ವಸಂತ ಶಿಕ್ಷಣ ಶಿಬಿರ । ದಾಸ ಸಾಹಿತ್ಯ ಪ್ರಾಜೆಕ್ಟ್ ಕುರಿತು ಎರಡು ದಿನ ಕಾರ್ಯಕ್ರಮ । ದಾಸರ ಗೀತೆ ಕಲಿಕೆ
ಹೆಣ್ಣಿಗೆ ದೈವತ್ವ ನೀಡಿದ ಸಮಾಜದಲ್ಲೇ ಹೆಣ್ಣನ್ನು ಮಾಯೆ ಎನ್ನುವ ದ್ವಂಧ್ವ ಮನಸ್ಥಿತಿಯೂ ಇದ್ದು, ಹೆಣ್ಣನ್ನು ದೇವತೆ ರೂಪದಲ್ಲಿ ಪೂಜಿಸುವ, ಗೌರವಿಸುವ, ಆರಾಧಿಸುವ ಪರಂಪರೆ ನಮ್ಮ ನೆಲದ್ದಾಗಿದೆ ಎಂದು ಚಿತ್ರದುರ್ಗದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ತಿರುಪತಿಯ ತಿರುಮಲ ತಿರುಪತಿ ದೇವಸ್ಥಾನಂನಿಂದ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ಎರಡು ದಿನಗಳ ವಸಂತ ಶಿಕ್ಷಣ ಶಿಬಿರ ಉದ್ಘಾಟನೆ ನೆರವೇರಿಸಿ, ಸಾನಿಧ್ಯ ವಹಿಸಿ ಮಾತನಾಡಿ, ಹೆಣ್ಣು ನಮ್ಮ, ನಿಮ್ಮೆಲ್ಲರ ದೃಷ್ಟಿಯಲ್ಲಿ ದೈವವಾಗಿದ್ದಾಳೆ ಎಂದರು.ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ, ಗಂಡು ಮಕ್ಕಳಷ್ಟೇ ಜನಿವಾರ ಧರಿಸಬೇಕೆಂಬ ತಮ್ಮ ಸಮುದಾಯದ ಕೆಲ ಸಂಪ್ರದಾಯ ವಿರೋಧಿಸಿ ಮನೆಯಿಂದ ಹೊರಗೆ ಕಾಲಿಟ್ಟ ಬಸವಣ್ಣನವರು 12ನೇ ಶತಮಾನದಲ್ಲೇ ಹೆಣ್ಣಿನ ಸ್ವಾತಂತ್ರ್ಯಕ್ಕಾಗಿ ಮನೆ ಬಿಟ್ಟವರು. ತಮ್ಮ ತಾಯಿ, ಸಹೋದರಿಗೆ ಯಾಕೆ ಜನಿವಾರ ಇಲ್ಲ. ಅಂತಹವರಿಗೆ ಜನಿವಾರ ಧರಿಸಲು ಅವಕಾಶ ಇಲ್ಲವೆಂದರೆ ನನಗೂ ಬೇಡವೆಂದು ಹೆಣ್ಣುಮಕ್ಕಳ ಬಗ್ಗೆ ಮೊಟ್ಟ ಮೊದಲಿಗೆ ಧ್ವನಿ ಎತ್ತಿದ್ದಲ್ಲದೇ ಸಮ ಸಮಾಜಕ್ಕಾಗಿ ಶ್ರಮಿಸಿದರು ಎಂದು ಹೇಳಿದರು.
ತಿರುಪತಿಯಲ್ಲಿ ಶ್ರೀ ಶ್ರೀನಿವಾಸದ ಸನ್ನಿಧಿಯಲ್ಲಿ ಅಣ್ಣಮಯ್ಯನವರ ಕೀರ್ತನೆ, ಭಜನೆ ಇಂದಿಗೂ ನಡೆಯುತ್ತವೆ. ಸುಮಾರು 32 ಸಾವಿರಕ್ಕೂ ಅದಿಕ ಕೀರ್ತನೆ, ಭಜನೆ ರಚಿಸಿದ ಅಣ್ಣಮಯ್ಯ ವಂಶಸ್ಥರೆ ಇಂದಿಗೂ ಸುಕ್ಷೇತ್ರದಲ್ಲಿ ಶ್ರೀಸ್ವಾಮಿಯ ಸುಪ್ರಬಾತ ಹಾಡುತ್ತಾರೆ ಎಂದರು.
ಬಿಜೆಪಿ ಹಿರಿಯ ಮುಖಂಡರಾದ ಅಣಬೇರು ಜೀವನಮೂರ್ತಿ, ಎಸ್.ಎಂ.ವೀರೇಶ ಹನಗವಾಡಿ, ಬಿ.ಎಸ್.ಜಗದೀಶ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ಬಿಜೆಪಿ ಯುವ ಮುಖಂಡ ಮಾಯಕೊಂಡ ಜಿ.ಎಸ್.ಶ್ಯಾಮ್, ಕತ್ತಲಗೆರೆ ಅನಿಲಕುಮಾರ, ಶೋಷಿತ ವರ್ಗಗಳ ಒಕ್ಕೂಟದ ಮುಖಂಡ ಬಾಡದ ಆನಂದರಾಜ, ಬೆಂಗಳೂರು ಆಕಾಶವಾಗಿ ಎ ಗ್ರೇಡ್ ಕಲಾವಿದರಾದ ಅರ್ಚನಾ ಕುಲಕರ್ಣಿ ಇತರರು ಇದ್ದರು. ನಂತರ ಅರ್ಚನ ಕುಲಕರ್ಣಿ ಶಿಬಿರಾರ್ಥಿಗಳಿಗೆ ದಾಸರ ಹಾಡುಗಳನ್ನು ಕಲಿಸಿಕೊಟ್ಟರು.