ನಾಳೆ ಕುಮಟಾದಲ್ಲಿ ಜಿಲ್ಲೆಯ ಮೊದಲ ಟ್ರಾಮಾಸೆಂಟರ್ ಲೋಕಾರ್ಪಣೆ

KannadaprabhaNewsNetwork |  
Published : Jul 20, 2026, 01:00 AM IST
ಫೋಟೋ : ೧೯ಕೆಎಂಟಿ೧_ಟ್ರಾಮಾ ಸೆಂಟರ್ : ಕುಮಟಾದಲ್ಲಿ ನೂತನ ನಿರ್ಮಿತ ಟ್ರಾಮಾ ಸೆಂಟರ್. | Kannada Prabha

ಸಾರಾಂಶ

ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಯ ₹೨.೭೪ ಕೋಟಿ ಸಿಎಸ್‌ಆರ್ ನಿಧಿಯಡಿ ತಾಲೂಕಾಸ್ಪತ್ರೆ ಆವಾರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಟ್ರಾಮಾ ಸೆಂಟರ್‌ನ ಲೋಕಾರ್ಪಣೆಗೆ ಮುಹೂರ್ತ ನಿಗದಿಯಾಗಿದೆ.

ಕನ್ನಡಪ್ರಭ ವಾರ್ತೆ ಕುಮಟಾ

ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಯ ₹೨.೭೪ ಕೋಟಿ ಸಿಎಸ್‌ಆರ್ ನಿಧಿಯಡಿ ತಾಲೂಕಾಸ್ಪತ್ರೆ ಆವಾರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಟ್ರಾಮಾ ಸೆಂಟರ್‌ನ ಲೋಕಾರ್ಪಣೆಗೆ ಮುಹೂರ್ತ ನಿಗದಿಯಾಗಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಟ್ರಾಮಾ ಸೆಂಟರ್‌ನ್ನು ಜು. ೨೧ರಂದು ಮಧ್ಯಾಹ್ನ ೧೧.೩೦ಕ್ಕೆ ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಬಹುಕಾಲದ ಜನನಿರೀಕ್ಷೆಯ ಮೊಟ್ಟ ಮೊದಲ ಟ್ರಾಮಾ ಸೆಂಟರ್ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿವರಿಸಿ, ಪ್ರಸ್ತುತ ರಾಜ್ಯ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಟ್ರಾಮಾ ಸೆಂಟರ್ ಕಾರ್ಯನಿರ್ವಹಿಸುವುದಕ್ಕೆ ಬೇಕಾದ ವೈದ್ಯರು, ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿಗಳನ್ನು ಶೀಘ್ರ ಒದಗಿಸುವ ವಿಶ್ವಾಸ ಇದೆ. ಒಟ್ಟಿನಲ್ಲಿ ಪ್ರಕೃತಿ ವಿಕೋಪ, ಅಪಘಾತದಂತಹ ವಿಷಮ ಪರಿಸ್ಥಿತಿಯಲ್ಲಿ ಒಂದಷ್ಟು ಜೀವ ಉಳಿಸುವ ಪ್ರಯತ್ನಕ್ಕೆ ಟ್ರಾಮಾ ಸೆಂಟರ್ ಪೂರಕವಾಗಲಿ ಎಂಬುದೇ ನಮ್ಮ ಉದ್ದೇಶವಾಗಿದೆ ಎಂದರು.

ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಗಣೇಶ ನಾಯ್ಕ ಮಾತನಾಡಿ, ಸದ್ಯ ಟ್ರಾಮಾ ಸೆಂಟರ್ ಬಳಕೆಯಿಂದ ಹಲವಾರು ಜೀವ ಉಳಿಸುವ ಸಾಧ್ಯತೆ ಹೆಚ್ಚಿದೆ. ಟ್ರಾಮಾ ಸೆಂಟರ್‌ಗೆ ವೈದ್ಯಕೀಯ ಸಿಬ್ಬಂದಿ ಪ್ರಸ್ತಾವನೆಗೆ ೧೬ ಮಂದಿಗೆ ಮಂಜೂರಾತಿ ಸಿಕ್ಕಿತ್ತು. ಸದ್ಯ ನಮಗೆ ಓರ್ವ ಎಲುಬು-ಕೀಲು ತಜ್ಞರ ಸಹಿತ ನಾಲ್ವರು ಮಾತ್ರ ಲಭ್ಯರಾಗಿದ್ದಾರೆ. ಈಗಾಗಲೇ ಟ್ರಾಮಾ ಸೆಂಟರ್‌ಗೆ ೫೭ ಕ್ಕೂ ಹೆಚ್ಚು ಬಗೆಯ ತಪಾಸಣೆಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ನಡೆಸಬಲ್ಲ ಸಂಪೂರ್ಣ ಸ್ವಯಂಚಾಲಿತ ಬಯೋ ಕೆಮಿಸ್ಟ್ರಿ ಅನಲೈಜರ್ ಯಂತ್ರ, ಎಲುಬಿನ ನೇರ ಒಳವೀಕ್ಷಣೆ ಸಾಧ್ಯವಾಗಿಸುವ ಸಿಎಆರ್ ಎಕ್ಸರೇ ಯಂತ್ರ ಸಹಿತ ಎಲ್ಲ ಅಗತ್ಯ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ ಎಂದರು.

ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಟ್ರಾಮಾ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಭಾರತ ಎಲೆಕ್ಟ್ರಾನಿಕ್ಸ ಲಿಮಿಟೆಡ್(ಬಿಇಎಲ್)ನ ನಿರ್ದೇಶಕ ರಜನೀಶ ಶರ್ಮಾ, ಜಿಎಂ ಸಂಜಯ ಅಗರ್ವಾಲ್, ಜಿಎಂ. ಟಿ.ಎನ್.ಸಿಂಗ್, ಡಿಜಿಎಂ ಡಾ. ಶಶಿಭೂಷಣ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷ್ಮಾ ಗೋಡಬೋಲೆ, ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ., ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಪಂ ಇಒ ಡಾ.ದಿಲೀಶ್ ಶಶಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಂಜಯ ದೊಡ್ಮನಿ, ಉಪವಿಭಾಗಾಧಿಕಾರಿ ಪಿ.ಶ್ರವಣಕುಮಾರ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತ್ ಜೋಡೋ ಯುವಕರ ಸಂಘ ಕೈಬಿಟ್ಟು ಅಭಿವೃದ್ಧಿಗೆ ಅನುದಾನ ನೀಡಿ
ಕೆಪಿಟಿಸಿಎಲ್ ಪರಿಹಾರ ದರ ಹೆಚ್ಚಳಕ್ಕೆ ಒತ್ತಾಯ