- ಮುಖಂಡ ಕುರುವ ಮಂಜುನಾಥ್ ಹೇಳಿಕೆ । ದಲಿತರಿಗೆ ಅನ್ಯಾಯ ಖಂಡಿಸಿ ಸರ್ಕಾರಕ್ಕೆ ಮನವಿ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ದಲಿತರನ್ನು ಅರಣ್ಯ ಭೂಮಿ ಸಾಮಾಜಿಕ ಅರಣ್ಯೀಕರಣ, ಗೋವುಗಳ ಗೋಮಾಳಗಳಿಗೆ ಕಾಯ್ದಿರಿಸುವ ನೆಪದಲ್ಲಿ ಸರ್ಕಾರ ದಲಿತರ ಒಕ್ಕಲೆಬ್ಬಿಸುವ ಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಹೊನ್ನಾಳಿ ತಾಲೂಕು ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರಧಾನ ಸಂಚಾಲಕ ಕುರುವ ಮಂಜುನಾಥ್ ಹೇಳಿದರು.ಸಂಘಟನೆ ವತಿಯಿಂದ ಶುಕ್ರವಾರ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಎದುರು ಘೋಷಣೆ ಕೂಗಿ, ಬಳಿಕ ಉಪವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ್ ಮಂಜುನಾಥ ಮೂಲಕ ಸಿಎಂಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಬಾಬಾ ಸಾಹೇಬರ ಸೈದ್ಧಾಂತಿಕ ನೆಲೆಯಲ್ಲಿ ದಲಿತ ಚಳವಳಿ ಭೂಮಿ, ಶಿಕ್ಷಣ ಮುಂತಾದ ಮನುಷ್ಯ ಮೂಲಭೂತ ಅವಶ್ಯಕತೆಗಾಗಿ ಆಳುವ ವ್ಯವಸ್ಥೆಯೊಂದಿಗೆ ನಿರಂತರ ಸಂಘರ್ಷ ನಡೆಯುತ್ತಿದೆ. 4 ದಶಕಗಳಿಂದ ದಲಿತರ ಭೂಮಿ ಹಕ್ಕಿಗಾಗಿ ನಡೆಸಿದ ಹೋರಾಟಗಳಲ್ಲಿ, ದರಕಾಸ್ತು ಜಮೀನು ಮಂಜೂರು ಮಾಡುವ ಕಾಯಿದೆ ಜಾರಿಗೆ ಬಂದಿದೆ. ಇಂದಿಗೂ ಸರ್ಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರ ರಾಜ್ಯದ ಒಟ್ಟು ಭೂಮಿಯಲ್ಲಿ ದಲಿತರು ಕೇವಲ ಶೇ.11ರಷ್ಟು ಮಾತ್ರ ಭೂಮಿ ಹೂಂದಿದ್ದಾರೆ. ಇದರಲ್ಲಿ ನೀರಾವರಿ ಪ್ರದೇಶ ಅತ್ಯಲ್ಪವಾಗಿದೆ ಎಂದು ಹೇಳಿದರು.
ಆಡಳಿತ ನಡೆಸುವ ಸರ್ಕಾರ ದಲಿತರ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
- - -
ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಶುಕ್ರವಾರ ದಲಿತರ ಭೂಮಿ, ವಸತಿ ಹಕ್ಕಿಗಾಗಿ ಅಗ್ರಹಿಸಿ ಪಟ್ಟಣದ ಎಸಿ ಕಚೇರಿ ಎದುರು ಘೋಷಣೆ ಕೂಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.