* ಅನಂತಕುಮಾರ್
ಶಿಕ್ಷಕರ ಕೊರತೆ ಹಾಗೂ ಶಿಥಿಲ ಕಟ್ಟಡದ ಸಮಸ್ಯೆಗಳು ಸೇರಿ ಹಲವಾರು ಸಮಸ್ಯೆಗಳ ನಡುವೆಯೂ ತಾಲೂಕಿನಲ್ಲಿ ಶಿಕ್ಷಣ ಇಲಾಖೆ ನೂತನ ಶೈಕ್ಷಣಿಕ ವರ್ಷಾರಂಭಕ್ಕೆ ಸಿದ್ಧತೆಗಳ ಕೈಗೊಂಡಿದೆ.
ತಾಲೂಕಿನಲ್ಲಿ ೨೮೭ ಸರ್ಕಾರಿ ಶಾಲೆಗಳು, ೬೧ ಅನುದಾನಿತ ಶಾಲೆಗಳು, ೮೬ ಅನುದಾನ ರಹಿತ ಶಾಲೆಗಳು, ೧೭ ವಸತಿ ಶಾಲೆಗಳು ಹಾಗು ೨ ಇತರೆ ಶಾಲೆಗಳನ್ನು ಒಳಗೊಂಡಂತೆ ೪೪೮ ಶಾಲೆಗಳನ್ನು ಹೊಂದಿದೆ. ಅವುಗಳಲ್ಲಿ ೨೯೮ ಶಾಲೆಗಳು ಗ್ರಾಮೀಣ ಪ್ರದೇಶದಲ್ಲಿದ್ದರೆ, ೧೫೦ ಶಾಲೆಗಳು ನಗರ ಪ್ರದೇಶ ವ್ಯಾಪ್ತಿಯಲ್ಲಿವೆ.ತಾಲೂಕಿನ ಒಟ್ಟು ೪೪೮ ಶಾಲೆಗಳಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ೭೬ ಶಾಲೆಗಳು ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಒಳಪಡುವ ೩೩ ಶಾಲೆಗಳ ಕಟ್ಟಡಗಳು ಬಹಳಷ್ಟು ಹಾನಿಗೊಳಗಾಗಿದ್ದು, ದುರಸ್ತಿಯ ನಿರೀಕ್ಷೆಯಲ್ಲಿವೆ. ಇವುಗಳ ಪೈಕಿ ೪೧ ಶಾಲೆಗಳು ಸಂಪೂರ್ಣ ಹಾಳಾಗಿದ್ದು, ಇವುಗಳನ್ನು ನೆಲಸಮಗೊಳಿಸಿ ಹೊಸ ದಾಗಿ ನಿರ್ಮಿಸುವ ಅಗತ್ಯವಿದೆ. ಇದು ಶಾಲಾ ಕಟ್ಟಡಗಳ ಸಮಸ್ಯೆಯಾದರೆ, ಮತ್ತೊಂದೆಡೆ ತಾಲ್ಲೂಕಿನ ಬಹುತೇಕ ಬಿಸಿಯೂಟದ ಅಡುಗೆ ಕೋಣೆಗಳು ಶಿಥಿಲಾವಸ್ಥೆಯಿಂದ ಕೂಡಿವೆ. ಇದು ತಾಲೂಕಿನ ಶಾಲೆಗಳ ಚಿತ್ರಣವಾದರೆ ಮತ್ತೊಂದೆಡೆ ಶಿಕ್ಷಕರ ಸಮಸ್ಯೆ ಕೂಡ ಕೇವಲ ಪ್ರಾಥಮಿಕ ಶಾಲೆಗಳಲ್ಲಿಯೇ ೧೩೩ ಶಿಕ್ಷಕರ ಕೊರತೆ ಕಂಡು ಬಂದಿದೆ. ತಾಲೂಕಿನ ೨೬೩ ಪ್ರಾಥಮಿಕ ಶಾಲೆಗಳಿಗೆ ೯೯೧ ಶಿಕ್ಷಕರು ಮಂಜೂರಾಗಿದ್ದು, ಅದರಲ್ಲೂ ೧೩೩ ಶಿಕ್ಷಕರ ಕೊರತೆ ಕಂಡು ಬಂದಿದೆ. ತಾಲೂಕಿನಲ್ಲಿ ೯೨ ಸಹ ಶಿಕ್ಷಕರು, ೩೩ ಮುಖ್ಯೋಪಾಧ್ಯಾಯರು, ೬ ದೈಹಿಕ ಶಿಕ್ಷಕರು, ೨ ವಿಶೇಷ ಶಿಕ್ಷಕರು ಸೇರಿದಂತೆ ೧೩೩ ಶಿಕ್ಷಕರ ಕೊರತೆಯಿದ್ದು, ಪ್ರಸ್ತುತ ೭೦ ಅತಿಥಿ ಶಿಕ್ಷಕರನ್ನಾದರೂ ನೇಮಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.
ಮೇ ೩೧ರಂದು ಚಾಲನೆ :
ಸರ್ಕಾರದ ಮಾರ್ಗಸೂಚಿಯಂತೆ ಈ ಬಾರಿ ಶೈಕ್ಷಣಿಕ ವರ್ಷಾರಂಭಕ್ಕೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಈಗಾಗಲೇ ಎಲ್ಲಾ ಶಾಲೆಗಳಿಗೂ ಮಾಹಿತಿ ನೀಡ ಲಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಮುಂದಾಗಬೇಕು. ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ ಕೊಡುತ್ತಿದೆ. ಇದರ ಸದುಪಯೋಗಪಡೆದುಕೊಂಡು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಸಹಕರಿಸಿ.