ಕನ್ನಡಪ್ರಭ ವಾರ್ತೆ ಕೆಜಿಎಫ್ನಗರವನ್ನು ಸ್ವಚ್ಛವಾಗಿಡುವಲ್ಲಿ ಪೌರಕಾರ್ಮಿಕರ ಪಾತ್ರ ಅನನ್ಯ, ಪ್ರತಿ ದಿನ ಪೌರಕಾರ್ಮಿಕರ ನಗರದ ಸ್ವಚ್ಛತೆ ಜೊತೆಗೆ ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಅಪಾರ ಕೊಡುಗೆ ನೀಡುತ್ತಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಅಂಜಿನೇಯಲು ತಿಳಿಸಿದರು. ಪೌರ ಕಾರ್ಮಿಕರ ದಿನಾಚರಣೆಯ ನಿಮಿತ್ತ ನಗರಸಭೆ ಮೈದಾನದಲ್ಲಿ ಪೌರ ಕಾರ್ಮಿಕರಿಗೆ ಸೋಮವಾರ ಕ್ರೀಡಾಕೂಡವನ್ನು ಉದ್ಘಾಟಿಸಿ ಮಾತನಾಡಿ, ವರ್ಷದ ಎಲ್ಲ ದಿನಗಳಲ್ಲಿಯೂ ಪೌರಕಾರ್ಮಿಕರು ನಗರದ ಸ್ವಚ್ಛತೆಗೆ ಹಗಲಿರುಳು ದುಡಿಯುತ್ತಿರುವುದು ಶ್ಲಾಘನೀಯ ಎಂದರು.ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಿ
ನಗರಸಭೆ ಅಧ್ಯಕ್ಷೆ ಇಂದಿರಗಾಂಧಿ ಮಾತನಾಡಿ, ಕ್ರೀಡಾಕೂಟದಲ್ಲಿ ವಯಸ್ಸಿನ ಅಂತರವಿಲ್ಲದೆ ಎಲ್ಲ ಪೌರ ಕಾರ್ಮಿಕರು ಕ್ರೀಡೆಗಳಲ್ಲಿ ಭಾಗವಹಿಸಿ ಖುಷಿಪಡಬೇಕು, ಪೌರ ಕಾರ್ಮಿಕರಿಗಾಗಿ ಮ್ಯೂಸಿಕಲ್ ಚೇರ್, ಶಾಟ್ಪುಟ್, ರನ್ನಿಂಗ್, ಗನ್ನಿ ಬ್ಯಾಗ್, ಲೆಮನ್‌ಸ್ಪೂನ್ ಸೇರಿದಂತೆ ಹಲವು ಕ್ರೀಡೆಗಳನ್ನು ಆಯೋಜಿಸಿದ್ದು ಎಲ್ಲ ಕ್ರೀಡೆಗಳಲ್ಲಿಯೂ ಪೌರ ಕಾರ್ಮಿಕರು ಉತ್ಸಾಹದಿಂದ ಬಾಗವಹಿಸಬೇಕೆಂದು ಕೋರಿದರು. ನಗರದ ನಾಗರಿಕರ ಆರೋಗ್ಯ ಕಾಪಾಡಲು ಶ್ರಮಿಸುತ್ತಿರುವ ಪೌರಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾಗಿತ್ತಿರುವುದು ನೋವಿನ ಸಂಗತಿ. ಹಾಗಾಗಿ ಪೌರಕಾರ್ಮಿಕರು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗುವ ಜೊತೆಗೆ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದರಿಂದ ಅವರ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿದೆ. ನಗರಸಭೆಯಿಂದಲೂ ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲು ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.ಪೌರ ಕಾರ್ಮಿಕರಿಗೆ ಸೌಲಭ್ಯಪೌರಕಾರ್ಮಿಕರ ಸಂಘದ ಅಧ್ಯಕ್ಷ ರಾಮು ಮಾತನಾಡಿ, ಸೆ.೨೩ಕ್ಕೆ ಪೌರ ಕಾರ್ಮಿಕರ ದಿನಾಚರಣೆ ಇದ್ದು, ಪೌರಕಾರ್ಮಿಕ ದಿನಾಚರಣೆ ಎಂದರೆ ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿರುವುದಲ್ಲ. ಪೌರ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಅಧಿಕಾರಿಗಳ ಗಮನ ಹರಿಸಬೇಕು, ಅದರ ಭಾಗವಾಗಿಯೇ ಇಂದು ಪೌರ ಕಾರ್ಮಿಕರಿಗೆ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ ಎಂದರು.