ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ರಾಜ್ಯದಲ್ಲಿ ಆರಂಭಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ತಾಲೂಕಿನಲ್ಲಿ ವೇಗ ಸಿಗದೆ ಕುಂಠಿತಗೊಂಡಿವುದನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಡಾ.ರವಿ ಅವರು ಶುಕ್ರವಾರ ನೆರಳೇಕೆರೆ ಗ್ರಾಮಕ್ಕೆ ಭೇಟಿ ನೀಡಿ ಗಣತಿಕಾರ್ಯವನ್ನು ವೀಕ್ಷಿಸಿದರು.ಗಣತಿ ಕಾರ್ಯ ಆರಂಭವಾಗಿ ೫ ದಿನಗಳಾದರೂ ತಾಲೂಕಿನಲ್ಲಿ ೯೬ ಗಣತಿದಾರರು ಲಾಗಿನ್ ಆಗದೆ ಇರುವುದು ಹಾಗೂ ಗಣತಿಕಾರ್ಯ ವೇಗವಾಗಿ ಸಾಗದೆ ಸಾಮಾಜಿಕ,ಶೈಕ್ಷಣಿಕ ಸಮೀಕ್ಷೆಗೆ ತಾಂತ್ರಿಕ ಆಡಚಣೆ ಎಂದು ಶುಕ್ರವಾರ ‘ಕನ್ನಡಪ್ರಭ’ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ನೆರಳೆಕೆರೆ ಗ್ರಾಮದಲ್ಲಿ ಸಮೀಕ್ಷೆ ಕಾರ್ಯವನ್ನು ಪರಿಶೀಲಿಸಿದರು.ಸಮೀಕ್ಷೆಗೆ ಯಾವ ಅಡಚಣೆ ಇಲ್ಲ
ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು, ಗುರುವಾರ ಮಧ್ಯಾಹ್ನದ ವರೆಗೂ ಸರ್ವರ್ ಸಮಸ್ಯೆ ಸೇರಿದಂತೆ ತಾಂತ್ರಿಕ ಸಮಸ್ಯೆಗಳಿದ್ದವು, ನಂತರ ಎಲ್ಲಾ ಸರಿಹೋಗಿದೆ. ಈಗ ಯಾವುದೇ ಅಡಚಣೆಯಿಲ್ಲದೆ ಸರ್ವೆ ಕಾರ್ಯ ಸುಸೂತ್ರವಾಗಿ ಸಾಗಿದೆ. ತಾಲೂಕಿನಲ್ಲಿ ನಿತ್ಯ ೫ ಸಾವಿರ ಕುಟುಂಬಗಳ ಸಮೀಕ್ಷೆ ಮಾಡಿ ಸರ್ಕಾರ ನಿಗದಿಪಡಿಸಿರುವ ಅ.೭ಕ್ಕೆ ಗುರಿ ಮುಟ್ಟಲು ಸಾಧ್ಯವಾಗಲಿದೆ ಎಂದರು.ಎಲ್ಲ ಬಿಇಒ, ತಹಸಿಲ್ದಾರ್ ಸೇರಿದಂತೆ ಅಧಿಕಾರಿಗಳು ಸಮೀಕ್ಷೆಗೆ ವೇಗ ನೀಡಲು ಶ್ರಮಸಬೇಕು. ಸಮೀಕ್ಷೆಗೆ ಶಿಕ್ಷಕರ ಕೊರೆತೆಯಿದ್ದ ಕಾರಣ ಎಫ್‌ಡಿಎ ಸಿಬ್ಬಂದಿಗೆ ತರಬೇತಿ ನೀಡಿ ಶುಕ್ರವಾರದಿಂದ ಗಣತಿಕಾರ್ಯಕ್ಕೆ ನೇಮಿಸಲಾಗಿದೆ. ಜಿಲ್ಲೆಯಲ್ಲೆ ಬಂಗಾರಪೇಟೆ ತಾಲೂಕು ಗಣತಿಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದರು.
ಬಿಇಒಗೆ ನೋಟಿಸ್: ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೆ.ಶಶಿಕಲಾ ರವರಿಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ. ಇನ್ನು 24 ಗಂಟೆಯೊಳಗೆ ಸಮಜಾಯಿಸಿ ನೀಡಬೇಕು, ತಪ್ಪಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲು ಕ್ಕೆ ಶಿಫಾರಸು ಮಾಡುವುದಾಗಿ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.ಈ ವೇಳೆ ಜಿಪಂ ಸಿಇಒ ಪ್ರವೀಣ್ ಬಾಗೇವಾಡಿ, ತಹಸೀಲ್ದಾರ್ ಸುಜಾತ, ತಾಪಂ ಇಒ ರವಿಕುಮಾರ್, ಬಿಇಒ ಶಶಿಕಲಾ, ಬಿಸಿಎಂ ಇಲಾಖೆ ಅಧಿಕಾರಿ ಅನಿತಾ ಇತರರು ಇದ್ದರು.