ದರೋಡೆ ದಿನವೂ ಕರ್ತವ್ಯಕ್ಕೆ ಹಾಜರಾಗಿದ್ದ ಅಣ್ಣಪ್ಪ

KannadaprabhaNewsNetwork |  
Published : Nov 23, 2025, 02:15 AM IST

ಸಾರಾಂಶ

ರಾಜಧಾನಿ ಪೊಲೀಸರಿಗೆ ದಿಢೀರ್ ಶಾಕ್‌ ಕೊಟ್ಟಿದ್ದ ದರೋಡೆ ಕೃತ್ಯದ ಬಳಿಕ ರಾತ್ರಿ ಪಾಳಿಯದಲ್ಲಿ ಗೋವಿಂದಪುರ ಠಾಣೆ ಕಾನ್‌ಸ್ಟೇಬಲ್‌ ಅಣ್ಣಪ್ಪ ನಾಯಕ್ ಕರ್ತವ್ಯಕ್ಕೆ ಹಾಜರಾಗಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು ರಾಜಧಾನಿ ಪೊಲೀಸರಿಗೆ ದಿಢೀರ್ ಶಾಕ್‌ ಕೊಟ್ಟಿದ್ದ ದರೋಡೆ ಕೃತ್ಯದ ಬಳಿಕ ರಾತ್ರಿ ಪಾಳಿಯದಲ್ಲಿ ಗೋವಿಂದಪುರ ಠಾಣೆ ಕಾನ್‌ಸ್ಟೇಬಲ್‌ ಅಣ್ಣಪ್ಪ ನಾಯಕ್ ಕರ್ತವ್ಯಕ್ಕೆ ಹಾಜರಾಗಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ.

2018ರಲ್ಲಿ ಪೊಲೀಸ್ ಇಲಾಖೆಗೆ ಹಾವೇರಿ ಜಿಲ್ಲೆ ವೀರಾಪುರ ತಾಲೂಕಿನ ಹಳೇ ವೀರಾಪುರ ಗ್ರಾಮದ ಅಣ್ಣಪ್ಪ ನಾಯಕ್‌ ಸೇರಿದ್ದ. ಮೊದಲು ಬಾಣಸವಾಡಿ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದ ಆತ, ಕಳೆದ ಒಂದೂವರೆ ವರ್ಷದಿಂದ ಗೋವಿಂದಪುರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ವೃತ್ತಿ ಜೀವನದಲ್ಲಿ ಅಣ್ಣಪ್ಪ ನಾಯಕ್ ಹಿನ್ನೆಲೆ ಉತ್ತಮವಾಗಿರಲಿಲ್ಲ. ಹಲವು ಬಾರಿ ಆತನ ಮೇಲೆ ಕರ್ತವ್ಯಲೋಪದ ಆರೋಪಗಳು ಬಂದಿದ್ದವು. ಹೀಗಾಗಿ ಒಂದೂವರೆ ವರ್ಷದಿಂದ ಬಂದೋಬಸ್ತ್ ಹೊರತುಪಡಿಸಿ ಬೇರೆ ಕೆಲಸಗಳಿಗೆ ಆತನನ್ನು ನಿಯೋಜಿಸಿರಲಿಲ್ಲ ಎಂದು ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ದರೋಡೆ ಕೃತ್ಯ ನಡೆದ ಅಣ್ಣಪ್ಪನಿಗೆ ರಾತ್ರಿ ಪಾಳಿಯಲ್ಲಿ ವಾಹನಗಳ ತಪಾಸಣೆ ಕೆಲಸಕ್ಕೆ ನಿಯುಕ್ತಿಗೊಳಿಸಲಾಗಿತ್ತು. ಅಂತೆಯೇ ಆ ದಿನ ಆತ ಕರ್ತವ್ಯಕ್ಕೆ ಹಾಜರಾಗಿ ಮುಂಜಾನೆವರೆಗೆ ಗೋವಿಂದಪುರ ಸಮೀಪ ನಾಕಾ ಬಂದ್ ಮಾಡಿ ವಾಹನ ತಪಾಸಣೆ ನಡೆಸಿದ್ದ. ಹಿಂದಿನ ದಿನ ಸಹ ರಾತ್ರಿ ಪಾಳಿಯಲ್ಲೇ ಅಣ್ಣಪ್ಪ ಕೆಲಸ ಮಾಡಿದ್ದ. ಆದರೆ ದರೋಡೆ ಕೃತ್ಯದ ಬಗ್ಗೆ ಇಲಾಖೆಯಲ್ಲಿ ಚರ್ಚೆ ನಡೆದಿದ್ದರೂ ಕಿಂಚಿತ್ತೂ ಆತ ಭಯಗೊಂಡಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ಸಂಚು?

ಕೆಲ ದಿನಗಳ ಹಿಂದೆ ಆತನಿಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಬಂದೋಬಸ್ತ್‌ಗೆ ಅಣ್ಣಪ್ಪನನ್ನು ನಿಯೋಜಿಸಲಾಗಿತ್ತು. ಆತನ ಹಿನ್ನೆಲೆ ಉತ್ತಮವಾಗಿರದ ಕಾರಣ ಮುಖ್ಯಮಂತ್ರಿ ಅವರ ನಿವಾಸದ ಭದ್ರತೆಗೆ ಆತನನ್ನು ಬಳಸಿರಲಿಲ್ಲ. ಸ್ವಾತಂತ್ರ್ಯ ಉದ್ಯಾನ ಬಂದೋಬಸ್ತ್ ವೇಳೆ ಇತರೆ ಆರೋಪಿಗಳನ್ನು ಕರೆಸಿ ಅಣ್ಣಪ್ಪ ಮಾತನಾಡಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾನ್‌ಸ್ಟೇಬಲ್ ಸೇವೆಯಿಂದ ವಜಾ?

ದರೋಡೆ ಪ್ರಕರಣದ ಬಂಧಿತ ಕಾನ್‌ಸ್ಟೇಬಲ್‌ ಅಣ್ಣಪ್ಪ ನಾಯಕ್‌ನನ್ನು ಸೇವೆಯಿಂದಲೇ ವಜಾಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

ಅಪರಾಧ ಕೃತ್ಯಗಳಲ್ಲಿ ಪೊಲೀಸರ ಪಾಲ್ಗೊಳ್ಳುವಿಕೆ ಸಹಿಸಲು ಸಾಧ್ಯವಿಲ್ಲ. ಈತನನ್ನು ಸೇವೆಯಿಂದ ವಜಾಗೊಳಿಸುವ ನಿಟ್ಟಿನಲ್ಲಿ ಕಾನೂನಿನ್ವಯ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದರು

ಅಣ್ಣಪ್ಪನ ತೊರೆದ ಪತ್ನಿ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಣ್ಣಪ್ಪನನ್ನು ಆತನ ಪತ್ನಿ ತೊರೆದು ತವರು ಸೇರಿದ್ದಾಳೆ. ಬಾಣಸವಾಡಿ ಸಮೀಪ ಆತನು ವಾಸವಾಗಿದ್ದ. ಆತನ ನಡವಳಿಕೆಯಿಂದ ಬೇಸತ್ತು ಪತ್ನಿ ದೂರವಾಗಿದ್ದಾಳೆ ಎಂದು ತಿಳಿದು ಬಂದಿದೆ.

ಬಾಣಸವಾಡಿ ಠಾಣೆಯಲ್ಲಿ ಕೆಲಸ ಮಾಡುವಾಗ ಆತನ ಮೇಲೆ ಗಾಂಜಾ ಮಾರಾಟಗಾರರಿಗೆ ನೆರವಾದ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಅಣ್ಣಪ್ಪನ ವಿಚಾರಣೆ ಸಹ ನಡೆದಿತ್ತು. ಈ ಘಟನೆ ಬಳಿಕ ಆತನ ಮನೆಯಲ್ಲಿ ಜಗಳವಾಗಿದ್ದವು ಎನ್ನಲಾಗಿದೆ.

PREV

Recommended Stories

ಮಂಡ್ಯ ಜಿಲ್ಲಾ ಮಟ್ಟದ ಕನ್ನಡ ರಸಪ್ರಶ್ನೆ ಸ್ಪರ್ಧೆ: ವಿಜೇತರಿಗೆ ನಗದು ಬಹುಮಾನ
ಪಾಂಡವಪುರ ತಾಲೂಕಿನ ಚಿನಕುರಳಿ ಬಿಜಿಎಸ್ ಶಾಲೆಯಲ್ಲಿ ಮಕ್ಕಳ ಸಂತೆ