ನಾಡು ಪ್ರಗತಿಪಥದತ್ತ ಸಾಗಲು ಪ್ರತಿ ಕನ್ನಡಿಗರ ಶ್ರಮ ಅಗತ್ಯ: ಬಿ.ಕೆ.ಸಪ್ತಶ್ರೀ ಅಭಿಪ್ರಾಯ

KannadaprabhaNewsNetwork |  
Published : Nov 02, 2024, 01:29 AM ISTUpdated : Nov 02, 2024, 01:30 AM IST
ಕನ್ನಡ ಭಾಷೆಗೆ ಸಿಗಬೇಕಾದ ಗೌರವ ಸಿಕ್ಕರೆ ಮಾತ್ರ ಕನ್ನಡ ನಾಡು ಪ್ರಗತಿ : ಬಿ.ಕೆ. ಸಪ್ತಶ್ರೀ | Kannada Prabha

ಸಾರಾಂಶ

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕನ್ನಡಪ್ರಭ ವಾರ್ತೆ ತಿಪಟೂರು

ಕನ್ನಡ ನಾಡು ಮತ್ತು ಭಾಷೆಯು ಭವ್ಯ ಇತಿಹಾಸ, ಪರಂಪರೆಯನ್ನು ಹೊಂದಿದ್ದು ಕನ್ನಡಿಗರು ಕನ್ನಡ ಭಾಷೆಗೆ ಸಿಗಬೇಕಾದ ಗೌರವವನ್ನು ದೊರಕಿಸುವಲ್ಲಿ ಹಾಗೂ ಕನ್ನಡ ನಾಡನ್ನು ಪ್ರಗತಿಪಥದಲ್ಲಿ ಕೊಂಡೊಯ್ಯುವಲ್ಲಿ ಶ್ರಮಿಸಿದಾಗ ಮಾತ್ರ ಕನ್ನಡ ನಾಡು ಕಂಗೊಳಿಸಲಿದೆ ಎಂದು ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ತಿಳಿಸಿದರು.

ನಗರದ ಕಲ್ಪತರು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶುಕ್ರವಾರ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಅಖಂಡ ಕರ್ನಾಟಕದಲ್ಲಿ ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕನ್ನಡ ಭಾಷೆ ಲಿಪಿಗಳ ರಾಣಿ ಎಂದು ಕರೆಸಿಕೊಂಡಿದೆ. ಈ ನಾಡಿಗೆ ಸಂತರು, ದಾರ್ಶನಿಕರು, ಅರಸರು, ವಚನಕಾರರು, ಮಹರ್ಷಿಗಳು, ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು, ವಿಜ್ಞಾನಿಗಳು ತಮ್ಮದೇ ಕೊಡುಗೆ ನೀಡಿದ್ದಾರೆ. ಕರ್ನಾಟಕವನ್ನು ಕದಂಬರು, ಗಂಗರು, ರಾಷ್ಟ್ರಕೂಟರು, ಯಾದವರು, ಬಲ್ಲಾಳರು ಸೇರಿದಂತೆ ಮುಂತಾದವರು ಆಳಿದ್ದಾರೆ. ಇವರ ಆಳ್ವಿಕೆಯಲ್ಲಿ ಕರ್ನಾಟಕ ಅತ್ಯಂತ ಶ್ರೀಮಂತ ನಾಡೆನಿಸಿತ್ತು. ಹಲವು ಮಹನೀಯರು ಕರ್ನಾಟಕ ಏಕೀಕರಣಕ್ಕಾಗಿ ದುಡಿದಿದ್ದು ಅವರನ್ನು ಸ್ಮರಿಸುವ ಮೂಲಕ ಪ್ರತಿಯೊಬ್ಬ ಪ್ರಜೆಯೂ ನಮ್ಮ ನಾಡಿಗೆ ಕೈಲಾದ ಸೇವೆ ಸಲ್ಲಿಸಬೇಕು ಎಂದರು.

ನಾಡ ಧ್ವಜರೋಹಣ ನೆರವೇರಿಸಿ ಮಾತನಾಡಿದ ಶಾಸಕ ಕೆ. ಷಡಕ್ಷರಿ, ಕರ್ನಾಟಕ ಏಕೀಕರಣಕ್ಕೆ ದುಡಿದಂಥ ಅನೇಕ ಮಹನೀಯರನ್ನು ನಾವು ಇಂದು ಸ್ಮರಿಸಬೇಕು. ಕನ್ನಡ ಭಾಷೆಯ ಪ್ರತಿ ಅಕ್ಷರದಲ್ಲೂ ಸಂಸ್ಕಾರ ಭಾವನೆಗಳು ಅಡಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂಗ್ಲೀಷ್ ವ್ಯಾಮೋಹ ಹೆಚ್ಚಾಗುತ್ತಿದ್ದು, ‘ಮಮ್ಮಿ ಡ್ಯಾಡಿ’ ಸಂಸ್ಕೃತಿ ಬಿಟ್ಟು ‘ಅಪ್ಪ ಅಮ್ಮ’ ಎಂಬ ಕನ್ನಡ ಭಾಷೆಯನ್ನು ಪೋಷಕರು ಮಕ್ಕಳಿಗೆ ಕಲಿಸಬೇಕಿದೆ. ಆಗಲೇ ಕನ್ನಡು ನಾಡು, ನುಡಿ, ಜಲ, ಸಂಸ್ಕೃತಿಯೂ ಉಳಿಯಲಿದೆ ಎಂದರು.

ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ತಹಸೀಲ್ದಾರ್ ಪವನ್‌ ಕುಮಾರ್, ತಾಪಂ ಇಒ ಸುದರ್ಶನ್, ಬಿಇಒ ಚಂದ್ರಯ್ಯ, ಸಿಡಿಪಿಒ ಲೋಕೇಶ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಡಿವೈಎಸ್‌ಪಿ ವಿನಾಯಕ ಶೆಟಗೇರಿ, ಹಿಂದುಳಿದ ವರ್ಗಗಳ ಇಲಾಖೆಯ ಜಲಜಾಕ್ಷಮ್ಮ, ಗ್ರೇಡ್-೨ ತಹಸೀಲ್ದಾರ್ ಜಗನ್ನಾಥ್, ಬೆಸ್ಕಾಂ ಎಇಇ ಮನೋಹರ್, ಎಪಿಎಂಸಿ ಕಾರ್ಯದರ್ಶಿ ನ್ಯಾಮಗೌಡ, ಕಸಾಪ ತಾ. ಅಧ್ಯಕ್ಷ ಬಸವರಾಜಪ್ಪ ಸೇರಿ ನಗರಸಭಾ ಸದಸ್ಯರು, ಶಿಕ್ಷಕರು, ಸಾಹಿತಿಗಳು ಸೇರಿ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ಸಾರ್ವಜನಿಕರು, ಶಾಲಾಮಕ್ಕಳು ಭಾಗವಹಿಸಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮಕ್ಕೂ ಮುನ್ನ ನಗರದ ರಾಜ ಬೀದಿಗಳಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ಸ್ಥಬ್ಧ ಚಿತ್ರಗಳ ಮೆರವಣಿಗೆ ಕಲ್ಪತರು ಕ್ರೀಡಾಂಗಣದವರೆಗೆ ಸಾಗಿತು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...