ಸತ್ಯನಾರಾಯಣ ಮಾಹಿತಿ । 21ರ ವರೆಗೆ ಜಾತ್ರೆ
ಕಡೂರು: ಇದೇ 18 ರಂದು ಕಡೂರು ತಾಲೂಕಿನ ಮಲ್ಲೇಶ್ವರದ ಇತಿಹಾಸ ಪ್ರಸಿದ್ಧ ಶ್ರೀ ಸ್ವರ್ಣಾಂಬ ದೇವಿ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿ ಸಮಿತಿ ಅಧ್ಯಕ್ಷ ಎಂ.ಟಿ.ಸತ್ಯನಾರಾಯಣ ತಿಳಿಸಿದರು .ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆದಿವೆ. ಭಕ್ತರ ಆರಾಧ್ಯ ದೈವ ಶ್ರೀ ಸ್ವರ್ಣಾಂಬೆ ಜಾತ್ರೆ ಏ.14ರ ಸೋಮವಾರದಿಂದ 21ರ ವರೆಗೆ ನಡೆಯಲಿದೆ.
ಪ್ರತಿದಿನ ಸಂಜೆ ನಾಡಿನ ಸಂಸ್ಕೃತಿ ಮತ್ತು ಪರಂಪರೆ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಾಲಯದ ಆವರಣದಲ್ಲಿ ನಡೆಯಲಿವೆ. ಏ.14ರ ಸೋಮವಾರ ಶ್ರೀ ಕ್ಷೇತ್ರ ಶಂಕು ತೀರ್ಥದಲ್ಲಿ ಶ್ರೀ ಅಮ್ಮನವರಿಗೆ ಮಂಗಳ ಸ್ನಾನ, ಕಂಕಣ ಬಂಧನ ಶ್ರೀರಾಮ ದೇವರಿಗೆ ಅಭಿಷೇಕ ಪೂಜೆ. ಸಂಜೆ ಮಲ್ಲೇಶ್ವರದ ತಿಮ್ಮಯ್ಯನವರ ಮನೆಯಲ್ಲಿ ಶ್ರೀ ವಿಷ್ಣು ಸಹಸ್ರನಾಮ, ಅಷ್ಟವಾದನ ಸೇವೆ ಮೂಲಕ ಜಾತ್ರೆಗೆ ಚಾಲನೆ ಸಿಗಲಿದೆ.ಏ.15 ಮಂಗಳವಾರ ಪುಣ್ಯಾಹ, ಸಂಪ್ರೋಕ್ಷಣೆ, ಅಭಿಷೇಕ, ಸಂಜೆ ಭಕ್ತಾದಿಗಳಿಂದ ಭಾನಸೇವೆ, ಬೇವಿನುಡಿಗೆ ನಡೆಯಲಿದೆ. 16 ರ ಬುಧವಾರ ಶ್ರೀ ಅಮ್ಮನವರಿಗೆ ಅಭಿಷೇಕ, ಜಪ ಪಾರಾಯಣ, ವಿಶೇಷ ಪೂಜೆ ಬಳಿಕ ಅಮ್ಮನವರಿಗೆ ರಜತ ಪಲ್ಲಕ್ಕಿ ನಡೆಯಲಿದೆ.
17ರ ಗುರುವಾರ ಚಿಕ್ಕ ರಥೋತ್ಸವ ನಡೆಯಲಿದ್ದು, ಸೂಕ್ತ ಪಾರಾಯಣದ ನಂತರ ಶ್ರೀ ಚಂಡಿಕಾ ಹೋಮ. ಪೂರ್ಣಾಹುತಿ, ಮಂಗಳಾರತಿ, ಏ18ರ ಶುಕ್ರವಾರ ಬೆಳಿಗ್ಗೆ ಶ್ರೀ ದೇವಿಯವರಿಗೆ ಅಭಿಷೇಕ, ಪುರಸ್ಸರ ಕಲ್ಯಾಣೋತ್ಸವ ನಡೆಯಲಿದೆ.ಸಂಜೆ ರಥದ ಮೇಲಿರುವ ಶ್ರೀದೇವಿಗೆ ವಿಶೇಷ ಪೂಜೆ, ಭಕ್ತಿ ಸಂಗೀತ. 19ರ ಶನಿವಾರ ಬೆಳಗಿನ ರಥೋತ್ಸವ, ಸಿಡಿ ಸೇವೆ, 2 ಗಂಟೆಗೆ ವಸಂತೋತ್ಸವ ಸೇವೆ, 20ರ ಭಾನುವಾರ ಶ್ರೀ ಅಮ್ಮನ ಸನ್ನಿಧಿಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.
21ರ ಸೋಮವಾರ ಬೆಳಿಗ್ಗೆ ಶ್ರೀ ದೇವಿ ಅವರಿಗೆ ಪುಷ್ಪಯಾಗ, ವಿವಿಧ ಸೇವೆ ನಡೆಯಲಿದೆ ಎಂದರು. ಸಮಿತಿ ಕಾರ್ಯಾಧ್ಯಕ್ಷ ಎಂ.ಟಿ. ಹನುಮಂತಯ್ಯ ಧರ್ಮದರ್ಶಿ ಮಂಡಳಿ ಸದಸ್ಯರು, ಧರ್ಮಣ್ಣ, ಮಾಲತೇಶ್, ಧರ್ಮರಾಜ್, ಗ್ರಾಮದ ಮುಖಂಡರು ಇದ್ದರು.