ಕನ್ನಡಪ್ರಭ ವಾರ್ತೆ ಬೆಳಗಾವಿ

ಕಿತ್ತೂರು ಸೇರಿದಂತೆ ಬಹುತೇಕ ರಾಜಮನೆತನಗಳು, ಸಂಸ್ಥಾನಗಳ ಇತಿಹಾಸಕ್ಕೆ ಮೂಲ ದಾಖಲೆ ಜಾನಪದವೇ ಆಗಿದೆ ಎಂದು ಸವಣೂರಿನ ಉಪನ್ಯಾಸಕ ಡಾ.ನೀಲಪ್ಪ ವಾಲಿಕಾರ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಶನಿವಾರ ನಗರದ ಕನ್ನಡ ಭವನಲ್ಲಿ ಏರ್ಪಡಿಸಿದ್ದ ದಿವಂಗತ ಮರಿಕಲ್ಲಪ್ಪ ಮಲಶೆಟ್ಟಿ ಮತ್ತು ಬೆಟಗೇರಿ ಕೃಷ್ಣ ಶರ್ಮ ದತ್ತಿ ಉಪನ್ಯಾಸ ಹಾಗೂ ಜಾನಪದ ಗೀತ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಣ್ಣಿನ ಸೊಗಡು, ಹಳ್ಳಿಗಾಡಿನ ಬದುಕಿನ ಚಿತ್ರಣ ತಿಳಿಸುವ, ಇತಿಹಾಸ ಅನಾವರಣಗೊಳಿಸುವ ತೊಂಡಿ ಸಂಪ್ರದಾಯದ ಜಾನಪದ ಒಬ್ಬರಿಂದ ಇನ್ನೊಬ್ಬರಿಗೆ ತಿಳಿಸುವ, ಪ್ರಚಾರಗೊಳಿಸುವ ಸಾಹಿತ್ಯವೇ ಜಾನಪದ ಸಾಹಿತ್ಯ. ಇಂದಿಗೂ ಹಳ್ಳಿಗಳಲ್ಲಿ ಮಾತ್ರ ಇದು ಕಂಡುಬರುತ್ತದೆ ಎಂದು ಡಾ.ವಾಲಿಕಾರ್ ತಿಳಿಸಿದರು.

ಸೋಬಾನೆ ಪದಗಳು, ಗೀ ಗೀ ಪದಗಳು, ಬೀಸು ಕಲ್ಲಿನ ಪದಗಳು, ಭಜನೆಗಳು, ಬಯಲಾಟ, ದೊಡ್ಡಾಟ, ಕೃಷಿ ಕೆಲಸದ ಹಾಡುಗಳು, ಪುರಾಣ ಕಥೆ, ದೇವರ ನಾಮ, ದೇವರ ಸ್ತುತಿ, ಅನುಭವದ ಮಾತು, ಅಜ್ಜಿ ಕಥೆ, ಒಗಟು, ಒಡಪು, ಗಾದೆ ಮಾತು, ಸಂಗ್ಯಾ-ಬಾಳ್ಯಾ ನಾಟಕ, ತಾಯಿ-ಮಗಳ ಸಂಬಂಧದ ಹಾಡುಗಳು, ಮನಸ್ಸಿಗೆ ನೆಮ್ಮದಿ ನೀಡುವ ಹಾಡುಗಳು - ಇವೆಲ್ಲವೂ ಜಾನಪದ ಸಾಹಿತ್ಯದ ಗಟ್ಟಿ ಪ್ರಕಾರಗಳು. ಇವೆಲ್ಲ ನಮ್ಮ ಸಂಸ್ಕೃತಿ ಉಳಿಸುವಂತಹವು ಎಂದು ಹೇಳಿದರು.

ಜನಪದರ ಬಾಯಿಯಿಂದ ಬಾಯಿಗೆ ಹಬ್ಬುವ ಈ ಸಾಹಿತ್ಯದ ನಿರ್ಮಾತೃರ ಹೆಸರು ಎಲ್ಲಿಯೂ ಕಾಣುವುದಿಲ್ಲ. ಇವೆಲ್ಲ ಇಂದು ಮರೆಯಾಗುತ್ತಿರುವುದು ಖೇದಕರ. ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಾದರೂ ನಿರೀಕ್ಷಿಸಿದ ಕಾರ್ಯ ಆಗುತ್ತಿಲ್ಲ ಎಂದು ಅವರು ವಿಷಾದಿಸಿದರು.


ಹಿರಿಯ ಸಾಹಿತಿ ಯು.ರು.ಪಾಟೀಲ ಮಾತನಾಡಿ, ಸಾಹಿತ್ಯದ ಎಲ್ಲ ಪ್ರಕಾರಗಳು ಜಾನಪದ ಸಾಹಿತ್ಯದ ವಿಭಾಗಗಳೇ ನಮ್ಮ ದೇಶದ ಜಾನಪದ ಗುಂಗು ವಿದೇಶಿಯರನ್ನು ಬಿಟ್ಟಿಲ್ಲ. ಕಸೂತಿ ಕಲೆ ಸೇರಿದಂತೆ ಬೇರೆ ಕ್ಷೇತ್ರಗಳಲ್ಲೂ ಜಾನಪದ ಸೊಗಡು ಕಂಡುಬರುತ್ತದೆ. ಮಹಿಳೆಯರ ಬೈಗುಳ, ಉತ್ತರ ಕರ್ನಾಟಕದ ಬೈಗುಳಗಳ ಕುರಿತೇ ಸಂಶೋಧನಾ ಗ್ರಂಥಗಳು ಪ್ರಕಟವಾಗಿವೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷೆ ಮಂಗಳ ಮೆಟಗುಡ್ಡ ಅಧ್ಯಕ್ಷತೆ ವಹಿಸಿದ್ದರು. ಮುರುಗೇಶ ಶಿವಪೂಜಿ, ರತ್ನಪ್ರಭಾ ಬೆಲ್ಲದ ವೇದಿಕೆಯ ಮೇಲಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವೈ.ಮೆಣಸಿನಕಾಯಿ ಸ್ವಾಗತಿಸಿದರು. ಸುಮಾ ಬೇವಿನಕೊಪ್ಪ ಮಠ ಅತಿಥಿ ಪರಿಚಯ, ಮಹಾದೇವಿ ಅಜವಾನ ನಿರೂಪಣೆ, ಹೇಮಾವತಿ ಸುನೋಳಿ ವಂದಿಸಿದರು.

ಗೌರವ ಕಾರ್ಯದರ್ಶಿ ವೀರಭದ್ರ ಅಂಗಡಿ, ರತ್ನಪ್ರಭಾ ಬೆಲ್ಲದ, ಸುರೇಶ್ ಸಕ್ಕರೆನ್ನವರ್, ಆರ್.ವಿ.ಬನಶಂಕರಿ, ಶೋಭಾ ಬೇವಿನ ಕೊಪ್ಪ, ಆಶಾ ಸಂಸದ್ದಿ, ಖುಷಿ ಬಿರಾದ, ಲಲಿತಾ ಪರ್ವತ್ ರಾವ್, ಶೋಭಾ ಶಿವಳ್ಳಿ, ಪಾರ್ವತಿ ತುಪ್ಪದ, ಇಂದಿರಾ ಮೋಟೆಬೆನ್ನೂರು, ಬಾಳಗೌಡ ದೊಡ್ಡಬಂಗಿ ಸೇರಿ ಹಲವರು ಜಾನಪದ ಹಾಡುಗಳನ್ನು ಹಾಡಿದರು.