ಮಿಂಚಿನಪದವು ಎಂಡೋ ಪ್ರಕರಣ: ಮಾಲಿನ್ಯ ನಿಯಂತ್ರಣ ಮಂಡಳಿ ಬಗ್ಗೆ ಶ್ಯಾನುಭಾಗ್‌ ಆಕ್ಷೇಪ

KannadaprabhaNewsNetwork |  
Published : Nov 26, 2024, 12:45 AM IST
25ಶ್ಯಾನುಭಾಗ್ | Kannada Prabha

ಸಾರಾಂಶ

ಭಾರೀ ಪ್ರಮಾಣದಲ್ಲಿ ಎಂಡೋಸಲ್ಪಾನನ್ನು ಮಿಂಚಿನಪದವು ಪಾಳು ಬಾವಿಯಲ್ಲಿ ಹೂತಿಡಲಾಗಿದೆ. ಅದನ್ನು ಖಚಿತಪಡಿಸುವ ಬದಲು ಘಟನೆ ನಡೆದು 12 ವರ್ಷಗಳ ನಂತರ ಮೇಲ್ಪದರದಲ್ಲಿರುವ ಮಣ್ಣಿನ ಹಾಗೂ ನೀರಿನ ಸ್ಯಾಂಪಲ್​ಗಳನ್ನು ಪರಿಶೀಲಿಸಿ ಅವುಗಳಲ್ಲಿ ಎಂಡೋಸಲ್ಫಾನ್​ ಅಂಶವಿಲ್ಲ ಎಂಬ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಮಂಡಳಿ ಪತ್ರಿಕಾ ಪ್ರಕಟಣೆ ನೀಡಿದೆ.

ಕನ್ನಡಪ್ರಭ ವಾರ್ತೆ ಉಡುಪಿಕೇರಳದ ಮಿಂಚಿನಪದವು ಎಂಬಲ್ಲಿನ ಗುಡ್ಡಗಾಡು ಪ್ರದೇಶದ ಪಾಳು ಬಾವಿಯಲ್ಲಿ ವಿಷಕಾರಕ ಕೀಟನಾಶಕ ಎಂಡೋಸಲ್ಪಾನ್‌ ಹೂತಿರುವ ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ, ದ.ಕ. ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯು ಇಲ್ಲಿನ ಮಣ್ಣು ಮತ್ತು ನೀರಿನಲ್ಲಿ ಎಂಡೋಸಲ್ಫಾನ್​ ಅಂಶ ಪತ್ತೆಯಾಗಿಲ್ಲ ಎಂಬ ವರದಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವುದು ಸರಿಯಲ್ಲ. ಇದು ಸಾರ್ವಜನಿಕರ ದಾರಿ ತಪ್ಪಿಸುವ ಪ್ರಯತ್ನವಾಗಿದೆ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶಾನುಭಾಗ್​ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.ಅಲ್ಲದೇ ಮಾಲಿನ್ಯ ನಿಯಂತ್ರಣ ಮಂಡಳಿಯ ಈ ಬೇಜಾಬ್ದಾರಿಯನ್ನು ವಕೀಲರ ಮೂಲಕ ಡಿ. 2ರಂದು ನಡೆಯುವ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದವರು ಹೇಳಿದ್ದಾರೆ.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರೀ ಪ್ರಮಾಣದಲ್ಲಿ ಎಂಡೋಸಲ್ಪಾನನ್ನು ಮಿಂಚಿನಪದವು ಪಾಳು ಬಾವಿಯಲ್ಲಿ ಹೂತಿಡಲಾಗಿದೆ. ಅದನ್ನು ಖಚಿತಪಡಿಸುವ ಬದಲು ಘಟನೆ ನಡೆದು 12 ವರ್ಷಗಳ ನಂತರ ಮೇಲ್ಪದರದಲ್ಲಿರುವ ಮಣ್ಣಿನ ಹಾಗೂ ನೀರಿನ ಸ್ಯಾಂಪಲ್​ಗಳನ್ನು ಪರಿಶೀಲಿಸಿ ಅವುಗಳಲ್ಲಿ ಎಂಡೋಸಲ್ಫಾನ್​ ಅಂಶವಿಲ್ಲ ಎಂಬ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಮಂಡಳಿ ಪತ್ರಿಕಾ ಪ್ರಕಟಣೆ ನೀಡಿದೆ. ಇದು ಸರಿಯಲ್ಲ ಎಂದರು.ಗೇರು ಕಾರ್ಪೋರೇಶನ್​ ನಿವೃತ್ತ ಸಿಬ್ಬಂದಿ ಅಚ್ಚುತ ಮಣಿಯಾಣಿ ಸುಮಾರು 600 ಲೀ.​ ಎಂಡೋಸಲ್ಫಾನನ್ನು ಮಿಂಚಿನಪದವು ಗೇರು ತೋಟದ ಬಾವಿಯಲ್ಲಿ ಹೂಳಿ ಅದರ ಮೇಲೆ ಮಣ್ಣು ಹಾಕಿದ್ದಾರೆ ಎಂದು 2013ರಲ್ಲಿ ಹೇಳಿದ್ದಾರೆ. ಪಾಳು ಬಾವಿಯ ಮಣ್ಣನ್ನು ಹೊರತೆಗೆದು ಅದರ ಕೆಳಗೆ ಎಂಡೋಸಲ್ಫಾನ್​ ತುಂಬಿದ ಕ್ಯಾನ್​ಗಳಿವೆಯೇ ಎಂಬುದನ್ನು ಖಚಿತಪಡಿಸುವ ಬದಲು ಈ ಭಾಗದ ಮಣ್ಣಿನಲ್ಲಿ ಮತ್ತು ನೀರಿನಲ್ಲಿ ಎಂಡೋಸಲ್ಫಾನ್​ ಅಂಶವಿಲ್ಲ ಎಂಬುದಾಗಿ ಬಾಲಿಶ ಪ್ರಕಟಣೆ ನೀಡಲಾಗಿದೆ ಎಂದು ಶ್ಯಾನುಬಾಗ್ ಆರೋಪಿಸಿದರು.ಪ್ರಕರಣದ ಹಿನ್ನೆಲೆ

ಮಿಂಚಿನಪದವು ಎಂಬಲ್ಲಿ ಎಂಡೋಸಲ್ಫಾನ್​ ಹೂತಿಟ್ಟಿರುವ ವಿಷಯದ ಬಗ್ಗೆ ತಾವು ದ.ಕ. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ 10 ವರ್ಷಗಳಿಂದ ಯಾವುದೇ ಸ್ಪಂದನೆ ದೊರಕಿಲ್ಲ. ಆದ್ದರಿಂದ ಜಿಲ್ಲಾಡಳಿತಕ್ಕೆ ಸೂಕ್ತ ಆದೇಶ ನೀಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು ವಿನಂತಿಸಲಾಗಿತ್ತು. ಅದರಂತೆ ನ್ಯಾಯ ಮಂಡಳಿಯು ಹೂಳಲಾಗಿದ್ದ ಎಂಡೋಸಲ್ಫಾನ್​ ತೆರವಿಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಕರ್ನಾಟಕ ಹಾಗೂ ಕೇರಳ ಸರ್ಕಾರ, ಕೇಂದ್ರ ಸರ್ಕಾರ, ಕರ್ನಾಟಕ ಹಾಗೂ ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್​ ಜಾರಿ ಮಾಡಿತ್ತು.

ಇದೀಗ ಮಾಲಿನ್ಯ ನಿಯಂತ್ರಣ ಮಂಡಳಿಯು ವರದಿಯನ್ನು ನ್ಯಾಯಮಂಡಳಿಗೆ ಸಲ್ಲಿಸುವ ಮೊದಲೇ ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಜನರ ದಾರಿ ತಪ್ಪಿಸುತ್ತಿದೆ ಎಂದು ಶ್ಯಾನುಭಾಗ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನ ಕಾರ್ಯದರ್ಶಿ ಅನಿಲ್​, ವಕೀಲ ಅನುರಾಗ್​ ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ