ಸಾಲಗಾರರಿಂದ ತಪ್ಪಿಸಿಕೊಳ್ಳಲು ಕಳುವು ಕತೆ ಹೆಣೆದಿದ್ದ ಕುಟುಂಬದ ನಾಟಕ ಬಯಲು!

KannadaprabhaNewsNetwork | Published : Feb 28, 2025 12:49 AM

ಸಾರಾಂಶ

ಹಾಡಹಗಲೇ ಒಬ್ಬಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ 25 ಲಕ್ಷ ರು.ಗಳಿಗೂ ಹೆಚ್ಚು ಮೌಲ್ಯದ ನಗ-ನಾಣ್ಯ ದೋಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ ಅಚ್ಚರಿ ಎಂಬಂತೆ ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ಮನೆಯವರೇ ಕಳ್ಳತನದ ನಾಟಕ ರಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಬೀದರ್‌

ಹಾಡಹಗಲೇ ಒಬ್ಬಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ 25 ಲಕ್ಷ ರು.ಗಳಿಗೂ ಹೆಚ್ಚು ಮೌಲ್ಯದ ನಗ-ನಾಣ್ಯ ದೋಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ ಅಚ್ಚರಿ ಎಂಬಂತೆ ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ಮನೆಯವರೇ ಕಳ್ಳತನದ ನಾಟಕ ರಚಿಸಿದ್ದರು ಎಂಬ ವಿಷಯವನ್ನು ಬಯಲಿಗೆ ಎಳೆದಿದ್ದಾರೆ.

ಇದೇ ಫೆ.21ರಂದು ಔರಾದ್‌ ತಾಲೂಕಿನ ಕೌಠಾ (ಬಿ) ಗ್ರಾಮದ ಓಂಕಾರ ಅಪ್ಪಾರಾವ್‌ ಗಾದಗೆ ಎಂಬುವವರ ಮನೆಯಲ್ಲಿ ಬೆಳಗಿನ ಹೊತ್ತು ಪತಿ ಹಾಗೂ ಮಾವ ಇಬ್ಬರೂ ಹೊರ ಹೋಗಿದ್ದ ಸಂದರ್ಭ ಇಬ್ಬರು ಅಪರಿಚಿತ ಮುಸುಕುಧಾರಿಗಳು ಮನೆಗೆ ನುಗ್ಗಿ ಹಲ್ಲೆ ನಡೆಸಿ 25 ತೊಲೆ ಬಂಗಾರದ ಆಭರಣಗಳು ಹಾಗೂ ಒಂದು ಲಕ್ಷ ರು. ನಗದನ್ನು ದೋಚಿಕೊಂಡು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಮನೆಯಲ್ಲಿದ್ದ ಪ್ರೀತಿ ಓಂಕಾರ ಗಾದಗೆ ಅವರ ಹೇಳಿಕೆಯ ಮೇರೆಗೆ ಪತಿ ಓಂಕಾರ ಸಂತಪೂರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತಕ್ಷಣವೇ ಎಸ್‌ಪಿ ಪ್ರದೀಪ ಗುಂಟಿ ಅವರು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯನ್ನು ವಿಚಾರಿಸಿದ್ದು ಅಲ್ಲದೆ, ಎಎಸ್‌ಪಿ ಚಂದ್ರಕಾಂತ ಪೂಜಾರಿ ಅವರ ಮಾರ್ಗ ದರ್ಶನದಲ್ಲಿ ಡಿಎಸ್‌ಪಿ ಶಿವಾನಂದ ಪವಾಡಶೆಟ್ಟಿ ಅವರ ನೇತೃತ್ವದ ತಂಡ ರಚಿಸಿ ತನಿಖೆಗೆ ಸೂಚಿಸಿದ್ದರು.

ಕೂಲಂಕಶ ತನಿಖೆಯಲ್ಲಿ ಪಿರ್ಯಾದಿ ಹಾಗೂ ಕುಟುಂಬದವರು ತಮ್ಮ ಮನೆಯ ಆರ್ಥಿಕ ಒತ್ತಡದಿಂದ ಮತ್ತು ಸಾಲಗಾರರಿಂದ ಪಾರಾಗಲು ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ ಸುಳ್ಳು ಪ್ರಕರಣವನ್ನು ದಾಖಲಿಸಿದ್ದು, ತನಿಖೆಯಲ್ಲಿ ಪತ್ತೆಯಾಗಿದೆ. ಕಳುವಾಗಿವೆ ಎನ್ನಲಾದ ಎಲ್ಲ ಚಿನ್ನದ ವಸ್ತುಗಳು ಮತ್ತು ನಗದು ಹಣ ಪಿರ್ಯಾದಿಯ ಮನೆಯಲ್ಲಿ ಪತ್ತೆಯಾಗಿವೆ. ಸದರಿ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಎಲ್ಲ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಭಿನಂದಿಸುವುದಾಗಿ ಮತ್ತು ಸಾರ್ವಜನಿಕರ ಆಸ್ತಿ ಪಾಸ್ತಿ, ಪ್ರಾಣ ಕಾಪಾಡುತ್ತೇವೆ ಎಂದು ಭರವಸೆಯನ್ನು ನೀಡುತ್ತೇವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಪ್ರದೀಪ ಗುಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article