ಗೋಕರ್ಣದಲ್ಲಿ ನಾಳೆ ಹೂಳೆತ್ತುವ ಕಾರ್ಯ ಅರೆಬರೆ

KannadaprabhaNewsNetwork | Published : Apr 30, 2025 12:35 AM

ಸಾರಾಂಶ

ಗೋಕರ್ಣದ ಮೀನು ಮಾರುಕಟ್ಟೆಯ ಹತ್ತಿರದಿಂದ ಸ್ಮಶಾನ ಕಾಳಿ ಮಂದಿರದ ಬಳಿ ಸಂಗಮ ನಾಲಾ ಸೇರುವ ಹಳ್ಳದ ಹೂಳೆತ್ತುವ ಕಾಮಗಾರಿಯನ್ನು ಈ ವರ್ಷವೂ ಪೂರ್ಣಗೊಳಿಸದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಮಳೆಗಾಲ ಪ್ರಾರಂಭವಾಗುವ ಸಮಯದಲ್ಲಿ ಆರಂಭಿಸಿ ಅರ್ಧಕ್ಕೆ ಬಿಡಲಾಗಿತ್ತು.

ಗೋಕರ್ಣ: ಮೀನು ಮಾರುಕಟ್ಟೆಯ ಹತ್ತಿರದಿಂದ ಸ್ಮಶಾನ ಕಾಳಿ ಮಂದಿರದ ಬಳಿ ಸಂಗಮ ನಾಲಾ ಸೇರುವ ಹಳ್ಳದ ಹೂಳೆತ್ತುವ ಕಾಮಗಾರಿಯನ್ನು ಈ ವರ್ಷವೂ ಪೂರ್ಣಗೊಳಿಸದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಮಳೆಗಾಲ ಪ್ರಾರಂಭವಾಗುವ ಸಮಯದಲ್ಲಿ ಆರಂಭಿಸಿ ಅರ್ಧಕ್ಕೆ ಬಿಡಲಾಗಿತ್ತು. ಆದರೆ ಈ ವರ್ಷ ಮತ್ತೆ ಮಳೆಗಾಲ ಹತ್ತಿರ ಬರುತ್ತಿದ್ದರೂ ಕಾಮಗಾರಿ ಮುಗಿಸಿಲ್ಲ.ಎರಡು ವರ್ಷಗಳ ಹಿಂದೆ ಚಿಕ್ಕ ನೀರಾವರಿ ಇಲಾಖೆಯಿಂದ ₹೭೦ ಲಕ್ಷ ವೆಚ್ಚದಲ್ಲಿ ಈ ಹಳ್ಳದ ಹೂಳೆತ್ತಲು ಹಣ ಮಂಜೂರಾಗಿತ್ತು. ಆದರೆ ಇಲಾಖೆ ಒಂದು ವರ್ಷ ವಿಳಂಬವಾಗಿ ಅಂದರೆ ಕಳೆದ ಮೇ ತಿಂಗಳ ಅಂತ್ಯದಲ್ಲಿ ಕೆಲಸ ಆರಂಭಿಸಿತ್ತು. ೫೦೦ ಮೀಟರ್‌ಗೂ ಹೆಚ್ಚು ದೂರದ ಹಳ್ಳದ ಅಕ್ಕಪಕ್ಕದಲ್ಲಿನ ಹೊಟೇಲ್, ವಸತಿಗೃಹ, ಮನೆಗಳಿಂದ ಹೊಲಸು ನೀರು ಬಿಡುವುದರಿಂದ ಗಬ್ಬು ನಾರುತ್ತಿತ್ತು. ಇದನ್ನು ಬಂದ್‌ ಮಾಡಿಸಿ ಅಂತೂ ಕೆಲಸ ಆರಂಭಿಸುವ ವೇಳೆ ಮಳೆ ಆಗಾಗ ಬೀಳತೊಡಗಿತ್ತು. ಈ ಕೆಲಸಕ್ಕಾಗಿ ಯಂತ್ರ ಇಳಿಸಲು ಹೊರಗಡೆಯಿಂದ ಮಣ್ಣು ರಾಶಿ ಹಾಕಿದ್ದರ ಪರಿಣಾಮ ಅಕಾಲಿಕವಾಗಿ ಸುರಿದ ಮಳೆಯಿಂದ ಹಳ್ಳದ ಅಕ್ಕಪಕ್ಕದ 500ಕ್ಕೂ ಹೆಚ್ಚು ಮನೆ ಹಾಗೂ ಕೃಷಿ ಭೂಮಿಗೆ ನೀರು ನುಗ್ಗಿತ್ತು. ಇದರಿಂದ ಸ್ಥಳೀಯರು ಪ್ರತಿಭಟಿಸಿ ತಕ್ಷಣ ಮಣ್ಣು ತೆರವುಗೊಳಿಸಿ ಸರಪಡಿಸುವಂತೆ ಆಗ್ರಹಿಸಿದ್ದರು. ಅಲ್ಲದೇ ಹೂಳೆತ್ತುವ ಕಾರ್ಯ ಬೇಸಿಗೆಯಲ್ಲಿ ಸಮರ್ಪಕವಾಗಿ ನಡೆಸುವಂತೆ ಜನರು ಆಗ್ರಹಿಸಿದ್ದರು. ನಂತರ ಅಲ್ಲಿಗೆ ಕೆಲಸ ನಿಲ್ಲಿಸಲಾಗಿತ್ತು.

ಆದರೆ ಈ ವರ್ಷ ಮೇ ತಿಂಗಳ ಬಂದರೂ ಕೆಲಸ ಪ್ರಾರಂಭಿಸದೆ ಬಿಟ್ಟಿದ್ದು, ಪ್ರಸ್ತುತ ಈ ಜಾಗದಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯದ ಜತೆ ಹೊಲಸು ನೀರು ಅಲ್ಲಲ್ಲಿ ನಿಂತು ಗಬ್ಬು ನಾರುತ್ತಿದ್ದು, ರೋಗ-ರುಜಿನದ ಜತೆ ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುವ ಆತಂಕವಿದ್ದು, ತಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ. ಈ ಕುರಿತು ಚಿಕ್ಕ ನೀರಾವರಿ ಇಲಾಖೆ ಎಂಜಿನಿಯರ್‌ ಬಳಿ ಮಾಹಿತಿ ಪಡೆಯಲು ದೂರವಾಣಿ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ.

ಕಳೆದ ವರ್ಷ ಮಳೆಗಾಲದಲ್ಲಿ ಈ ಅರೆಬರೆ ಕೆಲಸದಿಂದ ತೀವ್ರ ತೊಂದರೆಯಾಗಿತ್ತು. ಬೇಸಿಗೆಯ ಪ್ರಾರಂಭದಲ್ಲೇ ಕೆಲಸ ಆರಂಭಿಸಿ ಮಳೆ ಬರುವ ಒಳಗೆ ಪೂರ್ಣಗೊಳಿಸಲು ಅಂದೇ ನಾವು ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೆ ಈ ವರ್ಷ ಇದುವರೆಗೂ ಕೆಲಸ ಆರಂಭಿಸಿಲ್ಲ. ಈ ಬಗ್ಗೆ ತಕ್ಷಣ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಈ ಭಾಗದ ನಿವಾಸಿಗಳಿಗೆ ಉತ್ತರಿಸಬೇಕು ಎಂದು ಸ್ಥಳೀಯ ನಿವಾಸಿ ಮಾಣೇಶ್ವರ ಗೌಡ ಹೇಳಿದರು.ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ನಿರ್ಲಕ್ಷಿಸುತ್ತಿದ್ದು, ಕೆಲಸ ಪೂರ್ಣಗೊಳಿಸಲಾಗಿದೆ ಎಂದು ದಾಖಲೆಯಲ್ಲಿ ನಮೂದಿಸಿದ್ದಾರೆಯೇ ಎಂಬ ಸಂದೇಹ ವ್ಯಕ್ತವಾಗುತ್ತಿದೆ. ಕೆಲಸ ಯಾವಾಗ ಪೂರ್ಣಗೊಳ್ಳುತ್ತದೆ? ಎಷ್ಟು ಹಣ ಖರ್ಚಾಗಿದೆ ಎಂಬದನ್ನು ಜನರಿಗೆ ತಿಳಿಸಬೇಕು ಎಂದು ಗ್ರಾಪಂ ಸದಸ್ಯರು ಮಂಜುನಾಥ ಜನ್ನು ಹೇಳಿದರು.

Share this article