ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಶ್ರೀ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮವನ್ನು ನಗರದಲ್ಲಿ ಭಾನುವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.ಮೊದಲಿಗೆ ನಗರದ ಚಾಮರಾಜೇಶ್ವರ ದೇವಾಲಯ ಮುಂಭಾಗದಲ್ಲಿ ಶ್ರೀ ಮಹಾವೀರರ ಭಾವಚಿತ್ರಕ್ಕೆ ಎಂ.ಎಸ್.ಐ.ಎಲ್. ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಪುಷ್ಪಾರ್ಚನೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಮಂಗಳ ವಾದ್ಯ ಸಮೇತ ಮಹಾವೀರರ ಭಾವಚಿತ್ರದ ಮೆರವಣಿಗೆ ಸಾಗಿ ವರನಟ ಡಾ. ರಾಜ್ ಕುಮಾರ್ ರಂಗಮಂದಿರದ ಬಳಿ ಮುಕ್ತಾಯವಾಯಿತು.
ನಂತರ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ, ಎಲ್ಲಾ ಧರ್ಮಗಳ ಸಾರವು ಅಹಿಂಸೆ, ಮಾನವತೆ ಹಾಗೂ ಪ್ರೀತಿಯನ್ನು ಪ್ರತಿಪಾದಿಸುವುದಾಗಿದೆ. ಮಹಾವೀರರು ಶಾಂತಿಯನ್ನು ಸಾರಿದರು ಜನರ ಒಳಿತಿಗಾಗಿ ಕಳಕಳಿ ವ್ಯಕ್ತಪಡಿಸಿದರು ಎಂದರು.ಬುದ್ಧ ಹಾಗೂ ಮಹಾವೀರರು ಮಾನವತೆಗೆ ಒಲವು ತೋರಿದರು. ಇಬ್ಬರ ವಿಚಾರಧಾರೆಗಳಲ್ಲೂ ಸಾಮ್ಯತೆ ಇದೆ. ಮನುಕುಲದ ಒಳಿತಿಗಾಗಿ ಹಂಬಲಿಸಿ ಅದಕ್ಕಾಗಿ ತಮ್ಮ ಬದುಕನ್ನೆ ಮುಡುಪಾಗಿ ಇಟ್ಟರು. ಸಮಾಜದ ಜನತೆ ಇಂದಿಗೂ ಸೇವಾ ಮನೋಭಾವನೆ ಹೊಂದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಅವರು ಭಗವಾನ್ ಮಹಾವೀರರ ಬದುಕು ಮತ್ತು ಅವರು ನಡೆದು ಬಂದ ದಾರಿಯಲ್ಲಿ ಸಾಗಬೇಕಿದೆ. ಮಹಾವೀರರು ಮೂಢನಂಬಿಕೆ ಕಂದಾಚಾರಗಳನ್ನು ವಿರೋದ ಮಾಡಿದವರು. ಶ್ರೀಮಂತಿಕೆ ಜೀವನವನ್ನು ತ್ಯಜಿಸಿ ಭಗವಾನ್ ಮಹಾವೀರರು ಬಡವರು ಮೇಲೆ ಅಪಾರ ಕಾಳಜಿ ತೋರಿದರು ಎಂದರು.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಉಪನ್ಯಾಸಕ ಸುರೇಶ್ ಎನ್ ಋಗ್ವೇದಿ ಮುಖ್ಯ ಭಾಷಣ ಮಾಡಿದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡಯ್ಯ ಸಮುದಾಯ ಮುಖಂಡರಾದ ನಿರ್ಮಲ ಕುಮಾರ್, ಸಿ. ಎನ್ ಚಂದ್ರಪ್ರಭ ಜೈನ್, ಶಾಂತಿ ಪ್ರಸಾದ್, ಪದ್ಮ ಕಲಾ, ಅನುರಾದ ಮಹೇಶ್, ವಿಜಯ ಬಾಬು ಇತರರು ಉಪಸ್ಥಿತರಿದ್ದರು.