ಯಾವಾಗಲೂ ಶ್ರಮ ನಮ್ಮದು, ಫಲ ದೇವರದ್ದು ಎಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮರಕ್ಕೆ ಬೇರು ಹೇಗೆ ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ ಎಂದು ಮತ್ತೊಮ್ಮೆ ಮಾರ್ಮಿಕವಾಗಿ ನುಡಿದಿದ್ದಾರೆ.
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಯಾವಾಗಲೂ ಶ್ರಮ ನಮ್ಮದು, ಫಲ ದೇವರದ್ದು ಎಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮರಕ್ಕೆ ಬೇರು ಹೇಗೆ ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ ಎಂದು ಮತ್ತೊಮ್ಮೆ ಮಾರ್ಮಿಕವಾಗಿ ನುಡಿದಿದ್ದಾರೆ.
ಜಗದ್ಗುರು ರೇಣುಕಾಚಾರ್ಯ ಜಯಂತಿಯಲ್ಲಿ ಪಾಲ್ಗೊಳ್ಳಲು ಬಾಳೆಹೊನ್ನೂರಿಗೆ ಆಗಮಿಸಿದ್ದ ಡಿಕೆಶಿ, ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದರು. ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವಾಗಲೂ ಶ್ರಮ ನಮ್ಮದು, ಫಲ ದೇವರದ್ದು ಎಂದರು.ನಿಮ್ಮ ಶ್ರಮಕ್ಕೆ ಶೀಘ್ರ ಫಲ ಸಿಗಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಮುಗಳ್ನಗುತ್ತಾ ಇಲ್ಲಿಗೆ ಬಂದಿದ್ದೇನಲ್ಲಾ, ಅಜ್ಜಯ್ಯನವರ ಆಶೀರ್ವಾದ ಇದ್ದರೆ ನೋಡೋಣ ಎಂದರು.
ಬಳಿಕ, ಸಮಾರಂಭದಲ್ಲಿ ಮಾತನಾಡಿ, ಗುರು ಇಲ್ಲದೇ ಯಾವುದೇ ಗುರಿ ಮುಟ್ಟಲು ಸಾಧ್ಯವಿಲ್ಲ. ನನ್ನ ಇಡೀ ಬದುಕನ್ನು ರಂಭಾಪುರಿ ವೀರಗಂಗಾಧರ ಅಜ್ಜಯ್ಯನವರು ಬದಲು ಮಾಡಿದ್ದಾರೆ. ನಾವು ನಮ್ಮ ಆತ್ಮಸಾಕ್ಷಿಗನುಗುಣವಾಗಿ ಧರ್ಮ, ಪರಂಪರೆಯನ್ನು ಉಳಿಸಬೇಕಿದೆ ಎಂದರು.
ಮರಕ್ಕೆ ಬೇರು ಹೇಗೆ ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ನಾವು ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕಬೇಕಿದ್ದು, ದೇವನೊಬ್ಬ ನಾಮ ಹಲವು ಎಂಬ ತತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ. ಭಕ್ತನಿಗೂ, ದೇವರಿಗೂ ವ್ಯವಹಾರ ನಡೆಯುವ ಸ್ಥಳ ದೇವಾಲಯ. ನಾನು ರಂಭಾಪುರಿ ಪೀಠಕ್ಕೆ ಒಬ್ಬ ಭಕ್ತನಾಗಿ ಬಂದಿದ್ದೇನೆಯೇ ವಿನಃ ಡಿಸಿಎಂ ಆಗಿಯೋ, ಪಕ್ಷದ ರಾಜ್ಯಾಧ್ಯಕ್ಷನಾಗಿ ಬಂದಿಲ್ಲ ಎಂದರು.
ದೇವರು ನಮಗೆ ವರ, ಶಾಪದ ಬದಲಾಗಿ ಅವಕಾಶ ಕೊಡುತ್ತಾನೆ. ಅದನ್ನು ನಾವು ಹೇಗೆ ಬಳಸಿಕೊಂಡು ಏನು ಮಾಡುತ್ತೇವೆ ಎಂಬುದು ಮಾತ್ರ ಮುಖ್ಯ. ಹುಟ್ಟು-ಸಾವಿನ ಮಧ್ಯೆ ನಾವು ಏನು ಮಾಡುತ್ತೇವೋ ಅದೇ ಮುಖ್ಯ ಎಂದು ಪ್ರತಿಪಾದಿಸಿದರು.ರಂಭಾಪುರಿ ಪೀಠದಲ್ಲಿ ಅಪೂರ್ಣಗೊಂಡಿರುವ ಯಾತ್ರಿನಿವಾಸ ಕಟ್ಟಡಕ್ಕೆ ಸರ್ಕಾರದಿಂದ ₹5 ಕೋಟಿ ನೆರವು ನೀಡಲಾಗುವುದು. ಮುಂದೆ ನಾನೇ ಅದನ್ನು ಉದ್ಘಾಟಿಸಲಿದ್ದೇನೆ. ಪೀಠ ನಿರ್ಮಿಸುತ್ತಿರುವ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನೆಗೆ ಭೂಮಿ ಪೂಜೆ ನನ್ನ ಕೈಯಲ್ಲಿ ಮಾಡಿಸಿರುವುದು ಅತ್ಯಂತ ಸಂತಸ ತಂದಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.