ತಾಸೆ ಸದ್ದಿನ ಹಿಂದೆ ಚರ್ಮ ವಾದ್ಯ ಕಲಾವಿದನ ಶ್ರಮ

KannadaprabhaNewsNetwork |  
Published : Sep 10, 2026, 02:30 AM IST
ಶಿವರಾಂ | Kannada Prabha

ಸಾರಾಂಶ

ತುಳುನಾಡಿನಲ್ಲಿ ಹಬ್ಬದ ಸಂಭ್ರಮಕ್ಕೆ ತಾಸೆಯ ಸದ್ದು ಮೊಳಗಿದರೆ ಸಾಕು, ವಾತಾವರಣವೇ ಹಬ್ಬದಂತೆ ಬದಲಾಗುತ್ತದೆ. ಹುಲಿವೇಷದ ಕುಣಿತಕ್ಕೆ ವೇಗ ನೀಡುವ ತಾಸೆಯ ನಾದ, ದೇವಸ್ಥಾನದ ಪೂಜಾ ಸೇವೆಗೆ ಮೆರಗು ನೀಡುವ ನಗಾರಿಯ ಸದ್ದು, ದೇವಸ್ಥಾನಗಳ ಉತ್ಸವಕ್ಕೆ ಕಳೆ ತರುವ ಡೋಲಿನ ನಾದ ಇವೆಲ್ಲದರ ಹಿಂದೆ ಶ್ರಮಿಸುವ ಹಲವು ಕಲಾವಿದರಿದ್ದಾರೆ. ಅಂತಹ ಅಪರೂಪದ ಕಲಾವಿದರ ಸಾಲಿನಲ್ಲಿ ಕಾರ್ಕಳ ತಾಲೂಕಿನ ಕೆರುವಾಶೆಯ ಶಿವರಾಂ ದೇವಾಡಿಗರು ಪ್ರಮುಖರು.

ರಾಂ ಅಜೆಕಾರು

ಕಾರ್ಕಳ : ತುಳುನಾಡಿನಲ್ಲಿ ಹಬ್ಬದ ಸಂಭ್ರಮಕ್ಕೆ ತಾಸೆಯ ಸದ್ದು ಮೊಳಗಿದರೆ ಸಾಕು, ವಾತಾವರಣವೇ ಹಬ್ಬದಂತೆ ಬದಲಾಗುತ್ತದೆ. ಹುಲಿವೇಷದ ಕುಣಿತಕ್ಕೆ ವೇಗ ನೀಡುವ ತಾಸೆಯ ನಾದ, ದೇವಸ್ಥಾನದ ಪೂಜಾ ಸೇವೆಗೆ ಮೆರಗು ನೀಡುವ ನಗಾರಿಯ ಸದ್ದು, ದೇವಸ್ಥಾನಗಳ ಉತ್ಸವಕ್ಕೆ ಕಳೆ ತರುವ ಡೋಲಿನ ನಾದ ಇವೆಲ್ಲದರ ಹಿಂದೆ ಶ್ರಮಿಸುವ ಹಲವು ಕಲಾವಿದರಿದ್ದಾರೆ. ಅಂತಹ ಅಪರೂಪದ ಕಲಾವಿದರ ಸಾಲಿನಲ್ಲಿ ಕಾರ್ಕಳ ತಾಲೂಕಿನ ಕೆರುವಾಶೆಯ ಶಿವರಾಂ ದೇವಾಡಿಗರು ಪ್ರಮುಖರು.ಕಳೆದ 35 ವರ್ಷಗಳಿಂದ ಚರ್ಮವಾದ್ಯ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಅವರು, ತುಳುನಾಡಿನ ಪಾರಂಪರಿಕ ವಾದ್ಯಗಳ ನಾದವನ್ನು ಮುಂದಿನ ಪೀಳಿಗೆಗೂ ಉಳಿಸುವ ಕಾರ್ಯ ಮಾಡುತ್ತಿದ್ದಾರೆ.

ಗುರುವಿನಿಂದ ಕಲಿತ ಕಲೆ:

ಕಾರ್ಕಳ ಅನಂತಶಯನದ ಆನಂದ ದೇವಾಡಿಗ ಅವರಿಂದ ಚರ್ಮವಾದ್ಯ ತಯಾರಿಕೆಯ ಕೌಶಲ ಕಲಿತ ಶಿವರಾಂ ದೇವಾಡಿಗರು, ಮೂರುವರೆ ದಶಕಗಳಿಂದ ಈ ವೃತ್ತಿಯನ್ನು ನಿಷ್ಠೆಯಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ಕೇವಲ ವಾದ್ಯ ತಯಾರಿಸುವುದಷ್ಟೇ ಅಲ್ಲದೆ, ಅದರ ಧ್ವನಿ, ನಾದ ಹಾಗೂ ಬಳಕೆಗೆ ಅನುಗುಣವಾಗಿ ವಾದ್ಯವನ್ನು ಸಿದ್ಧಪಡಿಸುವಲ್ಲಿ ಅವರು ಪರಿಣತಿ ಹೊಂದಿದ್ದಾರೆ.

ತಾಸೆ, ನಗಾರಿ, ತೆಂಬರೆ, ಡೋಲು, ಪಠಾವು ಡೋಲು, ಘಂಟೆ, ಸಮ್ಮೇಳ ಸೇರಿದಂತೆ ವಿವಿಧ ಬಗೆಯ ಚರ್ಮವಾದ್ಯಗಳನ್ನು ಅವರು ತಯಾರಿಸುತ್ತಾರೆ. ದೇವಸ್ಥಾನಗಳ ಉತ್ಸವ, ದೈವಾರಾಧನೆ, ಹುಲಿವೇಷ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇವರ ವಾದ್ಯಗಳಿಗೆ ಹೆಚ್ಚಿನ ಬೇಡಿಕೆ ಇದೆ.ದೇವಸ್ಥಾನಗಳಿಗೆ ಚಾಕರಿ:

ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳ ಹಲವು ದೇವಸ್ಥಾನಗಳಲ್ಲಿ ಶಿವರಾಂ ದೇವಾಡಿಗರು ತಯಾರಿಸಿದ ನಗಾರಿ ಹಾಗೂ ಇತರ ಚರ್ಮವಾದ್ಯಗಳ ನಾದ ಕೇಳಿಬರುತ್ತಿದೆ. ಕೆರುವಾಶೆ ದೇವಸ್ಥಾನ, ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಚಿಕ್ಕಲ್‌ಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮಂಗಿಲಾರು ಶ್ರೀ ವಾಸುದೇವ-ಬ್ರಹ್ಮಲಿಂಗೇಶ್ವರ ದೇವಸ್ಥಾನ, ಹೆರ್ಮುಂಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಹಾಗೂ ಅತ್ತೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಿಗೆ ಅವರು ವಾದ್ಯಗಳ ಚಾಕರಿ ಮಾಡುತ್ತಿದ್ದಾರೆ. ದೇವಸ್ಥಾನಗಳ ಉತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಚರ್ಮವಾದ್ಯಗಳಿಗೆ ವಿಶೇಷ ಸ್ಥಾನವಿದ್ದು, ವಾದ್ಯದ ಗುಣಮಟ್ಟ ಮತ್ತು ಅದರ ನಾದಕ್ಕೆ ಹೆಚ್ಚಿನ ಮಹತ್ವವಿದೆ. ಹೀಗಾಗಿ ಅನುಭವ ಹೊಂದಿರುವ ಶಿವರಾಂ ದೇವಾಡಿಗರ ವಾದ್ಯಗಳಿಗೆ ಬೇಡಿಕೆಯೂ ಹೆಚ್ಚಾಗಿದೆ.ಕುಟುಂಬದ ಬೆಂಬಲ:ಆಧುನಿಕ ಸಂಗೀತ ಪರಿಕರಗಳ ಬಳಕೆ ಹೆಚ್ಚಾಗುತ್ತಿರುವ ಇಂದಿನ ಕಾಲದಲ್ಲಿಯೂ ಸಾಂಪ್ರದಾಯಿಕ ಚರ್ಮವಾದ್ಯ ತಯಾರಿಕೆಯ ವೃತ್ತಿಯನ್ನು ಕೈಬಿಡದೆ ಮುಂದುವರಿಸಿಕೊಂಡು ಬಂದಿರುವ ಶಿವರಾಂ ದೇವಾಡಿಗರಿಗೆ ಪತ್ನಿ ಜಯಲಕ್ಷ್ಮಿ ಅವರ ಸಹಕಾರವೂ ಮಹತ್ವದ್ದಾಗಿದೆ. ವಾದ್ಯ ತಯಾರಿಕೆಯ ಕೆಲಸದಲ್ಲಿ ಅವರು ಪತಿಗೆ ಅಗತ್ಯ ಸಹಕಾರ ನೀಡುತ್ತಿದ್ದಾರೆ.ಗುರುಗಳಿಂದ ಕಲಿತ ಚರ್ಮವಾದ್ಯ ತಯಾರಿಕೆಯ ಕಲೆಯನ್ನು 35 ವರ್ಷಗಳಿಂದ ಮುಂದುವರಿಸಿಕೊಂಡು ಬರುತ್ತಿದ್ದೇನೆ. ನಮ್ಮ ತುಳುನಾಡಿನ ಸಂಸ್ಕೃತಿ ಪರಂಪರೆ ಉಳಿಯಬೇಕು ಎಂಬುದೇ ನನ್ನ ಆಶಯ.

-ಶಿವರಾಂ ದೇವಾಡಿಗ, ಕೆರುವಾಶೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಶಾಲನಗರದಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ
ತಂತ್ರಜ್ಞಾನ ಬಳಸಿ ಶಿಕ್ಷಣ ನೀಡಿ: ಮಂತರ್ ಗೌಡ