಮುದಾಯಕ್ಕೂ ನೀಡಿದ್ದು ಸಮಾಜದಲ್ಲಿ ಎಲ್ಲಾ ವರ್ಗದವರು ಮೇಲೆಬರಬೇಕಾಗಿದೆ. ಈ ಕ್ಷೇತ್ರಕ್ಕೆ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯದ ಜನರು ಇಲ್ಲಿಗೆ ಬರುತ್ತಾರೆ ಅವರಿಗಾಗಿ ಇಲ್ಲಿ ಒಂದು ಯಾತ್ರಿನಿವಾಸವನ್ನು ನಿರ್ಮಿಸಲಾಗುವುದು. ಅದರಂತೆ ಮೂಲ ಸೌಲಭ್ಯ ನೀಡಲಾಗುವುದು. ಇದರೊಂದಿಗೆ ಕ್ಷೇತ್ರದಲ್ಲಿನ ಲಂಬಾಣಿ ತಾಂಡಗಳ ಅಭಿವೃದ್ಧಿಯನ್ನು ವಿಶೇಷ ಅನುದಾನ ತರುವ ಮೂಲಕ ಅಗತ್ಯವಾದ ಸೌಲಭ್ಯಗಳನ್ನು ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಹಾಗೂ ಲಂಬಾಣಿ ಸಮುದಾಯದ ಮುಖಂಡ ರಘುನಾಥ್ ಮಾತನಾಡಿ ನಮ್ಮ ಸಮುದಾಯದ ಅಭಿವೃದ್ಧಿಗಾಗಿ ಎಲ್ಲರೂ ಶಿಕ್ಷಿತರಾಗಬೇಕು ಹಾಗೂ ಈ ಕ್ಷೇತ್ರದಲ್ಲಿನ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ ಸೇರಿದಂತೆ ಅಗತ್ಯವಾದ ಕೆಲಸಗಳನ್ನು ಮಾಡಬೇಕಿದ್ದು ಶಾಸಕರು ನಮ್ಮ ಮನವಿಗೆ ಸ್ಪಂದಿಸಿ ಈ ಯಾತ್ರಿ ನಿವಾಸವನ್ನು ನೀಡಿರುವುದು ಒಳ್ಳೆಯದಾಗಿದೆ ಎಂದರು. ಮಾಜಿ ಜಿ.ಪಂ.ಸದಸ್ಯೆ ಲೋಹಿತಾಬಾಯಿ ಮಾತನಾಡಿ ನಮ್ಮ ಸಮುದಾಯಕ್ಕೆ ಸೇರಿದ ಶ್ಯಾವಿಗೆಹಳ್ಳಿಯ ಬಳಿ ಇರುವಂತಹ ಜಾಗವನ್ನು ಅಭಿವೃದ್ಧಿಪಡಿಸುವ ಮೂಲಕ ನಮ್ಮ ಸಮಾಜಕ್ಕೆ ಅನುಕೂಲಮಾಡಿಕೊಡುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಮಾಜಿ ತಾ.ಪಂ.ಅದ್ಯಕ್ಷೆ ಚೇತನಾಗಂಗಾಧರ್ ಸೇರಿದಂತೆ ಲಂಬಾಣಿ ಸಮುದಾಯದ ಮುಖಂಡರುಗಳಾದ ರಾಜನಾಯ್ಕ, ತಿಮ್ಮನಾಯ್ಕ, ಕರಿಯನಾಯ್ಕ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.