ಇಂದು ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ

KannadaprabhaNewsNetwork | Published : Apr 26, 2024 12:48 AM

ಸಾರಾಂಶ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಏ.26 ರಂದು ಶಾಂತಿ ಹಾಗೂ ಸುವ್ಯಸ್ಥೆಯಿಂದ ಮತದಾನವಾಗುವಂತೆ ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದೆ.

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಏ.26 ರಂದು ಶಾಂತಿ ಹಾಗೂ ಸುವ್ಯಸ್ಥೆಯಿಂದ ಮತದಾನವಾಗುವಂತೆ ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದೆ.

ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ 2829 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.

ಇದೇ ಮೊದಲ ಬಾರಿಗೆ ಗ್ರಾಮಾಂತರ ಕ್ಷೇತ್ರವನ್ನು ಸೂಕ್ಷ್ಮ ಕ್ಷೇತ್ರವೆಂದು ಪರಿಗಣಿಸಿ, ಎಲ್ಲ ಮತಗಟ್ಟೆಗಳಿಂದಲೂ ವೆಬ್ ಸ್ಟ್ರೀಮ್ ನಡೆಸಲಾಗುತ್ತಿರುವುದು ವಿಶೇಷ. ಕ್ಷೇತ್ರದಲ್ಲಿ ಅರೆಸೇನಾ ಪಡೆಯ 7 ತುಕಡಿಗಳು ಕಾರ್ಯನಿರ್ವಹಿಸಲಿವೆ. ಒಟ್ಟು 504 ಅರೆಸೇನಾ ಪಡೆ ಸಿಬ್ಬಂದಿ ಗನ್ ಹಿಡಿದು ಯಾವುದೇ ಅಹಿತಕರ ಘಟನೆಗ ನಡೆಯದಂತೆ ಮತದಾನದಲ್ಲಿ ಯಾವುದೇ ಅಕ್ರಮ ನಡೆಯದಂತೆ ಎಚ್ಚರಿಕೆ ವಹಿಸಲಿದ್ದಾರೆ. ಕ್ಷೇತ್ರದಲ್ಲಿನ 2829 ಮತಗಟ್ಟೆಗಳಲ್ಲಿ ವೆಬ್ ಸ್ಟ್ರೀಮಿಂಗ್ ನಡೆಯಲಿದ್ದು, ಹೆಚ್ಚುವರಿ ಕ್ಯಾಮೆರಾಗಳ ವ್ಯವಸ್ಥೆಯು ನಡೆದಿದೆ.

ಕ್ಷೇತ್ರದಲ್ಲಿ 14,24,685 ಪುರುಷರು , 13,77,570 ಮಹಿಳಾ ಮತದಾರರು, 325 ಇತರೆ ಮತದಾರರು ಸೇರಿದಂತೆ ಒಟ್ಟು 28,02,580 ಮತದಾರರಿದ್ದಾರೆ. ಚುನಾವಣಾ ಕಣದಲ್ಲಿ 14 ಪುರುಷ ಮತ್ತು ಒಬ್ಬರು ಮಹಿಳಾ ಅಭ್ಯರ್ಥಿ ಸೇರಿ 15 ಮಂದಿ ಸ್ಪರ್ಧೆ ಮಾಡಿದ್ದಾರೆ.

ಮತಗಟ್ಟೆ ಸಿಬ್ಬಂದಿ :

ಈ ಚುನಾವಣೆಗೆ ಪ್ರತಿಯೊಂದು ಮತಗಟ್ಟೆಗೆ ಒಬ್ಬ ಅಧ್ಯಕ್ಷಾಕಾರಿ ಹಾಗೂ ಮೂರು ಮತದಾನಾಧಿಕಾರಿಗಳು ಹಾಗೂ ಒಬ್ಬ ಡಿ ದರ್ಜೆ ನೌಕರರನ್ನು ನೇಮಕ ಮಾಡಲಾಗಿದೆ. 2829 ಮತಗಟ್ಟೆಗಳಿಗೆ ಪ್ರಿಸೈಡಿಂಗ್ ಅಧಿಕಾರಿಗಳು, ಸಹಾಯಕ ಪ್ರಿಸೈಡಿಂಗ್ ಅಧಿಕಾರಿಗಳು , ಮತದಾನಾಕಾರಿಗಳು ನಿಯೋಜನೆಗೊಂಡಿದ್ದಾರೆ.

ಇನ್ನು 233 ಸೂಕ್ಷ್ಮ ಮತಗಟ್ಟೆಗಳಲ್ಲಿ ಒಬ್ಬರು ಮುಖ್ಯಪೇದೆ, ಒಬ್ಬರು ಹೋಂ ಗಾರ್ಡ್ ಗಳು ಭದ್ರತೆ ಒದಗಿಸಲಿದ್ದು, ಸಾಮಾನ್ಯ ಮತಟಗ್ಟೆಯಲ್ಲಿ ಒಬ್ಬರು ಪೇದೆ ಕೆಲಸ ನಿರ್ವಹಿಸಲಿದ್ದಾರೆ. ಮತಗಟ್ಟೆಗಳ 200 ಮೀಟರ್ ಅಂತರದಲ್ಲಿ ಯಾವುದೇ ಪ್ರಚಾರ ಕಾರ್ಯವನ್ನು ನಡೆಸುವಂತಿಲ್ಲ.

ವಿದ್ಯುನ್ಮಾನ ಮತಯಂತ್ರ ಮತ್ತು ವಿವಿಪ್ಯಾಟ್ :

ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಸಲುವಾಗಿ ಪ್ರಸಕ್ತ ಚುನಾವಣೆಯಲ್ಲಿ ಇವಿಎಂ ಜೊತೆಗೆ ವಿವಿಪ್ಯಾಟ್ ಗಳನ್ನು ಬಳಸಲಾಗುವುದು. ಬ್ಯಾಲೆಟ್ ಯುನಿಟ್ , ಸಿಯು, ವಿವಿ ಪ್ಯಾಟ್ ಸೇರಿ ಮತಯಂತ್ರಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಮತದಾರರು ಅಭ್ಯರ್ಥಿಗಳನ್ನು ಗುರುತಿಸಲು ಅನುಕೂಲವಾಗುವಂತೆ ಬ್ಯಾಲೆಟ್ ಯೂನಿಟ್ ಗಳಲ್ಲಿ ಅಳವಡಿಸುವ ಮತಪತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರವನ್ನು ಮುದ್ರಿಸಲಾಗಿದೆ ಹಾಗೂ ಎಲ್ಲಾ ಅಭ್ಯರ್ಥಿಗಳ ಹೆಸರುಗಳ ನಂತರದ ನೋಟಾ (ಮೇಲ್ಕಂಡ ಯಾರು ಅಲ್ಲ) ಮುದ್ರಿತವಾಗಿರುತ್ತದೆ. ನೋಟಾ ಚಿಹ್ನೆ ಕೂಡ ನಮೂದಾಗಿದೆ.

ಮೂಲಭೂತ ಸೌಲಭ್ಯ:

ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು, ನೆರಳು, ಶೌಚಾಲಯ, ವಿಕಲಚೇತನರಿಗಾಗಿ ರ್ಯಾಂಪ್ ವ್ಯವಸ್ಥೆಗಳನ್ನು ಮಾಡಲು ಕ್ರಮವಹಿಸಲಾಗಿದೆ. ಪ್ರತಿಯೊಂದು ಮತಗಟ್ಟೆಗಳಲ್ಲಿ 100 ಮೀಟರ್ ಅಂತರದಲ್ಲಿ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ಅವರ ಕ್ರಮಸಂಖ್ಯೆಯನ್ನು ಪರಿಶೀಲಿಸಿ ತಿಳಿಸುವ ಸಲುವಾಗಿ ಮತದಾರರ ಸಹಾಯ ಕೇಂದ್ರ ಸ್ಥಾಪಿಸಲಾಗುತ್ತಿದೆ. ಅದರಲ್ಲಿ ಬೂತ್ ಲೆವಲ್ ಅಕಾರಿಗಳು ಕರ್ತವ್ಯ ನಿರ್ವಹಿಸಲಿದ್ದು, ತ್ವರಿತವಾಗಿ ಮತದಾರರ ಹೆಸರು ಹುಡುಕಲು ಆಂಗ್ಲ ಭಾಷೆಯಲ್ಲಿರುವ ಮತದಾರರ ಪಟ್ಟಿಯನ್ನು ಒದಗಿಸಲಾಗುವುದು. ಕೋಟ್.............

ಪ್ರತಿಯೊಬ್ಬರು ತಪ್ಪದೇ ಮತದಾನದಲ್ಲಿ ಭಾಗವಹಿಸುವುದು. ಬಿಸಿಲಿನ ನಡುವೆಯು ತಮ್ಮ ಹಕ್ಕು ಚಲಾಯಿಸಬೇಕು. ಸೆಕ್ಸನ್144ಅಡಿಯಲ್ಲಿ ಜಾರಿಯಲ್ಲಿರುವ ನಿಯಮಗಳನ್ನು ಯಾರೊಬ್ಬರು ಉಲ್ಲಂಘಿಸುವಂತಿಲ್ಲ. ಹೋಂ ಸ್ಟೇ, ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡುವುದನ್ನು ನಿಷೇಧಿಸಲಾಗಿದೆ.

-ಡಾ.ಅವಿನಾಶ್, ಜಿಲ್ಲಾಧಿಕಾರಿ, ರಾಮನಗರ

ಕೋಟ್ ................

ಶಾಂತಿಯುತ ಮತದಾನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರದಲ್ಲಿ ಅರೆಸೇನಾ ಪಡೆಯ 7ತುಕಡಿಗಳು ಕರ್ತವ್ಯ ನಿರ್ವಹಿಸಲಿವೆ.ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚುವರಿ ಪೊಲೀಸರು ನಿಯೋಜನೆಗೊಳ್ಳಲಿದ್ದಾರೆ.

- ಕಾರ್ತಿಕ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ

ಕೋಟ್ ............

ಮತದಾನ ಪ್ರಮಾಣ ಏರಿಕೆಗೆ ಅನೇಕ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಮತಗಟ್ಟೆಬಳಿ ಆಂಬೂಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಮತಗಟ್ಟೆಗಳನ್ನು ತೆರೆಯಲಾಗಿದೆ. ವಿಶೇಷ ಚೇತನರನ್ನು ಮತಗಟ್ಟೆಗೆ ಕರೆತರಲು ಸಕಲ ಸಿದ್ದಂತೆಗಳನ್ನು ನಡೆಸಿದ್ದೇವೆ.

-ದಿಗ್ವಿಜಯ್ ಬೋಡ್ಕೆ , ಸಿಇಒ, ಜಿಪಂ, ರಾಮನಗರ

ಬಾಕ್ಸ್.........

ಮೊಬೈಲ್ ಫೋನ್ , ಕ್ಯಾಮರಾ ನಿಷೇಧ :

ಪ್ರಜಾಪ್ರಾತಿನಿಧ್ಯ ಅನಿಯಮ 1951 ರ ಸೆಕ್ಷನ್ 128 ಮತ್ತು ಚುನಾವಣೆ ನಡೆಸುವ ನಿಯಮಗಳ ನಿಯಮ 39 ರಂತೆ ಏಪ್ರಿಲ್ 18ರ ಮತದಾನದ ದಿನದಂದು ಮತದಾರರು ಮೊಬೈಲ್ ಪೋನ್ ಅಥವಾ ಕ್ಯಾಮರಾಗಳನ್ನು ಮತಗಟ್ಟೆಗಳಿಗೆ ತೆಗೆದುಕೊಂಡು ಹೋಗುವುದಕ್ಕೆ ಅವಕಾಶವಿರುವುದಿಲ್ಲ. ಛಾಯಾ ಚಿತ್ರಗಳನ್ನು ತೆಗೆಯುವುದು ಮತದಾನದ ರಹಸ್ಯ ಉಲ್ಲಂಘನೆಯಾಗುತ್ತದೆ.

ಬಾಕ್ಸ್‌............

ವಿಕಲಚೇತನರಿಗೆ ಸೂಕ್ತ ಸೌಲಭ್ಯ

ರಾಮನಗರ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಏ.26ರಂದು ವಿಕಲಚೇತನರ ಮತದಾರರು ಮತದಾನ ಮಾಡಲು ಅನುಕೂಲವಾಗುವಂತೆ ವಿಲ್‌ಚೇರ್, ರ‍್ಯಾಂಪ್ (Wheel chair, Ramp) ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ದೃಷ್ಠಿದೋಷವುಳ್ಳ ವಿಕಲಚೇತನರಿಗೆ ಮ್ಯಾಗ್ನಿಫೇಯಿಂಗ್ ಗ್ಲಾಸ್ ಸೌಲಭ್ಯ ಹಾಗೂ ಬ್ರೈಲ್ ಲಿಪಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಮಾಹಿತಿ 7ಎ ಡಮ್ಮಿ ಪೋಸ್ಟಲ್ ಬ್ಯಾಲೆಟ್‌ನ ಸೌಲಭ್ಯವನ್ನು ಪ್ರತಿ ಮತಗಟ್ಟೆಯಲ್ಲಿ ಒದಗಿಸಲಾಗುವುದು.

ಚುನಾವಣೆ ನೀತಿ ಸಂಹಿತೆ 1961ರ ನಿಯಮ 49ಎನ್ ಅನ್ವಯ ದೃಷ್ಠಿದೋಷವುಳ್ಳ ವಿಕಲಚೇತನರು ಮತದಾನ ಮಾಡಲು ಮತಗಟ್ಟೆಗೆ ಜೊತೆಗಾರರನ್ನು ಕರೆದುಕೊಂಡು ಬರಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಂದ ಸಹಾಯವನ್ನು ಪಡೆದು ಮತ ಚಲಾಯಿಸಬಹುದಾಗಿದೆ ಹಾಗೂ ವಿಕಲಚೇತನರ ಮತದಾರರು ಈ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಮತ್ತು ಯಾರೊಬ್ಬರು ಮತದಾನದಿಂದ ದೂರ ಉಳಿಯದಂತೆ ತಪ್ಪದೇ ಮತದಾನ ಮಾಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷ ಮತಗಟ್ಟೆ ಸ್ಥಾಪನೆ:

ರಾಮನಗರ: ಸಾರ್ವತ್ರಿಕ ಲೋಕಸಭಾ ಚುನಾವಣೆ ಸಂಬಂಧ ಚುನಾವಣೆ ಪ್ರಕ್ರಿಯೆಗಳಲ್ಲಿ ವಿಶೇಷವಾಗಿ ವಿಶೇಷಚೇತನರು ಯಾವುದೇ ತಾರತಮ್ಯವಿಲ್ಲದೆ ಸಕ್ರಿಯವಾಗಿ ಭಾಗವಹಿಸುವಂತೆ ಮತ್ತು ಹೆಚ್ಚು ಸುಗಮ ಚುನಾವಣೆಗಳನ್ನಾಗಿ ಮಾಡುವ ಸಲುವಾಗಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5 ಸಖೀ ಮತಗಟ್ಟೆಗಳು, 1 ವಿಕಲಚೇತನರ ನಿರ್ವಹಣೆ ಮತಗಟ್ಟೆ, 1 ಯುವಜನ ನಿರ್ವಹಣೆಯ ಮತಗಟ್ಟೆ, 1 ಧ್ಯೇಯ ಆಧಾರಿತ ಮತಗಟ್ಟೆ, 1 ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗಿದೆ.

ಯುವಜನ ಮತಗಟ್ಟೆ ಕೇಂದ್ರಗಳು :

ಕನಕಪುರದ ಮಾನಸ ಹಿರಿಯ ಪ್ರಾಥಮಿಕ ಶಾಲೆ, ಚನ್ನಪಟ್ಟಣದ ಮಂಗಳವಾರಪೇಟೆಯ ಅಂಗನವಾಡಿ ಕೇಂದ್ರ, ರಾಮನಗರದ ಹನುಮಂತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮಾಗಡಿಯ ಇಂದಿರಾ ನಗರದ ರೈತರ ಸಮುದಾಯ ಭವನ.

ಸಖೀ ಮತಗಟ್ಟೆಗಳು:

ಕನಕಪುರದ ಗಂಗೋತ್ರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಮಾಡೆಲ್ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಮಾನಸ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಉರ್ದು ಮಾಡಲ್ ಬಾಲಕಿಯರ ಪ್ರಾಥಮಿಕ ಶಾಲೆ ಹಾಗೂ ಎಕ್ಸ್-ಮುನಿಸಿಪಲ್ ಸರ್ಕಾರಿ ಪ್ರೌಢ ಶಾಲೆ, ಚನ್ನಪಟ್ಟಣದ ಸೆಂಟ್ ಆನ್ಸ್ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ, ಸೆಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ 1 ಮತ್ತು 2, ಸರ್ಕಾರಿ ಸೆಂಟ್ರಲ್ ಪ್ರಾಥಮಿಕ ಶಾಲೆ, ಸರ್ಕಾರಿ ಮಾಡಲ್ ಪ್ರಾಥಮಿಕ ಶಾಲೆ, ರಾಮನಗರದ ಎಂ.ಜಿ. ರಸ್ತೆಯ ಎ.ಎಚ್.ಐ ರೆಹಮಾನಿಯಾ ಬಾಲಕಿಯರ ಪ್ರೌಢ ಶಾಲೆ, ಸರ್ಕಾರಿ ಆಸ್ಪತ್ರೆಯ ವಸತಿ ಗೃಹ, ಸರ್ಕಾರಿ ಆಸ್ಪತ್ರೆಯ ಹಳೆ ಕ್ವಾಟ್ರಸ್ ಮಹಡಿ, ಸರ್ಕಾರಿ ಬಾಲಕರ ಪಿ.ಯು ಕಾಲೇಜು, ಹನುಮಂತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ 2, ಮಾಗಡಿಯ ಸರ್ಕಾರಿ ಮಾಡಲ್ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ 3, ಸರ್ಕಾರಿ ಪ್ರೌಢ ಶಾಲೆ ಬಿಡದಿ, ಸರ್ಕಾರಿ ಮೆಟ್ರಿಕ್ ಈಸ್ಟ್ ಬಾಲಕರ ಹಾಸ್ಟೆಲ್, ಸರ್ಕಾರಿ ಕಾಂಪೋಸಿಟ್ ಪ್ರೌಡಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ. ವಿಕಲಚೇತನರ ಮತಗಟ್ಟೆ ಕೇಂದ್ರಗಳು:

ಕನಕಪುರದ ಸರ್ಕಾರಿ ಉರ್ದು ಪ್ರೌಢ ಶಾಲೆ, ಚನ್ನಪಟ್ಟಣದ ಸೆಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ, ರಾಮನಗರದ ಹನುಮಂತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾಗಡಿಯ ಸರ್ಕಾರಿ ಮಾಡಲ್ ಹಿರಿಯ ಪ್ರಾಥಮಿಕ ಶಾಲೆ.

ಆಟಿಕೆಗಳ ಮತಗಟ್ಟೆ:

ಚನ್ನಪಟ್ಟಣ ಸೆಂಟ್ ಜೋಸೆಪ್ ಹಿರಿಯ ಪ್ರಾಥಮಿಕ ಶಾಲೆ, ರೇಷ್ಮೆ ಮತಗಟ್ಟೆ ರಾಮನಗರದ ಜಿಲ್ಲಾ ಪಂಚಾಯತ್ ಕಚೇರಿ.

ಹಬ್ಬಗಳ ಮತಗಟ್ಟೆ:

ಮಾಗಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜು.

ಅರಣ್ಯ ಮತಗಟ್ಟೆ:

ಕನಕಪುರದ ಟೂಲ್ಸ್ ಮತ್ತು ಟ್ರೈನಿಂಗ್ ಸೆಂಟರ್‌ನಲ್ಲಿ ಸ್ಥಾಪಿಸಲಾಗಿದೆ.ಬಾಕ್ಸ್‌...........

ಕಾನೂನು ಉಲ್ಲಂಘಿಸಿದರೆ ಕ್ರಮ

ರಾಮನಗರ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಯನ್ನು ನಡೆಸುವ ಹಿನ್ನೆಲೆಯಲ್ಲಿ ಮತದಾನ ಮುಕ್ತಾಯಕ್ಕೆ ನಿಗಧಿಪಡಿಸಿದ ಗಂಟೆಗೆ ಕೊನೆಯ 48 ಗಂಟೆಗಳ ಅವಧಿಯಲ್ಲಿ ಮಾಧ್ಯಮ ವಿಷಯಗಳಿಗೆ ಸಂಬಂಧಪಟ್ಟಂತೆ ಪ್ರಜಾ ಪ್ರತಿನಿಧಿ ಕಾಯ್ದೆಯನ್ವಯ ಯಾವುದೇ ವ್ಯಕ್ತಿ ಯಾವುದೇ ಮತದಾನದ ಪ್ರದೇಶದಲ್ಲಿ ಸಿನಿಮಾಟೋಗ್ರಾಫ್, ದೂರದರ್ಶನ ಮತ್ತು ಇತರೆ ವಿದ್ಯುನ್ಮಾನ ಉಪಕರಣಗಳ ಮೂಲಕ ಯಾವುದೇ ಚುನಾವಣಾ ವಿಷಯವನ್ನು ಅಂದರೆ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವ/ಪರಿಣಾಮ ಬೀರುವ ಅಥವಾ ಲೆಕ್ಕ ಹಾಕಿದ ಯಾವುದೇ ವಿಷಯವನ್ನು ಸಾರ್ವಜನಿಕರಿಗೆ ಪ್ರದರ್ಶಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಅವಿನಾಶ್ ಆದೇಶ ಹೊರಡಿಸಿದ್ದಾರೆ.

ಯಾವುದೇ ವಿದ್ಯುನ್ಮಾನ ಮಾಧ್ಯಮದಲ್ಲಿ ಯಾವುದೇ ಅಭಿಪ್ರಾಯ ಸಂಗ್ರಹದ ಫಲಿತಾಂಶಗಳು ಅಥವಾ ಯಾವುದೇ ಇತರೆ ಸಮೀಕ್ಷೆಯ ಫಲಿತಾಂಶಗಳನ್ನು ಒಳಗೊಂಡ ಯಾವುದೇ ಚುನಾವಣಾ ವಿಷಯವನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.

ಮತದಾನ ಮೊದಲ ದಿನದಂದು ಮತದಾನಕ್ಕೆ ನಿಗಧಿಪಡಿಸಿದ ಗಂಟೆಗಳ ಆರಂಭದಿಂದ ಪ್ರಾರಂಭವಾಗುವ ಅವಧಿಯಲ್ಲಿ ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ಮುಗಿದ ಅರ್ಧ ಗಂಟೆವರೆಗೆ ಮುಂದುವರಿಯುವ ಅವಧಿಯಲ್ಲಿ ಯಾವುದೇ ಎಕ್ಸಿಟ್ ಪೋಲ್ ಫಲಿತಾಂಶ ಏನೇ ಇದ್ದರೂ ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಯಾವುದೇ ವ್ಯಕ್ತಿ ಯಾವುದೇ ಎಕ್ಸಿಟ್ ಪೋಲ್ ಸಮೀಕ್ಷೆಯನ್ನು ನಡೆಸಬಾರದು ಮತ್ತು ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮದ ಮೂಲಕ ಪ್ರಕಟಿಸಬಾರದು ಅಥವಾ ಪ್ರಚಾರ ಮಾಡಬಾರದು ಅಥವಾ ಯಾವುದೇ ರೀತಿಯಲ್ಲಿ ಫಲಿತಾಂಶವನ್ನು ಪ್ರಸಾರ ಮಾಡಬಾರದು. ಈ ಅಂಶಗಳನ್ನು ಯಾರೇ ವ್ಯಕ್ತಿಯು ಉಲ್ಲಂಘಸಿದ್ದಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ 1951ರಡಿ ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಬಾಕ್ಸ್ ...............

ರಾಮನಗರ ಜಿಲ್ಲೆಗೆ 2300 ಪೊಲೀಸರ ನಿಯೋಜನೆ

-ಕಂದಾಯ ಇಲಾಖೆ ಸಿಬ್ಬಂದಿ- 500ಕ್ಕೂ ಹೆಚು

-ಜಿಲ್ಲೆಯಲ್ಲಿ ಅರೆಸೇನಾ ಪಡೆಯ 4 ತುಕಡಿ ನಿಯೋಜನೆ

-ಬೆ.ಗ್ರಾ. ಜಿಲ್ಲೆಯಲ್ಲಿ ಅರೆಸೇನಾ ಪಡೆಯ 7 ತುಕಡಿ ನಿಯೋಜನೆ

-ಅರೆಸೇನಾ ಪಡೆಯ ಸಿಬ್ಬಂದಿ-504

-ಕೆಎಸ್ಆರ್ಪಿ ತುಕ್ಕಡಿ - 5(ರಾಮನಗರ ಜಿಲ್ಲೆಗೆ)

-ಸಿವಿಲ್ ಪೊಲೀಸರು -1041(ರಾಮನಗರ ಜಿಲ್ಲೆಗೆ)

-ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ - 80ಕ್ಕೂ ಹೆಚ್ಚು ಎಫ್ಐಆರ್

-20ಕ್ಕೂ ಹೆಚ್ಚು ಎನ್ ಸಿಆರ್

-ಮಸ್ಟರಿಂಗ್ ಕಾರ್ಯಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ವಾಹನಗಳ ವ್ಯವಸ್ಥೆ

-ಒಟ್ಟು ಮತಗಟ್ಟೆ- 2829

-ವೆಬ್ ಕ್ಯಾಸ್ಟ್ - 2829 ಮತಗಟ್ಟೆಗಳಲ್ಲಿ

-ಚುನಾವಣಾ ಸಿಬ್ಬಂದಿಗಳಿಗೆ ಇಡಿಸಿ ಮೂಲಕ ಮತದಾನಕ್ಕೆ ಅವಕಾಶ

-ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ವಿಶೇಷ ಮತಗಟ್ಟೆ

-ನೀತಿ ಸಂಹಿತೆ ಉಲ್ಲಂಘಣೆ ಸಂಬಂಧ ವಶ ಪಡಿಸಿಕೊಂಡ ಹಣ- 5.71ಕೋಟಿ

-ಜಪ್ತಿಯಾದ ಮದ್ಯದ ಮೌಲ್ಯ- 1.70 ಕೋಟಿ

-ದ್ವಿಚಕ್ರವಾಹನಗಳ ಜಪ್ತಿ- 4525ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ಜಿಲ್ಲಾಧಿಕಾರಿ ಅವಿನಾಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article