ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಅವರು ಇಲ್ಲಿನ ಬಸವಕಲ್ಯಾಣ ಎಂಜಿನಿಯರಿಂಗ್ ಕಾಲೇಜಿನಲ್ಲಿ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಸಾಹಿತ್ಯ ಮತ್ತು ಸಮಕಾಲೀನ ಸಂದರ್ಭ ಕುರಿತಾದ ಪ್ರತಿಷ್ಠಾನದ 77ನೇ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ನೆಲದಲ್ಲಿ ಮಾನವೀಯತೆ ಮತ್ತು ಜ್ಞಾನ ಪರಂಪರೆ ಎರಡೂ ಚಲನಶೀಲವಾಗಿದ್ದವು ಎಂದರು.
ಲೋಕಜ್ಞಾನದ ಅಂತರಂಗ ಕಟ್ಟಿಕೊಡುವ ಸಾಮರ್ಥ್ಯ ಭಾಷೆಗಿದೆ. ಭಾಷೆಗೆ ಯಾವ ಹಂಗು ಇಲ್ಲ. ಆಡಿದವರಿಗೆ ದಕ್ಕುವ ಗುಣ ಭಾಷೆಗಿದೆ. ಭಾಷೆ ಯಾವುದಾದರೂ ಅದರಲ್ಲೊಂದು ಜ್ಞಾನ ಪರಂಪರೆ ಇದ್ದೇ ಇರುತ್ತದೆ. ಹೆಚ್ಚು ಭಾಷೆ ತಿಳಿದಷ್ಟು ಹೆಚ್ಚು ಜ್ಞಾನ ಪರಂಪರೆ ಅರಿಯುತ್ತೇವೆ. ಭಾಷಾ ಜ್ಞಾನ ಇರುವವರು ವ್ಯವಹಾರಿಕ ಜ್ಞಾನವೂ ಹೊಂದಿರಬೇಕು. ಲೋಕಜ್ಞಾನದ ಆಂತರ್ಯವನ್ನು ಭಾಷೆ ದಟ್ಟವಾಗಿ ಕಟ್ಟಿಕೊಡುತ್ತದೆ ಎಂದರು.ಕಲ್ಯಾಣ ಎಂಬುವದು ಬಹುದೊಡ್ಡ ಅನುಭವ ಲೋಕವಾಗಿದೆ. ಇಲ್ಲಿ ಬಸವ, ಅಲ್ಲಮ, ಅಕ್ಕ ಸೇರಿ ಹಲವರು ನಡೆಸಿದ ಚರ್ಚೆ, ಚಿಂತನೆಗಳು ಜಗತ್ತಿನ ಚಲನಶೀಲತೆಗೆ ಚಾಲಕ ಶಕ್ತಿಗಳಾಗಿವೆ. ವೈಚಾರಿಕ ಪರಂಪರೆಯೊಂದು ಕಲ್ಯಾಣದಲ್ಲಿ ಇತ್ತೆಂಬುದೇ ಬೆರಗಿನ ಸಂಗತಿ ಎಂದರು.
ಸಿಯುಕೆ ಪ್ರಾಧ್ಯಾಪಕ ಪ್ರೊ.ವಿಕ್ರಮ ವಿಸಾಜಿ ಮಾತನಾಡಿ, ಬಹಳ ದೊಡ್ಡ ದೊಡ್ಡ ವ್ಯಕ್ತಿತ್ವಗಳ ಬರಹಗಾರರ, ವಿಜ್ಞಾನಿಗಳ ಮಾತನ್ನು ಕೇಳಿಸಿಕೊಳ್ಳುವದೂ ಶಿಕ್ಷಣದ ಭಾಗವಾಗಿದೆ. ದೊಡ್ಡವರ ಮಾತು ಮತ್ತು ಆಲೋಚನೆಗಳು ಅನೇಕ ಹೊಸ ದಾರಿ, ಹೊಸ ಹೊಳಹು ತೋರಿಸುತ್ತವೆ. ಸಾಹಿತ್ಯದಲ್ಲಿ ಬದುಕಿನ ಸಮಾಜದ ಹಲವು ಮುಖಗಳು ಅಡಕವಾಗಿರುತ್ತವೆ. ಅದನ್ನು ಅರಿಯುವ ಸೂಕ್ಷ್ಮತೆ ಗಂಭೀರ ಓದಿನಿಂದ ಸಾಧ್ಯ ಎಂದರು.
ಉಪನ್ಯಾಸಕರಾದ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ಸಾಹಿತ್ಯ ತನ್ನ ಕಾಲದ ಹಲವು ತಲ್ಲಣಗಳಿಗೆ ಅತ್ಯಂತ ಪ್ರಜ್ಞಾಪೂರ್ವಕವಾಗಿ ಸ್ಪಂದಿಸುವ ಗುಣ ಹೊಂದಿದೆ. ಜಾಗತಿಕ, ಭಾರತೀಯ ಮತ್ತು ಕನ್ನಡ ಸಾಹಿತ್ಯದ ಮೂಲ ಸತ್ವ ಮಾನವೀಯತೆಯಾಗಿದೆ ಎಂದರು.