ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ತಡೆಯಲು ಕಾರಟಗಿ ಪುರಸಭೆ ಹೊಸ ರೀತಿಯ ಜಾಗೃತಿ ಅಭಿಯಾನಕ್ಕೆ ಮುಂದಾಗಿದೆ. ಸಾರ್ವಜನಿಕರು ಕಸ ಹಾಕುತ್ತಿದ್ದ ಸ್ಥಳಗಳನ್ನು ಸ್ವಚ್ಛಗೊಳಿಸಿ, ಅದೇ ಜಾಗದಲ್ಲಿ ವಿವಿಧ ಬಣ್ಣಗಳ ರಂಗೋಲಿ ಬಿಡಿಸುವ ಮೂಲಕ ಸ್ವಚ್ಛತೆ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಕಾರಟಗಿ: ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ತಡೆಯಲು ಕಾರಟಗಿ ಪುರಸಭೆ ಹೊಸ ರೀತಿಯ ಜಾಗೃತಿ ಅಭಿಯಾನಕ್ಕೆ ಮುಂದಾಗಿದೆ. ಸಾರ್ವಜನಿಕರು ಕಸ ಹಾಕುತ್ತಿದ್ದ ಸ್ಥಳಗಳನ್ನು ಸ್ವಚ್ಛಗೊಳಿಸಿ, ಅದೇ ಜಾಗದಲ್ಲಿ ವಿವಿಧ ಬಣ್ಣಗಳ ರಂಗೋಲಿ ಬಿಡಿಸುವ ಮೂಲಕ ಸ್ವಚ್ಛತೆ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಪಟ್ಟಣದ 14ನೇ ವಾರ್ಡ್‌ನ ರಾಮನಗರ ಹಾಗೂ 3ನೇ ವಾರ್ಡ್‌ನ ರಸ್ತೆ ಬದಿಗಳಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದ ಪರಿಣಾಮ ಕಸದ ತಿಪ್ಪೆಗಳಂತಾಗಿದ್ದ ಸ್ಥಳಗಳನ್ನು ಪುರಸಭೆ ಸಿಬ್ಬಂದಿ ಜೆಸಿಬಿ ಯಂತ್ರದ ಮೂಲಕ ಸ್ವಚ್ಛಗೊಳಿಸಿದರು. ಬಳಿಕ ಆ ಸ್ಥಳಗಳಲ್ಲಿ ರಂಗೋಲಿ ಬಿಡಿಸಿ, ಸಾರ್ವಜನಿಕರಿಗೆ ಕಸ ಹಾಕದಂತೆ ಜಾಗೃತಿ ಮೂಡಿಸಿದರು.ಸಮುದಾಯ ಸಂಘಟಕರು ವಾರ್ಡ್‌ಗಳ ಸಾರ್ವಜನಿಕರನ್ನು ಸ್ಥಳಕ್ಕೆ ಕರೆಸಿ, ಮತ್ತೆ ಅದೇ ಜಾಗದಲ್ಲಿ ಕಸದ ರಾಶಿ ನಿರ್ಮಾಣವಾಗದಂತೆ ಎಚ್ಚರಿಕೆ ನೀಡಿದರು. ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸ, ಒಣ ಕಸ, ಸ್ಯಾನಿಟರಿ ತ್ಯಾಜ್ಯ ಹಾಗೂ ವಿಶೇಷ ಕಾಳಜಿಯ ತ್ಯಾಜ್ಯ ಸೇರಿದಂತೆ ನಾಲ್ಕು ವಿಧದ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ, ಪ್ರತಿದಿನ ಬರುವ ಪುರಸಭೆಯ ಕಸ ಸಂಗ್ರಹಣಾ ವಾಹನಕ್ಕೆ ನೀಡುವಂತೆ ತಿಳಿಸಿದರು.
ಬಯಲು ಶೌಚಕ್ಕೆ ಕಡಿವಾಣ ಹಾಕಿ: ಸಮುದಾಯ ಸಂಘಟಕರು ಮಾತನಾಡಿ, ಯಾವುದೇ ಕಾರಣಕ್ಕೂ ಬಯಲು ಪ್ರದೇಶಗಳಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಬಾರದು. ಸಾರ್ವಜನಿಕ ಶೌಚಾಲಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಕಸ ನಿರ್ವಹಣೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ, ನಿಯಮ ಉಲ್ಲಂಘಿಸಿ ರಸ್ತೆ ಬದಿ ಕಸ ಹಾಕುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.
ನಾಗರಿಕರ ಸಹಕಾರ ಅಗತ್ಯ: ಆಶ್ರಯ ಸಮಿತಿ ಸದಸ್ಯ ಶರಣಪ್ಪ ಪತ್ತರ್ಗೌಡ ಮಾತನಾಡಿ, ಪಟ್ಟಣದ ಸೌಂದರ್ಯ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರವೂ ಪ್ರಮುಖವಾಗಿದೆ. ಪುರಸಭೆ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಸ್ವಚ್ಛ ಪಟ್ಟಣ ನಿರ್ಮಾಣ ಸಾಧ್ಯ ಎಂದರು.ಪುರಸಭೆ ಆಡಳಿತ ಕೆಲವು ವಾರ್ಡ್‌ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಕಸ ಸಂಗ್ರಹಣಾ ವಾಹನಗಳು ಪ್ರತಿದಿನ ನಿಗದಿತ ಸಮಯಕ್ಕೆ ಕೆಲವು ವಾರ್ಡ್‌ಗಳಿಗೆ ಬಾರದಿರುವುದರಿಂದ ಸಾರ್ವಜನಿಕರು ಅನಿವಾರ್ಯವಾಗಿ ರಸ್ತೆ ಬದಿ ಕಸ ಎಸೆಯುವಂತಾಗಿದೆ. ಪುರಸಭೆ ಆಡಳಿತ ನಿತ್ಯದ ಕಸ ವಿಲೇವಾರಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಎಲ್ಲ ವಾರ್ಡ್‌ಗಳಿಗೂ ಅಭಿಯಾನ ವಿಸ್ತರಣೆ: ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರ್ ಮಾತನಾಡಿ, ಪುರಸಭೆಯ ವತಿಯಿಂದ ಸ್ವಚ್ಛತಾ ಸೇವಾ ಅಭಿಯಾನದಡಿ ರಸ್ತೆ ಬದಿಯಲ್ಲಿ ಕಸ ಸಂಗ್ರಹವಾಗಿರುವ ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸಲಾಗುತ್ತಿದೆ. ಬಳಿಕ ಆ ಸ್ಥಳದಲ್ಲಿ ರಂಗೋಲಿ ಬಿಡಿಸಿ, ಮತ್ತೆ ಕಸ ಹಾಕದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹಂತ ಹಂತವಾಗಿ ಪಟ್ಟಣದ ಎಲ್ಲ ವಾರ್ಡ್‌ಗಳಿಗೂ ಈ ಸ್ವಚ್ಛತಾ ಕಾರ್ಯವನ್ನು ವಿಸ್ತರಿಸಿ ಸ್ವಚ್ಛ ಪಟ್ಟಣ ನಿರ್ಮಿಸುವುದು ನಮ್ಮ ಉದ್ದೇಶ ಎಂದರು.ವಾರ್ಡ್ ನಿವಾಸಿಗಳಾದ ದುರ್ಗಮ್ಮ, ಯಲ್ಲಮ್ಮ, ವಿಜಯಲಕ್ಷ್ಮೀ, ಸಮುದಾಯ ಸಂಘಟಕರಾದ ಅರುಣಾ ಬಾಯಿ, ಮಡಿವಾಳ ದೇವರಮ್ಮ, ಉಮಾದೇವಿ, ಗಂಗಮ್ಮ, ಮಡಿವಾಳ ಭೀಮಮ್ಮ ಉಪಸ್ಥಿತರಿದ್ದರು.