- ರೋಸಿಹೋದ ಗ್ರಾಮಸ್ಥರಿಂದ ಮುಖ್ಯ ರಸ್ತೆಯೇ ಬಂದ್ । ಜಿಲ್ಲಾಡಳಿತ ಮಧ್ಯ ಪ್ರವೇಶಕ್ಕೆ ಹಳ್ಳಿಗರ ಒತ್ತಾಯ
- - -* ಮುಖ್ಯಾಂಶಗಳು
- ಗ್ರಾಮ ಠಾಣಾ ವ್ಯಾಪ್ತಿ ತಮ್ಮ ಜಾಗವೆಂದು ಬೇಲಿ ಜಡಿದ ಕುಟುಂಬ- ಅಣ್ಣ-ತಮ್ಮಂದಿರ ಜಗಳದಲ್ಲಿ ಹಟ್ಟಿಹಾಳ ಗ್ರಾಮಸ್ಥರಿಗೆ ಸಂಕಷ್ಟ- ವೈಯಕ್ತಿಕ ವಿಚಾರ ದೊಡ್ಡದಾಗಿ ಮಾಡಿ ಗ್ರಾಮದ ರಸ್ತೆಗೆ ಬೇಲಿ
- ಪರಿಣಾಮ ಪುಟ್ಟ ಗ್ರಾಮದ ಐದು ಕುಟುಂಬದ ಜನರಿಗೆ ತೀವ್ರ ಕಷ್ಟ - ತಂತಿಬೇಲಿ ತೆರವುಗೊಳಿಸಲು ಗ್ರಾಪಂ, ಶಾಸಕರು ಹೇಳಿದ್ರೂ ಕಿವಿಗೊಡದ ಸಹೋದರ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಹೊನ್ನಾಳಿ ತಾಲೂಕಿನ ಹಟ್ಟಿಹಾಳ ಗ್ರಾಮದಲ್ಲಿ ಜಾಗ ತಮ್ಮದು ಎಂದು ಗಲಾಟೆ ನಡೆಸಿದ ಅಣ್ಣ-ತಮ್ಮಂದಿರು ಗ್ರಾಮದ ಮುಖ್ಯ ರಸ್ತೆಗೆ ಎರಡು ತಿಂಗಳ ಹಿಂದೆಯೇ ತಂತಿಬೇಲಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಮನೆ, ತೋಟ-ಜಮೀನುಗಳಿಗೆ ಸಂಚರಿಸಲು ರಸ್ತೆ ಇಲ್ಲದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಸಹೋದರರ ಕೀಟಲೆಯಿಂದ ರೋಸಿ ಹೋದ ಗ್ರಾಮಸ್ಥರು ಸಹ ಒಂದು ಹೆಜ್ಜೆ ಮುಂದೆ ಹೋಗಿ, ಊರಿನ ಮುಖ್ಯ ರಸ್ತೆಯನ್ನೇ ಬಂದ್ ಮಾಡಿದ್ದಾರೆ!ಗ್ರಾಮ ಠಾಣಾ ದಾಖಲೆಯಲ್ಲಿ ಯಾವುದೇ ರಸ್ತೆ ಅಂತಲೇ ಇಲ್ಲ, ಇದು ತಮಗೆ ಸೇರಿದ ಜಾಗ ಎಂದು ಗ್ರಾಮದ ಸಹೋದರರಲ್ಲಿ ಒಬ್ಬನಾದ ಶಿವಕುಮಾರ ಕುಟುಂಬ ಹೇಳಿ, ರಸ್ತೆಗೆ ತಂತಿ ಬೇಲಿ ಬಿಗಿದಿದೆ. ಸುಮಾರು 30 ಮನೆಗಳು, ಕೇವಲ 120 ಜನಸಂಖ್ಯೆ ಹೊಂದಿರುವ ಪುಟ್ಟ ಗ್ರಾಮ ಹಟ್ಟಿಹಾಳದಲ್ಲಿ 2 ತಿಂಗಳ ಹಿಂದೆಯೇ ಬೇಲಿ ಹಾಕಿದ್ದಾರೆ. ಇದರಿಂದ ನಿತ್ಯವೂ ಗ್ರಾಮಸ್ಥರು ಓಡಾಡಲು ಗೋಳಾಟ ಮುಂದುವರಿದಿದೆ.
ಶಾಸಕರ ಮಾತು ಕೇಳಿಲ್ಲ:ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಗ್ರಾಮಕ್ಕೆ ಭೇಟಿ ನೀಡಿ, ತಂತಿಬೇಲಿ ತೆರವುಗೊಳಿಸುವಂತೆ ತಿಳಿಹೇಳಿದ್ದಾರೆ. ಆದರೆ, ಬೇಲಿ ಹಾಕಿರುವ ಕುಟುಂಬ ಮಾತ್ರ ಶಾಸಕರ ಮನವಿಗೆ ಸೊಪ್ಪು ಹಾಕುತ್ತಿಲ್ಲ. ಓಡಾಡುವ ರಸ್ತೆಗೆ ತಂತಿ ಬೇಲಿ ಬಿದ್ದಿದ್ದರಿಂದ ಶಾಲಾ ಮಕ್ಕಳು, ಮನೆಯಲ್ಲಿರುವ ಹೆಣ್ಣುಮಕ್ಕಳು, ವೃದ್ಧರು, ವಿಕಲಚೇತನರು ಮನೆಗಳ ತಲುಪಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ರೋಸಿ ಹೋದ ಗ್ರಾಮಸ್ಥರು ಸಹ ಊರಿನ ಮುಖ್ಯ ರಸ್ತೆಗೇ ಬೇಲಿಹಾಕಿದ್ದಾರೆ. ಕುಟುಂಬದವರು ಹೊರಗಡೆ ಬರದಂತೆ ಗ್ರಾಮಸ್ಥರು ಸಹ ರಸ್ತೆ ಬಂದ್ ಮಾಡಿ, ಸಹೋದರರ ನಡೆಗೆ ತಿರುಗೇಟು ನೀಡಿದ್ದಾರೆ. ತಂತಿಬೇಲಿ ಹಾಕಿದ್ದ ಕುಟುಂಬದ ಮನೆ ಮುಂದಿನ ರಸ್ತೆಯಲ್ಲಿ ಗ್ರಾಮಸ್ಥರು ಮಣ್ಣು ಸುರಿದು, ರಸ್ತೆಯನ್ನೇ ಬಂದ್ ಮಾಡಿದ್ದಾರೆ.
ಜಿಲ್ಲಾಡಳಿತ, ತಾಲೂಕು ಆಡಳಿತ ಮಧ್ಯ ಪ್ರವೇಶಿಸಲಿ:ಹಟ್ಟಿಹಾಳ ಗ್ರಾಮದ ರಸ್ತೆಗೆ ತಂತಿ ಬೇಲಿ ಹಾಕಿರುವ ಸಹೋದರರ ಕುಟುಂಬಗಳಿಗೆ ತಿಳಿಹೇಳಿ, ಗ್ರಾಮಕ್ಕೆ ಪುನಃ ರಸ್ತೆ ಸೌಕರ್ಯ ಕಲ್ಪಿಸುವಂತೆ ತಾಲೂಕು ಆಡಳಿತಕ್ಕೆ ರೈತರು ಸಾಕಷ್ಟು ಮನವಿ ಮಾಡಿದ್ದಾರೆ. ಶಾಸಕರು ಸೇರಿದಂತೆ ಯಾರ ಮಾತು, ಒತ್ತಡ, ಪ್ರಭಾವಕ್ಕೂ ಸಹೋದರರು ಮಾತ್ರ ಬಗ್ಗುಲ್ಲಿಲ್ಲ, ತಂತಿಬೇಲಿ ತೆರವಿಗೆ ಮುಂದಾಗುತ್ತಿಲ್ಲ. ಈ ಹಿನ್ನೆಲೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಶೀಘ್ರ ಮಧ್ಯ ಪ್ರವೇಶಿಸಬೇಕು. ಊರಿನಲ್ಲಿ ಜನರು ಸಂಚರಿಸಲು ಅಗತ್ಯವಾದ ರಸ್ತೆ ಸಮಸ್ಯೆ ಬಗೆಹರಿಸಿ, ಶಾಂತಿ ನೆಲೆಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
- - --11ಕೆಡಿವಿಜಿ10, 11: ಹಟ್ಟಿಹಾಳದಲ್ಲಿ ರಸ್ತೆ ಇದ್ದ ಜಾಗಕ್ಕೆ ತಂತಿ ಬೇಲಿ ಹಾಕಿರುವುದು.