ಕಣ್ಮರೆಯಾದ ಕಲಿಯುಗದ ಕುಡುಕ ಖ್ಯಾತಿಯ ರಾಜು

KannadaprabhaNewsNetwork |  
Published : Oct 14, 2025, 01:02 AM ISTUpdated : Oct 14, 2025, 04:57 AM IST
Raju Talikote

ಸಾರಾಂಶ

ಹಲವು ವರ್ಷಗಳಿಂದ ನಾಟಕ ಹಾಗೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ರಾಜು ತಾಳಿಕೋಟಿ, ಕಲಿಯುಗದ ಕುಡುಕ ನಾಟಕದ ಮೂಲಕ ಉತ್ತರ ಕರ್ನಾಟಕದಲ್ಲಿ ಭಾರಿ ಹೆಸರು ಮಾಡಿದ್ದರು

ಶಶಿಕಾಂತ ಮೆಂಡೆಗಾರ

 ವಿಜಯಪುರ :  ಕೊರಳುತುಂಬ ಸಾರಾಯಿ ಬಾಟಲಿ ಪೋಣಿಸಿಕೊಂಡು, ಕೈಯಲ್ಲೊಂದು ಬಾಟಲಿ ಹಿಡಿದು ಅಮಲೇರಿದಂತೆ ನಟಿಸುತ್ತ ವೇದಿಕೆಗೆ ಬಂದರೆ ಸಾಕು ಪ್ರೇಕ್ಷಕರಿಂದ ಕೇಕೇ ಸಿಳ್ಳಿಗಳು ಮುಗಿಲು ಮುಟ್ಟುತ್ತಿದ್ದವು. ಇವರು ಸ್ಟೇಜ್‌ಗೆ ಬಂದ್ರೆ ಸಾಕು ಇವರ ಹಾಸ್ಯಭರಿತವಾದ ಡೈಲಾಗ್‌ಗಳಿಂದ ಎಲ್ಲರನ್ನು ತಲ್ಲೀನರಾಗಿಸಿಬಿಡುತ್ತಿದ್ದರು. ಹೌದು 90ರ ದಶಕದಲ್ಲಿ ಉತ್ತರ ಕರ್ನಾಟಕದಲ್ಲಿ ಕಲಿಯುಗದ ಕುಡುಕನೆಂದೇ ಭಾರೀ ಹೆಸರು ಮಾಡಿದ್ದ ರಾಜು ತಾಳಿಕೋಟಿ ಊರ್ಫ್‌ ರಾಜೇಸಾಬ ಮುಕ್ತಂಸಾಬ್ ಯಂಕಂಚಿ ಇನ್ನಿಲ್ಲವಾಗಿದ್ದಾರೆ.

ವಯಕ್ತಿಕ ವಿವರ:

ಅಂದಿನ ಮುದ್ದೇಬಿಹಾಳ ತಾಲೂಕಿನ ತಾಳಿಕೋಟಿಯಲ್ಲಿ 1965 ಡಿಸೆಂಬರ್‌ 18ರಂದು‌ ಜನಿಸಿದ ರಾಜು ತಾಳಿಕೋಟಿಯವರ ಮೂಲ ಹೆಸರು ರಾಜೇಸಾಬ್ ಮಕ್ತುಂಸಾಬ್ ಯಂಕಂಚಿ. ರಾಜು ತಾಳಿಕೋಟಿ ಎಂದೇ ಪ್ರಸಿದ್ಧಿ ಪಡೆದಿದ್ದ ಇವರು, ತಾಳಿಕೋಟೆಯ ಖಾಸ್ಗತೇಶ್ವರ ಮಠದಲ್ಲಿ 4ನೇ ತರಗತಿಯ ವರೆಗೆ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ರಾಜು ತಾಳಿಕೋಟಿ ಅವರ ತಂದೆ ಮಕ್ತುಂಸಾಬ್, ತಾಯಿ ಮೆಹಬೂಬಿಜಾನ್, ಪತ್ನಿ ಪ್ರೇಮಾ ತಾಳಿಕೋಟೆ (ರಂಗ ಕಲಾವಿದೆ), ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣುಮಕ್ಕಳಿದ್ದಾರೆ. ಇವರಿಗೆ ಇಬ್ಬರು ಅಕ್ಕಂದಿರು, ಒಬ್ಬ ಅಣ್ಣನಿದ್ದಾರೆ. ರಂಗಭೂಮಿ, ಸಿನಿಮಾ ಕ್ಷೇತ್ರದಲ್ಲಿ ಅಭಿನಯ ಹಾಗೂ ವ್ಯವಸಾಯದಲ್ಲಿ ಆಸಕ್ತಿ ಹೊಂದಿದ್ದ ಇವರು ಸಿಂದಗಿ ತಾಲೂಕಿನ ಚಿಕ್ಕ ಸಿಂದಗಿಯಲ್ಲಿ ವಾಸವಿದ್ದರು.

ಹುಟ್ಟು ಕಲಾವಿದ:

ತಮ್ಮ ಏಳನೇ ವಯಸ್ಸಿನಲ್ಲಿಯೇ ತಂದೆಯವರ ಮಾಲೀಕತ್ವದ ಶ್ರೀ ಖಾಸತೇಶ್ವರ ನಾಟ್ಯ ಸಂಘ ತಾಳಿಕೋಟಿಯಲ್ಲಿ ಸತ್ಯ ಹರೀಶ್ಚಂದ್ರ ನಾಟಕದಲ್ಲಿ ಲೋಹಿತಾಶ್ವ, ರೇಣುಕಾ ಎಲ್ಲಮ್ಮ ನಾಟಕದಲ್ಲಿ ಬಾಲ ಪರಶುರಾಮ, ಬಾಲಚಂದ್ರ ನಾಟಕದಲ್ಲಿ ಬಾಲಚಂದ್ರನ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. ಬಾಲ ಕಲಾವಿದನಾಗಿ ಅಭಿನಯಿಸಿದ ನಂತರ ರಾಜು ತಾಳಿಕೋಟಿ ತಾವೇ ಕಲಿಯುಗದ ಕುಡುಕ ಎಂಬ ನಾಟಕ ಬರೆದು, ನಿರ್ದೇಶನ ಮಾಡಿ ಪ್ರದರ್ಶನದಿಂದ ಖ್ಯಾತಿಗೆ ಪಾತ್ರರಾದರು. ಕಲಿಯುಗದ ಕುಡುಕ‌ ನಾಟಕವು 15000 ಪ್ರದರ್ಶನ ಕಂಡಿದ್ದು, ಕಲಿಯುಗದ ಕುಡುಕ ನಾಟಕದ ಅಡಿಯೋ ಕ್ಯಾಸೆಟ್ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿತ್ತು.

ಕಷ್ಟದಲ್ಲಿದ್ದರೂ ಕಲೆ ಬಿಡಲಿಲ್ಲ:

ತಂದೆ ಪಾರ್ಶ್ವವಾಯ ಪೀಡಿತರಾದರೆ ತಾಯಿ ಕ್ಯಾನ್ಸರ್‌ ಕಾಯಿಲೆಗೆ ತುತ್ತಾದಾಗ ಬದುಕಿಗಾಗಿ ಹೋಟೆಲ್ ಮಾಣಿಯಾಗಿ, ಲಾರಿ ಕ್ಲೀನರಾಗಿ ಕೆಲಸ ಮಾಡಿದರು. 1977-78ರಲ್ಲಿ ಜೀವಿ ಕೃಷ್ಣರ ನಾಟಕ ಕಂಪನಿ, ಶ್ರೀ ಗುರುಪ್ರಸಾದ ನಾಟ್ಯ ಸಂಘ ಕಡಪಟ್ಟಿ, ಪಂಚಾಕ್ಷರಿ ವಿಜಯ ನಾಟ್ಯ ಸಂಘ, ಚಿತ್ತರಗಿಯಲ್ಲಿ ನೇಪಥ್ಯದ ಕಲಾವಿದನಾಗಿ (ಪ್ರಚಾರ, ಪ್ರಸಾಧನ, ಗೇಟ ಕೀಪರ) ಸೇವೆ. ಈ ಮದ್ಯೆ ಕಂಪನಿಯ ಹಿರಿಯ ನಟರೊಬ್ಬರು ಕೈ ಕೊಟ್ಟಾಗ ಅನಿರೀಕ್ಷಿತವಾಗಿ ತಾಳಿ ತಕರಾರು ನಾಟಕದಲ್ಲಿ ಸುಮಿತ್ರ (ಕಿವುಡ) ಪಾತ್ರದಲ್ಲಿ ಅಭಿನಯಿಸಿ ಜನಪ್ರೀತಿ ಗಳಿಸಿದರು. ಅಂದಿನಿಂದ ಪಾತ್ರಗಳು ಯಶಸ್ಸು ತಂದು ಕೊಟ್ಟವು. ದಿ.ಸಾಳುಂಕಿಯವರ ಕಣ್ಣಿದ್ದರೂ ಬುದ್ದಿ ಬೇಕು, ಹೂವಿನ ಅಂಗಡಿ, ದೇವರಿಗೆ ನೆನಪಿಲ್ಲ, ಭಾಗ್ಯಬಂತು ಬುದ್ದಿಹೋಯಿತು. ಕಾಲುಕೆದರಿದ ಹೆಣ್ಣು ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದರು.

ನಾಟಕ ಕಂಪನಿ ನಡೆಸಿದ ಧೀರ:

1984ರಲ್ಲಿ ಶ್ರೀ ಶರೀಫ ಶಿವಯೋಗಿ ವಿಜಯ ನಾಟ್ಯ ಸಂಘ, ಯಂಕಂಚಿಯನ್ನು 03 ವರ್ಷಗಳ ಕಾಲ ನಡೆಸಿದರು. ನಂತರ ಶ್ರೀ ಹುಚ್ಚೆಶ್ವರ ನಾಟ್ಯ ಸಂಘ, ಕಮತಗಿಯಲ್ಲಿ ಪತ್ನಿ (ಪ್ರೇಮಾ ತಾಳಿಕೋಟೆ ಕಲಾವಿದೆ) ಜೊತೆಗೂಡಿ 1996ರ ವರೆಗೆ ರಂಗ ಸೇವೆ, ಈ ಕಂಪನಿಯಲ್ಲಿ ಹಸಿರು ಬಳೆ, ಸೈನಿಕ ಸಹೋದರಿ, ಶ್ರೀ ಗರಗದ ಮಡಿವಾಳೇಶ್ವರ ಮಹಾತ್ರೆ, ಚಿತ್ರನಟ ಸುಧೀರ ಅವರ ಜೊತೆ ಸಿಂಧೂರ ಲಕ್ಷಣ, ಹಿರಿಯ ಕಲಾವಿದೆ ಉಮಾಶ್ರೀಯವರ ಜೊತೆ ಬಸ್ ಕಂಡಕ್ಟರ್, ಸೊಸೆ ಹಾಕಿದ ಸವಾಲು ಸೇರಿದಂತೆ ಹಲವಾರು ನಾಟಕಗಳಲ್ಲಿ ಸೇವೆ ಸಲ್ಲಿಸಿದರು. ಸಾಕಷ್ಟು ಏಳು ಬೀಳುಗಳ ಮಧ್ಯೆ ಮತ್ತೆ 1998ರಲ್ಲಿ ಮತ್ತೆ ಶ್ರೀ ಖಾಸ್ಗತೇಶ್ವರ ನಾಟ್ಯ ಸಂಘ ಪುನರ್‌ಸ್ಥಾಪಿಸಿ ಶ್ರೀ ಗುರು ಖಾಸ್ಗತೇಶ್ವರ ಮಹಾತ್ಮ, ಮುತ್ತೈದೆ ನೀ ಮತ್ತೊಮ್ಮೆ ಬಾ, ವರಪುತ್ರ ಮನೆಗೆ ಬಂದ ಮಹಾಲಕ್ಷ್ಮೀ, ಕುಡುಗೋಲು ನುಂಗಬ್ಯಾಡ್ರಿ, ಯಾರ ನಂಬುವುದು ಯಾರ ಬಿಡುವುದು, ಹ್ಯಾಂಗರ ಬರಿ ನಕ್ಕೋತ ಹೋಗ್ರಿ ಸೇರಿದಂತೆ ಹಲವಾರು ನಾಟಕಗಳು ಕರ್ನಾಟಕದಾದ್ಯಂತ ಸಾವಿರಾರು ಪದರ್ಶನ ಕಂಡಿವೆ.

ನಾಟಕದ ಧ್ವನಿಮುದ್ರಿಕೆಗಳು:

ಕಲಿಯುಗದ ಕುಡುಕ (ಈ ನಾಟಕವು 40 ಸಾವಿರಕ್ಕೂ ಹೆಚ್ಚು ಪ್ರಯೋಗಗಳು ಕಂಡು ಅಪಾರ ಜನಮನ್ನಣೆಗಳಿಸಿದೆ). ಕುಡುಕರ ಸಾಮ್ರಾಜ್ಯ, ಲತ್ತುಗುಣಿ ಲಕ್ಕವ್ವ, ಅಸಲಿ ಕುಡುಕ ಸೇರಿದಂತೆ ಹಲವು ಧ್ವನಿ ಸುರುಳಿಗಳನ್ನು ಹೊರತಂದಿದ್ದಾರೆ.

ಚಲನಚಿತ್ರದಲ್ಲಿ ಅಭಿನಯ:

ಹೆಂಡತಿ ಅಂದರೆ‌ ಹೆಂಡತಿ ರಾಜು ತಾಳಿಕೋಟೆ ಅಭಿನಯದ ಮೊದಲ ಚಿತ್ರವಾಗಿದ್ದು, ಪಂಜಾಬಿ ಹೌಸ್ ಎರಡನೇ ಚಿತ್ರವಾಗಿದೆ. ನಂತರ ಯೋಗರಾಜ್ ಭಟ್ ನಿರ್ದೇಶನದ ಪಂಚರಂಗಿ, ಪುನೀತರಾಜಕುಮಾರ ಅಭಿನಯದ ಪರಮಾತ್ಮ, ಅಣ್ಣಾಬಾಂಡ್‌, ಮನಸಾರೆ, ಲಿಫ್ಟ್ ಕೊಡ್ಲಾ, ಜಾಕಿ, ಸುಗ್ರೀವ, ಅಪ್ಪು ಆ್ಯಂಡ್ ಪಪ್ಪು, ಕಳ್ಳ ಮಳ್ಳ ಸುಳ್ಳ, ಅಂಜದ ಗಂಡು , ಭೀಮಾ ತೀರದಲ್ಲಿ ಸೇರಿದಂತೆ ಒಟ್ಟು 35ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಬಿರುದುಗಳು:

ಹಾಸ್ಯ ರತ್ನಾಕರ, ಹಾಸ್ಯ ಸಾಮ್ರಾಟ, ಕಾಮಿಡಿ ಕಿಂಗ್, ಕ್ಯಾಸೇಟ್‌ಕಿಂಗ್, ಕನ್ನಡದ ಸೆಂದಿಲ್ ಎಂಬ ಬಿರುದುಗಳನ್ನು ಪಡೆದುಕೊಂಡಿದ್ದಾರೆ.

ಹಲವು ಪ್ರಶಸ್ತಿಗಳು:

2010ರಲ್ಲಿ ಸುವರ್ಣ ವಾಹಿನಿಯ ಬೆಸ್ಟ್ ಕಾಮಿಡಿ, 2011ರಲ್ಲಿ ಫೀಲಂಫೇರ್‌ ಅವಾರ್ಡ್‌, 2013ರಲ್ಲಿ ಬೆಸ್ಟ್ ಕಾಮಿಡಿಯನ್, 2015ರಲ್ಲಿ ರಾಜ್ಯೋತ್ಸವ, ಚಿತ್ರ ಸಂಸ್ಥೆಯಲ್ಲಿ ಪಾಪಿಲರ್ ಅವಾರ್ಡ್ ಹಾಗೂ 2017ರಲ್ಲಿ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.ಇಂದು ಚಿಕ್ಕ ಸಿಂದಗಿ ಗ್ರಾಮದಲ್ಲಿ ಅಂತ್ಯಕ್ರಿಯೆ

ಸಿಂದಗಿ:

ಖ್ಯಾತ ಹಾಸ್ಯ ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟಿ (60) ಮಣಿಪಾಲ್ ಆಸ್ಪತ್ರೆಯಲ್ಲಿ‌ ಹೃದಯಾಘಾತದಿಂದ ಸೋಮವಾರ ನಿಧನರಾದರು.

ಮೂಲತಃ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದವರಾದ ರಾಜು ತಾಳಿಕೋಟಿ, ಇವರ ಮೂಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ. ಅ.12ರಂದು ಉಡುಪಿಯಲ್ಲಿ ಚಿತ್ರೀಕರಣ ಸಮಯದಲ್ಲಿ ಅವರಿಗೆ ಹೃದಯಾಘಾತ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿತ್ತಾದರೂ ಅವರು ಚಿಕಿತ್ಸೆ ಫಲಿಸದೆ ನಿಧನ ಹೊಂದಿದ್ದಾರೆ.

ಹಲವು ವರ್ಷಗಳಿಂದ ನಾಟಕ ಹಾಗೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ರಾಜು ತಾಳಿಕೋಟಿ, ಕಲಿಯುಗದ ಕುಡುಕ ನಾಟಕದ ಮೂಲಕ ಉತ್ತರ ಕರ್ನಾಟಕದಲ್ಲಿ ಭಾರಿ ಹೆಸರು ಮಾಡಿದ್ದರು. ಇತ್ತೀಚಿಗೆ ಧಾರವಾಡ ರಂಗಾಯಣದ ನಿರ್ದೇಶಕರೂ ಆಗಿದ್ದರು. ಜಿಲ್ಲೆಯ ಸಿಂದಗಿ, ತಾಳಿಕೋಟಿ ಹಾಗೂ ಬೆಂಗಳೂರಿನಲ್ಲಿ ನಿವಾಸ ಹೊಂದಿದ್ದರು. ಅ.14ರಂದು ಚಿಕ್ಕ ಸಿಂದಗಿ ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯ ನಡೆಯಲಿದೆ ಎಂದು ರಾಜು ತಾಳಿಕೋಟಿಯ ಸಂಬಂಧಿಕರಾದ ಕಬೀರಸಾಬ ದೇಸೂಣಗಿ ಪತ್ರಿಕೆಗೆ ತಿಳಿಸಿದರು.

PREV
Read more Articles on

Recommended Stories

ದೀಪಾವಳಿ ಹಬ್ಬ : ಕೆಎಸ್ಸಾರ್ಟಿಸಿಯಿಂದ 2500 ಹೆಚ್ಚುವರಿ ಬಸ್‌
ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ