ಪ್ರಮೋದ ಗಡಕರಕನ್ನಡಪ್ರಭ ವಾರ್ತೆ ಬೆಳಗಾವಿ

ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ಸರ್ಕಾರ ಅಳವಡಿಸಿದ ಮಕ್ಕಳ ಆಟಿಕೆ ಸಾಮಗ್ರಿಗಳು ತುಕ್ಕು ಹಿಡಿದು ಮುರಿದು ಬಿದ್ದಿವೆ. ನಿರ್ವಹಣೆಗೆ ಸಿಬ್ಬಂದಿ ಇಲ್ಲ, ಶೌಚಾಲಯಕ್ಕೆ ಬೀಗ, ಕುಡಿಯುವ ನೀರಿಲ್ಲ. ಜೀವ ಕೈಯಲ್ಲಿ ಹಿಡಿದುಕೊಂಡು ಮಕ್ಕಳು ಆಟ ಆಡುತ್ತಿದ್ದಾರೆ. ಇದು ಕುಂದಾನಗರಿ ಬೆಳಗಾವಿಯ ಉದ್ಯಾನಗಳಲ್ಲಿನ ಅದ್ವಾನ.

ಬೆಳಗಾವಿಯ ಶ್ರೀನಗರ, ಹನುಮಾನ ನಗರ, ಶಿವಾಜಿ ಉದ್ಯಾನ, ರಾಮತೀರ್ಥನಗರ, ಬಾಕ್ಸೈಟ್ ರಸ್ತೆ, ಮಿಲಿಟರಿ ಮಹಾದೇವ ಮಂದಿರ ಆವರಣ ಸೇರಿ ನಗರದ ಬಹುತೇಕ ಉದ್ಯಾನಗಳಲ್ಲಿ ಇದೇ ಪರಿಸ್ಥಿತಿ ಕಂಡು ಬರುತ್ತಿದೆ. ಕಿತ್ತು ನೆಲಕ್ಕುರುಳಿದ ಜೋಕಾಲಿ, ಜಾರುಬಂಡಿಯಲ್ಲಿ ಬಿದ್ದ ಗುಂಡಿ, ನೆಲದ ಮೇಲೆ ಎದ್ದ ಕಲ್ಲುಗಳು, ಉದ್ಯಾನದಲ್ಲೇ ಕಟ್ಟಿರುವ ಜಾನುವಾರುಗಳು, ತುಕ್ಕು ಹಿಡಿದ ಡಸ್ಟ್‌ಬಿನ್‌ಗಳು ನೋಡುಗರ ಕಣ್ಣಿಗೆ ರಾಚುತ್ತಿವೆ.

ಸಿಬ್ಬಂದಿ ಕೊರತೆ, ದೊಡ್ಡವರ ಹಾವಳಿ

ನಗರದ ಬಹುತೇಕ ಉದ್ಯಾನವನದ ನಿರ್ವಹಣೆಗೆ ಸಿಬ್ಬಂದಿ ಇಲ್ಲ. 100 ಸಿಬ್ಬಂದಿಯೇ ನಗರದ ವೃತ್ತ, ರಸ್ತೆ ವಿಭಜಕ, ಉದ್ಯಾನ ಎಲ್ಲವನ್ನೂ ನೋಡಿಕೊಳ್ಳಬೇಕು. ಇದರಿಂದ ಹನುಮಾನ ನಗರ ಉದ್ಯಾನದಲ್ಲಿ ಎಲ್ಲಿ ನೋಡಿದರೂ ಕಸವೇ. 4-10 ವರ್ಷದ ಮಕ್ಕಳಿಗಾಗಿ ಮಾಡಿದ ಜೋಕಾಲಿ, ಜಾರುಬಂಡಿಯನ್ನು ದೊಡ್ಡವರು, ಮಕ್ಕಳ ತಾಯಂದಿರೇ ಬಳಸುತ್ತಿದ್ಧಾರೆ. ಬೆಳಗಾವಿ ನಗರದಲ್ಲಿ 142 ಉದ್ಯಾನಗಳಿವೆ. ಅದರಲ್ಲಿ 34.96 ಎಕರೆ ವಿಸ್ತೀರ್ಣ. ಎ ಗ್ರೇಡ್ 25, ಬಿ ಗ್ರೇಡ್ 14, ಸಿ ಗ್ರೇಡ್ 9 ಉದ್ಯಾನಗಳಿವೆ. ಸುಮಾರು 50 ಕಡೆ ಮಕ್ಕಳ ಆಟಿಕೆ ಅಳವಡಿಸಲಾಗಿದೆ. ಸಾರಥಿ ಕಾಲೋನಿ, ಮರಾಠಾ ಕಾಲೋನಿ, ಕುಮಾರಸ್ವಾಮಿ ಲೇಔಟ್, ಶಾಂತಿ ಕಾಲೋನಿ, ಸರಾಫ್ ಕಾಲೋನಿ ಸೇರಿ ಕೆಲವೆಡೆ ಮಾತ್ರ ಆಟಿಕೆ ಸುವ್ಯವಸ್ಥೆಯಲ್ಲಿದೆ. ಉಳಿದ ಕಡೆ ಮುರಿದು ಬಿದ್ದ ಸಲಕರಣೆಗಳು ತುಕ್ಕು ಹಿಡಿಯುತ್ತಿವೆ. ಗ್ರೀಸ್ ಹಾಕುವುದು, ಬೋಲ್ಟ್-ಪಿಟ್ಟಿಂಗ್, ಸರಪಳಿ ಜೋಡಿಸುವ ಕೆಲಸವೇ ಆಗಿಲ್ಲ.ಶೌಚಕ್ಕೆ ಪರದಾಟ, ನೀರಿಗೆ ಪರಿತಾಪ


ಬಹುತೇಕ ಉದ್ಯಾನಗಳಲ್ಲಿ ಶೌಚಾಲಯ ಇಲ್ಲ. ಇದ್ದ ಕಡೆ ಸ್ವಚ್ಛತೆ, ನೀರು ಇಲ್ಲ. ಶ್ರೀನಗರ ಉದ್ಯಾನದಲ್ಲಿ ಹೊಸ ಶೌಚಾಲಯ ಕಟ್ಟಿದ್ದಾರೆ. ಆದರೆ, ಬೀಗ ಜಡಿದಿದ್ದಾರೆ. ಓಪನಿಂಗ್ ಆಗಿಲ್ಲ, ನೀರಿನ ವ್ಯವಸ್ಥೆ ಇಲ್ಲ ಎನ್ನುತ್ತಾರೆ ಸಿಬ್ಬಂದಿ. ಕುಡಿಯುವ ನೀರಿನ ವ್ಯವಸ್ಥೆ ಯಾವ ಉದ್ಯಾನದಲ್ಲೂ ಇಲ್ಲ. ಮನೆಯಿಂದಲೇ ನೀರು ತರಬೇಕು ಅಥವಾ ಹೊರಗೆ ದುಡ್ಡು ಕೊಟ್ಟು ಖರೀದಿಸುವ ಪರಿಸ್ಥಿತಿ ಇದೆ.

ಕೊಟ್ಟಿಗೆಯಾದ ಉದ್ಯಾನವನ

ಹನುಮಾನನಗರ ಉದ್ಯಾನದಲ್ಲಿ ರೈತರು ಜಾನುವಾರು ಕಟ್ಟಿದ್ದಾರೆ. ಮಕ್ಕಳು ಆಟಕ್ಕೆ ಬಂದಾಗ ಹಗ್ಗ ತುಂಡಾಗಿ ಜಾನುವಾರು ದಾಳಿ ಮಾಡಿದರೆ ಯಾರು ಹೊಣೆ? ಎಂದು ನಾಗರಿಕರು ಪ್ರಶ್ನಿಸುತ್ತಾರೆ. ಮಿಲಿಟರಿ ಮಹಾದೇವ ಮಂದಿರ ಆವರಣದ ಉದ್ಯಾನವನ್ನು ಸೈನಿಕರೇ ನಿರ್ವಹಿಸುತ್ತಿದ್ದಾರೆ. ಅಲ್ಲಿ ಮಕ್ಕಳು ಬಿದ್ದರೆ ತಕ್ಷಣ ಡೆಟಾಲ್ ಹಚ್ಚುತ್ತಾರೆ. ಇಂತಹ ವ್ಯವಸ್ಥೆ ಬೇರೆಡೆ ಎಲ್ಲಿಯೂ ಇಲ್ಲ. ಅಲ್ಲದೇ, ಮುರಿದ ಪರಿಕರಗಳನ್ನು ಸರಿಪಡಿಸಲು ಹಲವು ಬಾರಿ ಪಾಲಿಕೆ ಅಧಿಕಾರಿಗಳಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಉದ್ಯಾನಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡದಿರುವುದೇ ಅವ್ಯವಸ್ಥೆಗೆ ಕಾರಣ ಎಂದು ಸ್ಥಳೀಯರು ಪಾಲಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.------

ಕೋಟ್

ಮುರಿದ ಜೋಕಾಲಿ, ಜಾರುಬಂಡಿ ಸರಿಪಡಿಸಬೇಕು. ಮತ್ತಷ್ಟು ಆಟಿಕೆ ಸಾಮಗ್ರಿಗಳನ್ನು ಹಾಕಬೇಕು. ಕುಡಿಯಲು ಸ್ವಚ್ಛ ನೀರು ಕೊಡಬೇಕು. ದೊಡ್ಡವರು ಆಡುವುದನ್ನು ತಡೆಯಬೇಕು. ಮಿಲಿಟರಿ ಮಹಾದೇವ ಮಂದಿರ ಉದ್ಯಾನದಲ್ಲಿ ಬಿದ್ದರೆ ಮಿಲಿಟರಿ ಅಂಕಲ್ ಡೆಟಾಲ್ ಹಚ್ಚುತ್ತಾರೆ. ಇದೇ ರೀತಿ ಎಲ್ಲಾ ಉದ್ಯಾನದಲ್ಲೂ ವ್ಯವಸ್ಥೆ ಮಾಡಬೇಕು.

- ರಾಜು ಪಾಟೀಲ ವಿದ್ಯಾರ್ಥಿಕೋಟ್ ಹನುಮಾನ ನಗರದಲ್ಲಿ ಉದ್ಯಾನವನ ನಿರ್ಮಾಣವಾದಾಗ ಖುಷಿಯಾಗಿತ್ತು. ಈಗ ನಿರ್ವಹಣೆ ಕೊರತೆಯಿಂದ ಸಂಪೂರ್ಣ ಹಾಳಾಗಿದೆ. ಅಧಿಕಾರಿಗಳು ತಿರುಗಿಯೂ ನೋಡುತ್ತಿಲ್ಲ. ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಕೂಡಲೇ ಎಚ್ಚೆತ್ತು ಮೊದಲಿನ ರೀತಿ ಮಾಡಿಕೊಡಬೇಕು.

- ಮಂಜುನಾಥ ಹಿರೇಮಠ, ಸ್ಥಳೀಯ ಕೋಟ್

ಎಲ್ಲೆಲ್ಲಿ ಆಟಿಕೆ ಹಾಳಾಗಿದೆ ಎಂದು ವರದಿ ತರಿಸಿಕೊಳ್ಳುತ್ತೇನೆ. ಕುಡಿಯುವ ನೀರು, ಶೌಚಾಲಯಕ್ಕೆ ಶೀಘ್ರ ಕ್ರಮ. ಅಮೃತ ನಗರ ಯೋಜನೆಯಡಿ ಉದ್ಯಾನವನ ಅಭಿವೃದ್ಧಿ ಮಾಡಲಾಗುವುದು. ಮಕ್ಕಳಿಗೆ ಒಳ್ಳೆಯ ವಾತಾವರಣ ಕೊಡುತ್ತೇವೆ. ಸಾರ್ವಜನಿಕರು ಸ್ವಚ್ಛತೆ ಕಾಪಾಡಬೇಕು. ದೊಡ್ಡವರು ಆಟಿಕೆಗಳನ್ನು ಬಳಸಬಾರದು.- ಕಾರ್ತಿಕ್.ಎಂ, ಮಹಾನಗರ ಪಾಲಿಕೆ ಆಯುಕ್ತ