ಸಾಲದಿಂದ ಸೋತಿದ್ದೇನೆ ಎಂದು ಪತ್ರ ಬರೆದಿಟ್ಟು ನೌಕರ ನಾಪತ್ತೆ

KannadaprabhaNewsNetwork |  
Published : Oct 13, 2024, 01:11 AM IST
ಲೆಟರ್‌ | Kannada Prabha

ಸಾರಾಂಶ

ಸಾಲ ಹೆಚ್ಚಾಗಿ ನಾನು ಜೀವನದಲ್ಲಿ ಸೋತಿದ್ದೇನೆ ಎಂದು ಪತ್ರ ಬರೆದಿಟ್ಟು ಖಾಸಗಿ ಬ್ಯಾಂಕ್‌ ಉದ್ಯೋಗಿಯೊಬ್ಬರು ನಾಪತ್ತೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಸಾಲ ಹೆಚ್ಚಾಗಿ ನಾನು ಜೀವನದಲ್ಲಿ ಸೋತಿದ್ದೇನೆ’ ಎಂದು ಪತ್ರ ಬರೆದಿಟ್ಟು ಖಾಸಗಿ ಬ್ಯಾಂಕ್‌ ಉದ್ಯೋಗಿಯೊಬ್ಬರು ನಾಪತ್ತೆಯಾಗಿರುವ ಘಟನೆ ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಶ್ವೇಶ್ವರಯ್ಯ ಲೇಔಟ್‌ 8ನೇ ಬ್ಲಾಕ್‌ನ ಮುದ್ದಿನಪಾಳ್ಯ ನಿವಾಸಿ ಭರತ್‌ (32) ಅ.9ರಿಂದ ಭರತ್‌ ನಾಪತ್ತೆಯಾಗಿದ್ದಾರೆ. ಪತ್ನಿ ಚೈತ್ರಾ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನ ವಿವರ:

ಚೈತ್ರಾ ನೀಡಿದ ದೂರಿನಲ್ಲಿ ತನ್ನ ಪತಿ ಭರತ್‌ ಖಾಸಗಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಎರಡು ದಿನಗಳಿಂದ ಮನೆಗೆ ಬಾರದೆ ಫೋನ್‌ ಸಂಪರ್ಕದಲ್ಲಿದ್ದರು. ಅ.9ರಂದು ಬೆಳಗ್ಗೆ 7 ಗಂಟೆಗೆ ಮನೆಯ ಕಾರು ಪಾರ್ಕಿಂಗ್‌ ಸ್ಥಳದಲ್ಲಿ ಒಂದು ಪುಸ್ತಕ ಸಿಕ್ಕಿದ್ದು, ‘ನನ್ನ ಸಾಲ ಹೆಚ್ಚಾಗಿದೆ. ಇಎಂಐ, ಇತರೆ ಜವಾಬ್ದಾರಿಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ನಾನು ಜೀವನದಲ್ಲಿ ಸೋತಿದ್ದೇನೆ’ ಎಂದು ಬರೆದಿರುವುದು ಕಂಡು ಬಂದಿದೆ.

ಅದೇ ಸ್ಥಳದಲ್ಲಿ ಭರತ್‌ನ ಮೊಬೈಲ್‌ ಸಹ ಸಿಕ್ಕಿದೆ. ಕುಟುಂಬದವರು ಎಲ್ಲೆಡೆ ಹುಡುಕಾಡಿದರೂ ಎಲ್ಲಿಯೂ ಭರತ್‌ ಪತ್ತೆಯಾಗಿಲ್ಲ. ಭರತ್‌ ಹೋಗುವಾಗ ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ಪತಿ ಭರತ್‌ನನ್ನು ಹುಡುಕಿ ಕೊಡುವಂತೆ ದೂರಿನಲ್ಲಿ ಕೋರಿದ್ದಾರೆ.ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ

ಕಾರು ಪಾರ್ಕಿಂಗ್‌ ಸ್ಥಳದಲ್ಲಿ ಸಿಕ್ಕಿರುವ ಭರತ್‌ ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ ಇದೆ. ಈ ವಿಡಿಯೋದಲ್ಲಿಯೂ ಸಹ ಭರತ್‌, ತನ್ನ ಸಾಲದ ವಿಚಾರ ಪ್ರಸ್ತಾಪಿಸಿದ್ದಾರೆ. ನಾನು ಜೀವನದಲ್ಲಿ ಸೋತಿದ್ದೇನೆ. ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ. ನನ್ನನ್ನು ಹುಡುಕ ಬೇಡಿ ಎಂದು ಹೇಳಿದ್ದಾರೆ.

ಈಗಾಗಲೇ ಪೊಲೀಸರು ಹಲವು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದ್ದಾರೆ. ಭರತ್‌ ಮನೆಯಿಂದ ಕೆಂಗುಟ್ಟೆ ಸರ್ಕಲ್‌ ಬಳಿ ಬಂದಿರುವ ಸುಳಿವು ಸಿಕ್ಕಿದೆ. ಬಳಿಕ ಎಲ್ಲಿಗೆ ತೆರಳಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಈಗಾಗಲೇ ಪೊಲೀಸರು ಬೆಂಗಳೂರು, ಮೈಸೂರು, ತುಮಕೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಭರತ್‌ ಪತ್ತೆಗಾಗಿ ಹುಡುಕಾಟ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ