- ಬ್ರಹ್ಮಕುಮಾರಿ ಬಿ.ಕೆ.ಲೀಲಾಜಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ: ಬಿ.ವಾಮದೇವಪ್ಪ - - -
ದಾವಣಗೆರೆ ಜಿಲ್ಲಾ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಅ.8 ಮತ್ತು 9ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಮಹಿಳಾ ಸಾಹಿತ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾಗ ಮಹಿಳಾ ಸಾಹಿತ್ಯದ ಮೂಲಕ ಜಾಗೃತಿ ಮೂಡಿಸುವುದು ಸಮ್ಮೇಳನದ ಮುಖ್ಯ ಉದ್ದೇಶ ಎಂದರು.ಸಾಹಿತ್ಯ ಲೋಕಕ್ಕೆ ಮಹಿಳೆಯರ ಪ್ರವೇಶ ಈಚೆಗೆ ಹೆಚ್ಚಾಗುತ್ತಿದ್ದು, ಸಾಹಿತ್ಯವೂ ಹೆಚ್ಚಾಗಿ ಹೊರ ಬರುತ್ತಿರುವುದು ಆಶಾದಾಯಕ ಸಂಗತಿ. ಮಹಿಳೆಯರಿಂದ ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರವೇ ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಇದೀಗ ಭರದಿಂದ ಅಂತಿಮ ಸಿದ್ಧತೆಗಳೂ ನಡೆದಿದ್ದು, ಯುವತಿಯರು, ಹಿರಿಯರು, ಹಿರಿಯ ಮಹಿಳೆಯರು ಸಹ ಉತ್ಸಾಹದಿಂದ ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದು ಅವರು ಹೇಳಿದರು.
ಕ.ಸಾ.ಪ. ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಮಾತನಾಡಿ, ಆ.8ರಿಂದ ಎರಡು ದಿನಗಳ ಸಮ್ಮೇಳನದ ಸರ್ವಾಧ್ಯಾಕ್ಷರಾಗಿ ಬ್ರಹ್ಮಕುಮಾರಿ ಸಂಸ್ಥೆಯ ರಾಜಯೋಗಿನಿ ಬ್ರಹ್ಮಕುಮಾರಿ ಬಿ.ಕೆ.ಲೀಲಾಜಿ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನದಲ್ಲಿ ವಿವಿಧ ವಿಷಯಗಳ ಗೋಷ್ಟಿ, ಕವಿಗೋಷ್ಟಿ, ಪುಸ್ತಕಗಳ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮ, ಜಾನಪದ ಸಂಭ್ರಮ, ಗಾನ ವೈವಿಧ್ಯ, ಮಹಿಳಾ ಸಾಧಕಿಯರಿಗೆ ಸನ್ಮಾನ, ಜಿಲ್ಲಾ ಮಹಿಳಾ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಕ್ಕೆ ಸಮ್ಮೇಳನ ಸಾಕ್ಷಿಯಾಗಲಿದೆ ಎಂದರು.
ಬೆಳಗ್ಗೆ 10.30ಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಸಮ್ಮೇಳನ ಉದ್ಘಾಟಿಸುವರು. ಸರ್ವಾಧ್ಯಕ್ಷೆ ಬ್ರಹ್ಮಕುಮಾರಿ ಬಿ.ಕೆ.ಲೀಲಾಜಿ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಇತರರು ಭಾಗವಹಿಸುವರು. ಸಮ್ಮೇಳನದ ಅಂಗವಾಗಿ ಹೊರತಂದ ಮಹಿಳಾ ನುಡಿತೇರು ಸ್ಮರಣ ಸಂಚಿಕೆಯನ್ನು ಗಾಯತ್ರಿ ಸಿದ್ದೇಶ್ವರ ಲೋಕಾರ್ಪಣೆ ಮಾಡುವರು. 10 ಕೃತಿಗಳನ್ನು ಹೊನ್ನಾಳಿಯ ರತ್ನಮ್ಮ ಶಾಂತನಗೌಡ ಬಿಡುಗಡೆ ಮಾಡುವರು ಎಂದು ಹೇಳಿದರು.
ಕಸಾಪ ಜಿಲ್ಲಾ ಕಾರ್ಯದರ್ಶಿ ಬಿ.ದಿಳ್ಯಪ್ಪ, ಬೇತೂರು ಬಿ.ಷಡಕ್ಷರಪ್ಪ, ಕೆ.ಸಿ.ಲಿಂಗರಾಜ, ನೀಲಗುಂದ ಜಯಮ್ಮ, ವೀಣಾ ಕೃಷ್ಣಮೂರ್ತಿ, ಪತ್ರಕರ್ತರಾದ ಜಿಗಳಿ ಪ್ರಕಾಶ, ಎ.ಬಿ.ರುದ್ರಮ್ಮ, ಸತ್ಯಭಾಮ ಮಂಜುನಾಥ, ಎಸ್.ಎಂ.ಮಲ್ಲಮ್ಮ, ಹೇಮಾ ಶಾಂತಪ್ಪ ಪೂಜಾರಿ, ರಾಜೇಶ್ವರಿ ಕೇಶವ್, ಟಿ.ಎಸ್.ಶೈಲಜಾ, ಸುನಂದಾ ವರ್ಣೇಕರ್, ಕುಸುಮಾ ಲೋಕೇಶ ಇತರರು ಇದ್ದರು.
-6ಕೆಡಿವಿಜಿ7: ದಾವಣಗೆರೆಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಇತರರು ಜಿಲ್ಲಾ ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು. -6ಕೆಡಿವಿಜಿ8: ದಾವಣಗೆರೆಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿದರು.