ಪರಿಸರ ನಮಗೆ ತಾಯಿ ಇದ್ದಂತೆ: ನ್ಯಾ.ಇ.ಎಸ್.ಇಂದಿರೇಶ್

KannadaprabhaNewsNetwork |  
Published : Jul 13, 2026, 12:30 AM IST
12ಕೆಎಂಎನ್ ಡಿ19 | Kannada Prabha

ಸಾರಾಂಶ

ಪರಿಸರ ನಮಗೆ ತಾಯಿ ಇದ್ದಂತೆ. ಪರಿಸರ ಉತ್ತಮವಾಗಿದ್ದರೆ ನಾವೂ ಕೂಡ ಆರೋಗ್ಯವಂತರಾಗಿರುತ್ತೇವೆ. ತಂತ್ರಜ್ಞಾನ ಎಷ್ಟೇ ಬೆಳೆದರೂ ಕೂಡ ಆಹಾರದ ಕೊರತೆ ಉಂಟಾದರೆ ತಂತ್ರಜ್ಞಾನದಿಂದ ನಾವು ಬದುಕಲು ಸಾಧ್ಯವಿಲ್ಲ. ಆಹಾರದ ಅಭಾವ ನೀಗಿಸಿದ ಎಂ.ಎಸ್.ಸ್ವಾಮಿನಾಥನ್ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ದೇಶದಲ್ಲಿ ಕೈಗಾರಿಕೆ ಮತ್ತು ತಾಂತ್ರಿಕತೆ ಎಷ್ಟೇ ಅಭಿವೃದ್ಧಿಯಾಗಿದ್ದರೂ ಕೂಡ ಮನೆಯಲ್ಲಿ ಆಹಾರದ ಕೊರತೆ ಬಂದಾಗ ಮನುಷ್ಯರು ಬದುಕಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಹೇಳಿದರು.

ತಾಲೂಕಿನ ಪಡುವಲಪಟ್ಟಣ ಗ್ರಾಮದ ಹೊರವಲಯದ ಬಸವನಕಲ್ಲು ಅರಣ್ಯ ತಪ್ಪಲಿನಲ್ಲಿ ಬೆಂಗಳೂರಿನ ಮಾತೃ ಫೌಂಡೇಷನ್, ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಅರಣ್ಯ ಇಲಾಖೆ, ತಾಲೂಕು ವಕೀಲರ ಸಂಘ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ಸಹಭಾಗಿತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಮಾತೃಗೊಂದು ಮರ ಸಹಸ್ರ ಗಿಡನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ನಮಗೆ ತಾಯಿ ಇದ್ದಂತೆ. ಪರಿಸರ ಉತ್ತಮವಾಗಿದ್ದರೆ ನಾವೂ ಕೂಡ ಆರೋಗ್ಯವಂತರಾಗಿರುತ್ತೇವೆ. ತಂತ್ರಜ್ಞಾನ ಎಷ್ಟೇ ಬೆಳೆದರೂ ಕೂಡ ಆಹಾರದ ಕೊರತೆ ಉಂಟಾದರೆ ತಂತ್ರಜ್ಞಾನದಿಂದ ನಾವು ಬದುಕಲು ಸಾಧ್ಯವಿಲ್ಲ. ಆಹಾರದ ಅಭಾವ ನೀಗಿಸಿದ ಎಂ.ಎಸ್.ಸ್ವಾಮಿನಾಥನ್ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದರು.

ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗೆ ಬಿಲ್ ಕಟ್ಟುವಾಗ ಪ್ರಕೃತಿ ಬೆಲೆ ಗೊತ್ತಾಗುತ್ತದೆ. ಪ್ರತಿಯೊಬ್ಬರಿಗೂ ಮೂಲ ಹಕ್ಕುಗಳಿಗಿಂತ ಮೂಲ ಕರ್ತವ್ಯಗಳ ಅರಿವಾಗಬೇಕು. ಪರಿಸರ ಸಂರಕ್ಷಣೆಯಲ್ಲಿ ನಾವು ಪಾಲ್ಗೊಂಡು ಮುಂದಿನ ಪೀಳಿಗೆಯನ್ನೂ ಸಹ ಹುರಿದುಂಬಿಸಬೇಕು ಎಂದರು.

ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಮಾತನಾಡಿ, ಪ್ರಕೃತಿ ಇರುವವರೆಗೆ ಮಾತ್ರ ನಾವು ಉಸಿರಾಡಬಹುದು. ಪ್ರಕೃತಿ ಉಸಿರು ನಿಲ್ಲಿಸಿದರೆ ಎಲ್ಲರ ಉಸಿರು ನಿಂತು ಹೋಗುತ್ತದೆ. ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕೆಂದರೆ ಪ್ರಕೃತಿ ಬೇಕೇಬೇಕು. ಒತ್ತುವರಿ ಮತ್ತು ಗಣಿಗಾರಿಕೆಯಿಂದಾಗಿ ಅರಣ್ಯ ಸಂಪತ್ತು ಕಡಿಮೆಯಾಗುತ್ತಿದೆ ಎಂದು ಎಚ್ಚರಿಸಿದರು.

ಇತ್ತೀಚೆಗೆ ಶೇ.8ರಷ್ಟು ಓಜೋನ್ ಪದರ ರಂದ್ರವಾಗಿ ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ. ಹಾಗಾಗಿ ಮರ ಕಡಿಯುವುದನ್ನು ನಿಲ್ಲಿಸಬೇಕು. ನಾಶವಾಗುತ್ತಿರುವ ಪ್ರಕೃತಿ ಸಂರಕ್ಷಣೆ ಮಾಡಬೇಕು. ಪ್ರಕೃತಿ ತಾಯಿ ಸಂರಕ್ಷಣೆ ಮಾಡಲು ಶ್ರಮಿಸುತ್ತಿರುವ ಮಾತೃ ಫೌಂಡೇಷನ್‌ನ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದಿಸಬೇಕು ಎಂದರು.

ರಾಜ್ಯ ಉಚ್ಛನ್ಯಾಯಾಲಯದ ನ್ಯಾಯಮೂರ್ತಿ ಎಸ್.ವಿಶ್ವಜಿತ್‌ ಶೆಟ್ಟಿ, ರಾಜ್ಯ ಗ್ರಾಹಕರ ಆಯೋಗದ ಅಧ್ಯಕ್ಷ ಟಿ.ಜಿ.ಶಿವಶಂಕರೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮಾತನಾಡಿದರು. ಮಾತೃ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ವಕೀಲ ಚಂದ್ರಕುಮಾರ್ ಪ್ರಾಸ್ತಾವಿಕ ನುಡಿ ನುಡಿದರು.

ಮಾತೃಗೊಂದು ಮರ ಸಹಸ್ರ ಗಿಡನೆಡುವ ಅಭಿಯಾನದಲ್ಲಿ ವಿವಿಧ ಬಗೆಯ ಹಣ್ಣು ಮತ್ತು ಅರಣ್ಯ ಸಂಬಂಧಿತ 1500ಕ್ಕೂ ಹೆಚ್ಚು ಗಿಡ ನೆಡಲಾಯಿತು. ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಜೆ.ಎನ್.ಸುಬ್ರಹ್ಮಣ್ಯ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ರಘು, ಕೆಎಸ್‌ಬಿಸಿ ಸದಸ್ಯ ಮಧುಸೂಧನ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಉಡೆ ಪಿ.ಕೃಷ್ಣ, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಅಶೋಕ್, ತಾಪಂ ಇಒ ಸತೀಶ್, ವಲಯ ಅರಣ್ಯ ಸಂರಕ್ಷಣಾಧಿಕಾರಿ ಸಂಪತ್ ಪಟೇಲ್, ಡಿವೈಎಸ್‌ಪಿ ಬಿ.ಚಲುವರಾಜು, ತಾಲೂಕು ಕಸಾಪ ಅಧ್ಯಕ್ಷ ಸಿ.ಆರ್.ಚಂದ್ರಶೇಖರ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಕಿತ್ತೊಗೆಯಬೇಕು: ಹರೀಶ್
2028ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ: ಸೀಕಲ್ ರಾಮಚಂದ್ರಗೌಡ