ದಾವಣಗೆರೆ: ನೂತನವಾಗಿ ನಿರ್ಮಾಣಗೊಂಡ ದಾವಣಗೆರೆ ತಾಲೂಕು ಕಚೇರಿ ಕಟ್ಟಡ ಸಮುಚ್ಚಯವನ್ನು ಉದ್ಘಾಟಿಸಿ, ತಹಸೀಲ್ದಾರ್ ಕಚೇರಿಯನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲು ಒತ್ತಾಯಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಕರವೇ ಮುಖಂಡರು, ಸ್ವಾತಂತ್ರ್ಯ ಪೂರ್ವದ ಹಳೆಯ ತಾಲೂಕು ಕಚೇರಿ ಹಾಗೂ ಉಪ ನೋಂದಣಾಧಿಕಾರಿಗಳ ಕಚೇರಿ ಕಟ್ಟಡವನ್ನು ತೆರವುಗೊಳಿಸಿ, ಅಲ್ಲಿ ಈಗ ಹೊಸದಾಗಿ ಕಟ್ಟಡ ನಿರ್ಮಿಸಲಾಗಿದೆ. 8 ವರ್ಷಗಳ ಹಿಂದೆ ಹೊಸ ಕಟ್ಟಡ ನಿರ್ಮಾಣ ಕಾರ್ಯ ಕೈಗೊಂಡು, 2 ವರ್ಷಗಳ ಹಿಂದೆಯೇ ಪೂರ್ಣ ಕಾಮಗಾರಿ ಮುಗಿಸಲಾಗಿದೆ. ಆದರೆ, ಇಂದಿಗೂ ನೂತನ ಕಟ್ಟಡವನ್ನೇ ಉದ್ಘಾಟಿಸಿಲ್ಲ ಎಂದು ತಿಳಿಸಿದರು.
ಹೊಸ ತಾಲೂಕು ಕಚೇರಿಯಲ್ಲಿ ಪೀಠೋಪಕರಣಗಳನ್ನು ಸಹ ಅಳವಡಿಸಲಾಗಿದೆ. ಬಳಕೆಯಾಗದೇ, ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ಹೊಸ ಕಟ್ಟಡವೇ ನಿರ್ವಹಣೆ ಇಲ್ಲದೇ, ಅಲ್ಲಲ್ಲಿ ಸೋರಿಕೆ ಸಹ ಆಗುತ್ತಿದೆ. ಸ್ವಂತ ಕಟ್ಟಡ ನಿರ್ಮಾಣ ಪೂರ್ಣವಾಗಿ 2 ವರ್ಷ ಕಳೆದರೂ ಇಂದಿಗೂ ತಾಲೂಕು ಕಚೇರಿಯು ಎಪಿಎಂಸಿ ಅಧೀನದ ರೈತ ಭವನ(ಹಳೆ ಡಿಸಿ ಕಚೇರಿ)ದಲ್ಲೇ ಕಾರ್ಯ ನಿರ್ವಹಿಸುತ್ತಿದೆ. ಇನ್ನೂ ಎಷ್ಟು ದಿನ ಸ್ವಂತ ಕಟ್ಟಡವಿದ್ದರೂ, ಬಾಡಿಗೆ ಕಟ್ಟಡದಲ್ಲೇ ತಾಲೂಕು ಕಚೇರಿಯನ್ನು ತಳ್ಳಲಾಗುತ್ತದೆ ಎಂದು ಪ್ರಶ್ನಿಸಿದರು.ಎಪಿಎಂಸಿ ಅಧೀನದ ರೈತ ಭವನದ ಬಾಡಿಗೆ ಕಟ್ಟಡದಲ್ಲೇ ಈಗಲೂ ಬಾಡಿಗೆ ಪಾವತಿಸಿ, ಸಾರ್ವಜನಿಕರು ತೆರಿಗೆ ರೂಪದಲ್ಲಿ ಕಟ್ಟಿದ ಹಣವನ್ನು ಪೋಲು ಮಾಡಲಾಗುತ್ತಿದೆ. ಉದ್ಘಾಟನೆಯೇ ಆಗದ ನೂತನ ತಾಲೂಕು ಕಚೇರಿಯು ಕುಡುಕರು, ಜೂಜಾಡುವವರು ಸೇರಿದಂತೆ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಹೊಸ ತಾಲೂಕು ಕಚೇರಿ ಕಟ್ಟಡ ಉದ್ಘಾಟನೆಗೊಳ್ಳದಿದ್ದರೂ ಈಗಲೇ ಸೋರಿಕೆಯಾಗುತ್ತಿದೆ. ಇದನ್ನು ನೋಡಿದರೆ, ಕಟ್ಟಡ ನಿರ್ಮಾಣ ಕಾಮಗಾರಿ ಕಳಪೆಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.
ಒಂದು ವೇಳೆ ತಾಲೂಕು ಕಚೇರಿಗೆ ಬಾಡಿಗೆ ಕಟ್ಟಡದ ಮುಕ್ತಿ ಕೊಟ್ಟು, ಸ್ವಂತ ಕಟ್ಟಡಕ್ಕೆ ಶಾಶ್ವತವಾಗಿ ಸ್ಥಳಾಂತರಿಸುವ ಕೆಲಸ ತ್ವರಿತವಾಗಿ ಆಗದಿದ್ದರೆ, ಅತೀ ಶೀಘ್ರದಲ್ಲೇ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಸಾರ್ವಜನಿಕರು, ರೈತರು, ಹಿರಿಯ ನಾಗರಿಕರು,ವಿದ್ಯಾರ್ಥಿಗಳನ್ನು ಸಂಘಟಿಸಿ ತೀವ್ರ ಸ್ವರೂಪದ ಹೋರಾಟ ನಡೆಸಬೇಗುತ್ತದೆ ಎಂದು ಎಚ್ಚರಿಸಿದರು.