ಶ್ರದ್ಧಾಭಕ್ತಿಯ ಚೇಳ್ಳಗುರ್ಕಿ ಎರ್ರಿತಾತ ಮಹಾರಥೋತ್ಸವ

KannadaprabhaNewsNetwork |  
Published : Jun 01, 2025, 11:58 PM IST
ಬಳ್ಳಾರಿ ತಾಲೂಕಿನ ಶ್ರೀ ಚೇಳ್ಳಗುರ್ಕಿ ಎರ್ರಿತಾತನವರ ಮಹಾರಥೋತ್ಸವ ಭಾನುವಾರ ಸಂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.  | Kannada Prabha

ಸಾರಾಂಶ

ಕರ್ನಾಟಕ ಹಾಗೂ ಆಂಧ್ರಪ್ರದೇಶದ ಸಹಸ್ರಾರು ಭಕ್ತರ ಆರಾಧ್ಯ ದೈವ, ಪವಾಡಪುರುಷ ಶ್ರೀ ಎರ್ರಿತಾತನವರ ಮಹಾರಥೋತ್ಸವ ತಾಲೂಕಿನ ಚೇಳ್ಳಗುರ್ಕಿ ಗ್ರಾಮದಲ್ಲಿ ಭಾನುವಾರ ಸಂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಕರ್ನಾಟಕ ಹಾಗೂ ಆಂಧ್ರಪ್ರದೇಶದ ಸಹಸ್ರಾರು ಭಕ್ತರ ಆರಾಧ್ಯ ದೈವ, ಪವಾಡಪುರುಷ ಶ್ರೀ ಎರ್ರಿತಾತನವರ ಮಹಾರಥೋತ್ಸವ ತಾಲೂಕಿನ ಚೇಳ್ಳಗುರ್ಕಿ ಗ್ರಾಮದಲ್ಲಿ ಭಾನುವಾರ ಸಂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು ಹೂವು-ಹಣ್ಣು, ಉತ್ತುತ್ತಿಯನ್ನು ರಥೋತ್ಸವದತ್ತ ತೂರಿ ಭಕ್ತಿ ಸಮರ್ಪಿಸಿದರು. ಪವಾಡ ಪುರುಷ ಎರ್ರಿತಾತ ಭಕ್ತರ ಕಾಯೋ ಮಹಾಮಹಿಮನೀತ...ಚೇಳ್ಳಗುರ್ಕಿ ಎರ್ರಿತಾತ ಯತಿಗಳು ಕೂಡವ ಕೈಲಾಸ ಎಂಬಿತ್ಯಾದಿ ಜಯಘೋಷಗಳು ಮೊಳಗಿದವು.

ರಥೋತ್ಸವದ ಬಳಿಕ ಜರುಗಿದ ಕರ್ಪೂರದ ಆರತಿ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡು ಪುನೀತಗೊಂಡರು.

ರಥೋತ್ಸವ ಹಿನ್ನೆಲೆ ಮಠದಲ್ಲಿ ವಿಶೇಷ ಪೂಜೆಗಳು ಜರುಗಿದವು. ಎರ್ರಿತಾತನವರ ಮೂರ್ತಿ ಹಾಗೂ ಜೀವಸಮಾಧಿ ಸ್ಥಳವನ್ನು ವಿವಿಧ ಪತ್ರೆ-ಪುಷ್ಪಗಳಿಂದ ಅಲಂಕರಿಸಲಾಗಿತ್ತು.

ಬೆಳಗಿನ ಜಾವದಿಂದಲೇ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯಲು ಭಕ್ತರು ಆಗಮಿಸುವ ದೃಶ್ಯ ಕಂಡು ಬಂದವು. ದರ್ಶನ ಬಳಿಕ ದೇವಸ್ಥಾನ ಸುತ್ತ ಮಹಿಳೆಯರು ಪ್ರದಕ್ಷಿಣೆ ಹಾಕಿದರು. ಬೆಳಗ್ಗೆ 6 ಗಂಟೆಗೆ ಜರುಗಿದ ಮಡಿತೇರು ಪೂಜೆಯಲ್ಲಿ ಚೇಳ್ಳಗುರ್ಕಿ ಸೇರಿದಂತೆ ಸುತ್ತಮುತ್ತಲ ಗ್ರಾಮದ ಭಕ್ತಾದಿಗಳು ಪಾಲ್ಗೊಂಡರು. ಶಾಸ್ತ್ರೋಕ್ತವಾಗಿ ಜರುಗಿದ ಮಡಿತೇರು ಪೂಜೆ ಬಳಿಕ ಭಕ್ತರು ಮಡಿತೇರು ಎಳೆದು ಭಕ್ತಿ ಸಮರ್ಪಿಸಿದರು.

ರಥೋತ್ಸವ ನಿಮಿತ್ತ ಮೇ 25ರಿಂದಲೇ ಮಠದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಗ್ರಾಮಗಳ ಭಜನೆ ಮಂಡಳಿಗಳು ಪ್ರತಿವರ್ಷ ನಡೆಸಿಕೊಡುವ ಸಪ್ತಭಜನೆ ಕಾರ್ಯಕ್ರಮ ಭಾನುವಾರ ಎರ್ರಿತಾತನವರ ಮಠದ ಆವರಣದಲ್ಲಿ ಸಮಾರೋಪಗೊಂಡಿತು. ಬೆಳ್ಳಿ ರಥೋತ್ಸವ, ಬಸವ ಉತ್ಸವ, ದೀಕ್ಷಾ ಕಾರ್ಯಕ್ರಮ ಸೇರಿ ನಾನಾ ಧಾರ್ಮಿಕ ವಿಧಿವಿಧಾನಗಳು ನಡೆದವು. ಶ್ರೀಎರ್ರಿಸ್ವಾಮಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಎಚ್‌.ಬಾಳನಗೌಡ, ದಾಸೋಹ ಸೇವಾ ಸಂಘದ ಪದಾಧಿಕಾರಿಗಳು ಶ್ರೀಮಠಕ್ಕೆ ಬರುವ ಭಕ್ತರಿಗೆ ವಸತಿ, ಊಟ, ಉಪಾಹಾರ ವ್ಯವಸ್ಥೆ ಕಲ್ಪಿಸಿದ್ದರು.

ಕರ್ನಾಟಕಾಂಧ್ರ ಗಡಿಭಾಗದ ಸಾವಿರಾರು ಭಕ್ತರು ಜಮಾಯಿಸಿದ್ದರಿಂದ ದೇವಸ್ಥಾನ ಜನಜಂಗುಳಿಯಿಂದ ತುಂಬಿಕೊಂಡಿತ್ತು.

ಜೂ. 2ರಂದು ಸಂಜೆ 7 ಗಂಟೆಗೆ ಶ್ರೀ ಎರ್ರಿತಾತನವರ ಹೂವಿನ ರಥೋತ್ಸವ ನಡೆಯಲಿದ್ದು, ಬಳಿಕ ಬಾಣ ಬಿರುಸುಗಳ ಪ್ರದರ್ಶನ ನಡೆಯಲಿದೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ