ಬೆಳೆಹಾನಿಯಾದ ರೈತರಿಗೆ ಸಮರ್ಪಕ ಪರಿಹಾರ ನೀಡುವಂತೆ ರೈತ ಸಂಘ ಆಗ್ರಹ

KannadaprabhaNewsNetwork | Published : Feb 20, 2025 12:46 AM

ಸಾರಾಂಶ

ಶುಂಠಿ ಬೆಲೆ ಕುಸಿತವಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದು, ಕೂಡಲೇ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ ₹10 ಸಾವಿರ ನಿಗದಿ ಮಾಡಬೇಕು.

ಹಿರೇಕೆರೂರು: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ರಟ್ಟೀಹಳ್ಳಿ ಮತ್ತು ಹಿರೇಕೆರೂರು ತಾಲೂಕಿನಲ್ಲಾದ ಮುಂಗಾರು ಬೆಳೆ ವಿಮಾದಲ್ಲಿ ಸಾಕಷ್ಟು ತಾರತಮ್ಯವಾಗಿದ್ದು, ಅನೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಅನ್ಯಾಯವಾಗಿದೆ. ಕೂಡಲೇ ಈ ತಾಲೂಕಿನಲ್ಲಿ ಪರಿಶೀಲನೆ ನಡೆಸಿ ರೈತರ ಖಾತೆಗಳಿಗೆ ವಿಮಾ ಹಣ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.ಶುಂಠಿ ಬೆಲೆ ಕುಸಿತವಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದು, ಕೂಡಲೇ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ ₹10 ಸಾವಿರ ನಿಗದಿ ಮಾಡಬೇಕು. ಈ ತಾಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ನಷ್ಟವಾಗಿದ್ದು, ನಿಯಮದ ಪ್ರಕಾರ ಪ್ರತಿ ಹೆಕ್ಟೇರ್‌ಗೆ ಒಟ್ಟು ₹17 ಸಾವಿರ ಪರಿಹಾರ ನೀಡಬೇಕಾಗಿತ್ತು. ಆದರೆ ಎಕೆರೆಗೆ ₹500ರಿಂದ ₹1 ಸಾವಿರ ಪರಿಹಾರ ನೀಡಲಾಗಿದೆ. ಅದೂ ಕೆಲ ರೈತರಿಗೆ ಬಂದಿಲ್ಲ. ಕೂಡಲೇ ಬೆಳೆ ನಷ್ಟವಾದ ಎಲ್ಲ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಲು ಅರ್ಜಿ ಪಡೆಯುವುದನ್ನು ನಿಲ್ಲಿಸಲಾಗಿದ್ದು, ರೈತರಿಂದ ಅರ್ಜಿ ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕು. ಅಕ್ರಮ ಸಕ್ರಮ ಯೋಜನೆಯ ಕಾಮಗಾರಿಗಳನ್ನು ತ್ವರಿತವಾಗಿ ನಿರ್ವಹಿಸಿ ವಿದ್ಯುತ್ ಕಂಬ, ತಂತಿ, ಟಿಸಿಗಳನ್ನು ನೀಡಬೇಕು. ಹಂಸಭಾವಿ, ಹುಲ್ಲತ್ತಿ, ಕುಡುಪಲಿ, ಹಳ್ಳೂರು, ನಿಟ್ಟೂರು, ಗುಡ್ಡದಮಾದಾಪುರದ ವಿದ್ಯುತ್ ಗ್ರೀಡ್‌ಗಳ ಕಾಮಗಾರಿಯನ್ನು ತುರ್ತಾಗಿ ನಿರ್ವಹಿಸಬೇಕು ಎಂದರು.

ತಹಸೀಲ್ದಾರ್ ಎಚ್. ಪ್ರಭಾಕರಗೌಡ ಮನವಿ ಸ್ವೀಕರಿಸಿದರು. ರೈತ ಸಂಘದ ತಾಲೂಕಾಧ್ಯಕ್ಷ ಪ್ರಭುಗೌಡ ಪ್ಯಾಟಿ, ಮುಖಂಡರಾದ ಎಚ್.ಎಚ್. ಮುಲ್ಲಾ, ಬಸನಗೌಡ ಗಂಗಪ್ಪನವರ, ಮಹ್ಮದ್‌ಗೌಸ್ ಪಾಟೀಲ, ಗಂಗನಗೌಡ ಮುದಿಗೌಡ್ರ, ಶಂಭು ಮುತ್ತಗಿ, ಈರಪ್ಪ ಮಳ್ಳೂರ, ಶಾಂತನಗೌಡ ಪಾಟೀಲ, ಕರಬಸಪ್ಪ ಬಣಕಾರ, ಯಶವಂತ ತಿಮಕಾಪುರ, ನವೀನ್ ಹುಲ್ಲತ್ತಿ ಸೇರಿದಂತೆ ವಿವಿಧ ಗ್ರಾಮಗಳ ರೈತರಿದ್ದರು.ಯತ್ತಿನಹಳ್ಳಿಯಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮ

ಹಿರೇಕೆರೂರು: ಶಾಲಾ ಮಕ್ಕಳನ್ನು ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವುದು ಕಲಿಕಾ ಹಬ್ಬದ ಉದ್ದೇಶವಾಗಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.

ತಾಲೂಕಿನ ಯತ್ತಿನಹಳ್ಳಿ(ಎಂ.ಕೆ.) ಗ್ರಾಮದ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನಡೆದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸುದ್ದೇಶದಿಂದ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹಣ ವ್ಯಯ ಮಾಡಿ ಮಕ್ಕಳ ಕಲಿಕೆ ಸುಗಮವಾಗಿ ಸಾಗಲು ಅಗತ್ಯ ಮೂಲ ಸೌಕರ್ಯಗಳು, ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಹೊಸ ಹೊಸ ಯೋಜನೆಗಳನ್ನು ರೂಪಿಸಿ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಿ, ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳು ಎಲ್ಲ ಯೋಜನೆಗಳ ಪ್ರಯೋಜನ ಪಡೆದುಕೊಂಡು ಶಿಕ್ಷಣವಂತರಾಗಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ, ಕಲಿಕಾ ಹಬ್ಬ ಮಕ್ಕಳ ಕಲಿಕಾ ಸಾಮರ್ಥ್ಯ ಪತ್ತೆ ಹಚ್ಚುವ ಕಾರ್ಯಕ್ರಮವಾಗಿದೆ ಮತ್ತು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ ಎಂದರು.ಎಸ್‌ಡಿಎಂಸಿ ಅಧ್ಯಕ್ಷ ಭರಮಗೌಡ ಸಣ್ಣಕ್ಕಿ, ಗ್ರಾಪಂ ಅಧ್ಯಕ್ಷೆ ರೇಣುಕಾ ಕಲ್ಲಣ್ಣನವರ, ಸದಸ್ಯ ಬಸವರಾಜ ಮ. ಮುಚಡಿ, ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗಣೇಶಗೌಡ ಪಾಟೀಲ, ಶಿವಮೂರ್ತೆಪ್ಪ ಬಣಕಾರ, ಕಲ್ಲಪ್ಪ ಮುಚಡಿ, ಮಲ್ಲೇಶಪ್ಪ ಸಾತೇನಹಳ್ಳಿ, ವಸಂತ ವಡೇಯನಪುರ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು, ಶಾಲಾ ಸಿಬ್ಬಂದಿ, ಪಾಲಕರು ಇದ್ದರು.

Share this article