ಕಸ ವಿಲೇವಾರಿ ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸಲು ಹಾಗೂ ಕಸದ ಬ್ಲಾಕ್ಸ್ಪಾಟ್ಗಳನ್ನು ನಿಯಂತ್ರಿಸಲು ಇನ್ನುಮುಂದೆ ಸಂಜೆ ನಂತರವೂ ಕಸ ಸಂಗ್ರಹಣೆಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಮುಂದಾಗಿದೆ.
ಬೆಂಗಳೂರು : ಕಸ ವಿಲೇವಾರಿ ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸಲು ಹಾಗೂ ಕಸದ ಬ್ಲಾಕ್ಸ್ಪಾಟ್ಗಳನ್ನು ನಿಯಂತ್ರಿಸಲು ಇನ್ನುಮುಂದೆ ಸಂಜೆ ನಂತರವೂ ಕಸ ಸಂಗ್ರಹಣೆಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಮುಂದಾಗಿದೆ.
ಬುಧವಾರ ಈ ಕುರಿತು ಪರಿಶೀಲನೆ ನಡೆಸಿ ಮಾತನಾಡಿದ ಆಯುಕ್ತ ಕೆ.ಎನ್.ರಮೇಶ್, ಮುಂಜಾನೆ ಕೆಲಸಕ್ಕೆ ತೆರಳುವ ಉದ್ಯೋಗಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಗೃಹಿಣಿಯರಿಗೆ ಬೆಳಗ್ಗೆ ಕಸ ನೀಡಲು ಸಾಧ್ಯವಾಗದೆ, ಅಲ್ಲಲ್ಲಿ ಕಸ ಎಸೆದು ಹೋಗುತ್ತಿರುವುದರಿಂದ ಕಸದ ಬ್ಲಾಕ್ಸ್ಪಾಟ್ಗಳಾಗುತ್ತಿದೆ. ಇದನ್ನು ನಿಯಂತ್ರಿಸಲು ಪ್ರತಿ ದಿನ ಸಂಜೆ 5 ರಿಂದ ರಾತ್ರಿ 12 ಗಂಟೆಯವರೆಗೆ ಹಸಿ ಮತ್ತು ಒಣ ಕಸ ಸಂಗ್ರಹಣೆ ವಾಹನಗಳು ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ನಾನಾ ಕಾರಣಗಳಿಂದ ಬೆಳಗ್ಗಿನ ವೇಳೆ ಕಸದ ಆಟೋಗಳಿಗೆ ಕಸ ನೀಡಲು ಆಗದವರು ಹಾಗೂ ಸಮಯ ಹೊಂದಾಣಿಕೆ ಆಗದವರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
5 ವಾರ್ಡ್ಗಳಲ್ಲಿ ಪ್ರಯೋಗ:
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಲ್ಕು ವಾರ್ಡ್ಗಳು ಹಾಗೂ ಹೊಂಗಸಂದ್ರ ವಾರ್ಡ್ ಸೇರಿದಂತೆ ಒಟ್ಟು ಐದು ವಾರ್ಡ್ಗಳಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ವಾರ್ಡ್ಗಳಲ್ಲಿ ಬೆಳಗ್ಗೆ ಒಟ್ಟು 160 ಕಸ ಸಂಗ್ರಹಿಸುವ ವಾಹನಗಳು ಸಂಚರಿಸುತ್ತಿವೆ. ಸಂಜೆ ವೇಳೆ 20 ರಿಂದ 25 ಆಟೋಗಳ ಮೂಲಕ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಹೊಂಗಸಂದ್ರ ವಾರ್ಡ್ನಲ್ಲಿ ಬೆಳಗ್ಗೆ 31 ಆಟೋಗಳು ಕಸ ಸಂಗ್ರಹಿಸಿದರೆ, ಸಂಜೆ 6 ವಾಹನಗಳು (3 ಹಸಿ ಕಸ ಹಾಗೂ 3 ಒಣ ಕಸ) ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ವಾಹನ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆ
ಎಚ್ಎಸ್ಆರ್ ಲೇಔಟ್ನ ಅಗರ ಕೆರೆ ಸುತ್ತಮುತ್ತ ವಾಹನ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆ ಹೆಚ್ಚಿದೆ. ಅದಕ್ಕಾಗಿ ನಿರುಪಯುಕ್ತವಾಗಿರುವ ಜೆಎಸ್ಎಸ್ ಪಬ್ಲಿಕ್ ಸ್ಕೂಲ್ ಮುಂಭಾಗದ ಫ್ಲೈ ಓವರ್ ಕೆಳಭಾಗದ ಜಾಗವನ್ನು ವಾಹನಗಳ ಪಾರ್ಕಿಂಗ್ ಗಾಗಿ ಸುವ್ಯವಸ್ಥಿತ ಪ್ರದೇಶವನ್ನಾಗಿ ರೂಪಿಸಲು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು. ಈ ಸಂದರ್ಭಧಲ್ಲಿ ಎಜಿಎಂ ನೇತ್ರಾವತಿ, ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಪ್ರತಿನಿಧಿ ಡಾ.ಶಾಂತಿ ಸೇರಿದಂತೆ ಇತರರಿದ್ದರು.
