ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ಸಂಪನ್ನ, ಪ್ರತಿ ವರ್ಷ ಲಕ್ಷದೀಪೋತ್ಸವದ ಮರುದಿನ ಈ ವಿಶೇಷ ಪೂಜೆ ನೆರವೇರುತ್ತದೆ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಪಂಚನಮಸ್ಕಾರ ಮಂತ್ರಪಠಣ, ಭಜನೆ, ತ್ರ, ಪೂಜಾಮಂತ್ರ ಪಠಣ, ಅಷ್ಟ ವಿಧಾರ್ಚನೆ ಪೂಜೆ, ಶ್ಲೋಕಗಳ ಪಠಣ, ವರ್ಣನೆ, ನೃತ್ಯ ಪ್ರದರ್ಶನ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಬುಧವಾರ ರಾತ್ರಿ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ವೈಭವದಿಂದ ನಡೆಯಿತು. ಇದು ಪ್ರತಿ ವರ್ಷ ಲಕ್ಷದೀಪೋತ್ಸವದ ಮರುದಿನ ನಡೆಯುವ ಕಾರ್ಯಕ್ರಮವಾಗಿದೆ.
ಹೆಗ್ಗಡೆಯವರ ನಿವಾಸ ಬೀಡಿನಿಂದ ಮಹೋತ್ಸವ ಸಭಾಭವನಕ್ಕೆ ಭವ್ಯ ಮೆರವಣಿಗೆ, ಬಳಿಕ ಅಲ್ಲಿ ಅಷ್ಟವಿಧಾರ್ಚನೆ ಪೂಜೆ ನಡೆಯಿತು. ಅರಹಂತ ಪೂಜೆ, ಸಿದ್ಧಪರಮೇಷ್ಠಿಗಳ ಪೂಜೆ, ಬಾಹುಬಲಿ ಸ್ವಾಮಿ ಪೂಜೆ, ಶ್ರುತ ಪೂಜೆ ಮತ್ತು ಗಣಧರಪರಮೇಷ್ಠಿ ಪೂಜೆ ನಡೆಯಿತು.
ಶಿಶಿರ್ ಇಂದ್ರರು ಮಂತ್ರ ಪಠಣ ಮಾಡಿದರು. ಸೌಮ್ಯ, ಮಂಜುಳಾ, ಸಾವಿತ್ರಿ ಮತ್ತು ಅರುಣಾ ಅವರ ಸುಶ್ರಾವ್ಯ ಹಾಡಿಗೆ ಹಿಮ್ಮೇಳದಲ್ಲಿ ತಬಲಾವಾದಕರಾಗಿ ಶೋಧನ್, ಧರ್ಮಸ್ಥಳ ಮತ್ತು ಹಾರ್ಮೋನಿಯಂನಲ್ಲಿ ರವಿರಾಜ್, ಉಜಿರೆ ಸಹಕರಿಸಿದರು.
ಸಮವಸರಣ ಎಂದರೇನು?
ಕೇವಲ ಜ್ಞಾನ ಪಡೆದ ಬಳಿಕ ತೀರ್ಥಂಕರರು ತಮ್ಮ ದಿವ್ಯಧ್ವನಿಯಿಂದ ಧರ್ಮೋಪದೇಶ ನೀಡುವ ಸಭೆಗೆ ಸಮವಸರಣ ಎನ್ನುತ್ತಾರೆ. ಇಲ್ಲಿ ಸಕಲ ಜೀವಿಗಳಿಗೂ ಅವರವರ ಭಾಷೆಯಲ್ಲಿ ಧರ್ಮೋಪದೇಶ ಕೇಳುವ ಅವಕಾಶವಿದೆ. ಸಮವಸರಣದಲ್ಲಿ ದೇವತೆಗಳೆ ಬೇರೆ ಬೇರೆ ರೂಪವನ್ನು ಪಡೆದು ಭಗವಂತನ ಮಹಿಮೆಯನ್ನು ತಿಳಿಸುತ್ತಾರೆ. ಆಚಾರ್ಯ ಮಾನತುಂಗ ವಿರಚಿತ ಭಕ್ತಾಮರಸ್ತೋತ್ರದಲ್ಲಿ ಅಷ್ಟ ಮಹಾಪ್ರಾತಿಹರ‍್ಯದ ಶ್ಲೋಕಗಳಲ್ಲಿ ವರ್ಣಿಸಲಾಗಿದೆ ಎಂದು ಮೂಡುಬಿದಿರೆಯ ಜೈನ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಹೇಳಿದರು.
ಹೇಮಾವತಿ ವೀ. ಹೆಗ್ಗಡೆಯವರ ಪರಿಕಲ್ಪನೆಯಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸಾಂಸ್ಕೃತಿಕ ಕಲಾಕೇಂದ್ರದ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶನದ ಮೂಲಕ ಸಾದರಪಡಿಸಿದರು. ಚೈತ್ರ, ಅರುಣ್ ಮತ್ತು ಸುನಿಲ್ ನೃತ್ಯ ನಿರ್ದೇಶನ ನೀಡಿದರು.
ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್, ಪ್ರಿಯದರ್ಶಿನಿ, ರಜತಾ ಮತ್ತು ಬಾಹುಬಲಿ ಸೇವಾ ಸಮಿತಿಯ ಸದಸ್ಯರು ಅಷ್ಟವಿಧಾರ್ಚನೆ ಪೂಜೆಯಲ್ಲಿ ಭಾಗವಹಿಸಿದರು. ಶಾಂತಿಮಂತ್ರ ಪಠಣ ಮತ್ತು ಮಹಾಮಂಗಳಾರತಿಯೊಂದಿಗೆ ಸಮವಸರಣ ಪೂಜೆ ಸಮಾಪನಗೊಂಡಿತು. ಪಾಕತಜ್ಞರಾದ ಪಾಂಡಿರಾಜ ಕೊಕ್ರಾಡಿ ಮತ್ತು ಬಾಹುಬಲಿ, ಪಿಲ್ಯ ಅವರನ್ನು ಗೌರವಿಸಲಾಯಿತು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು. ಮಹಾವೀರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.