ದಿನೇದಿನೇ ಬಿಗಡಾಯಿಸುತ್ತಿರುವ ರೈತರ ಪರಿಸ್ಥಿತಿ

KannadaprabhaNewsNetwork |  
Published : Oct 06, 2026, 02:45 AM IST
ಬರ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿಯಾತಕ್ಕೆ ಮಳೆ ಹೋದವೋ ಶಿವ ಶಿವ, ಲೋಕ ತಲ್ಲಣಿಸುತಾವೋ ಎನ್ನುವಂತ ಸ್ಥಿತಿ ದೇವರಹಿಪ್ಪರಗಿ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಮುಂಗಾರು ಮಳೆ ಕೈಕೊಟ್ಟಿದ್ದು, ಹಿಂಗಾರು ಮಳೆಯ ನಿರೀಕ್ಷೆಯೂ ಹುಸಿಯಾಗುವಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ತಾಲೂಕಾದ್ಯಂತ ಬರದ ಛಾಯೆ ಆವರಿಸಿದೆ. ಮಳೆ ಅಭಾವದಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ರೈತಾಪಿ ವರ್ಗದಲ್ಲಿ ಆತಂಕ ಮನೆಮಾಡಿದೆ.

ಮಲ್ಲಿಕಾರ್ಜುನ ಪಟ್ಟಣಶೆಟ್ಟಿಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿಯಾತಕ್ಕೆ ಮಳೆ ಹೋದವೋ ಶಿವ ಶಿವ, ಲೋಕ ತಲ್ಲಣಿಸುತಾವೋ ಎನ್ನುವಂತ ಸ್ಥಿತಿ ದೇವರಹಿಪ್ಪರಗಿ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಮುಂಗಾರು ಮಳೆ ಕೈಕೊಟ್ಟಿದ್ದು, ಹಿಂಗಾರು ಮಳೆಯ ನಿರೀಕ್ಷೆಯೂ ಹುಸಿಯಾಗುವಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ತಾಲೂಕಾದ್ಯಂತ ಬರದ ಛಾಯೆ ಆವರಿಸಿದೆ. ಮಳೆ ಅಭಾವದಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ರೈತಾಪಿ ವರ್ಗದಲ್ಲಿ ಆತಂಕ ಮನೆಮಾಡಿದೆ.ತೊಗರಿ ಹಾಗೂ ಜೋಳದ ಕಣಜ ಎಂದೇ ಹೆಸರಾಗಿರುವ ತಾಲೂಕಿನಲ್ಲಿ ಹತ್ತಿ, ತೊಗರಿ, ಕಬ್ಬು, ಮೆಕ್ಕೆಜೋಳ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳು ಮಳೆ ಕೊರತೆಯಿಂದ ತೀವ್ರ ಹಾನಿಗೊಳಗಾಗಿವೆ. ಅಲ್ಪಸ್ವಲ್ಪ ಮಳೆ ಬಂದ ಸಂದರ್ಭದಲ್ಲಿ ಕೆಲ ರೈತರು ಬಿತ್ತನೆ ಮಾಡಿದ್ದರೂ, ನಂತರ ಮಳೆ ಕೈಕೊಟ್ಟ ಪರಿಣಾಮ ಮೊಳಕೆಯೊಡೆದ ಬೆಳೆಗಳು ಕೂಡ ಒಣಗುವಂತಾಗಿದೆ. ಬಿತ್ತನೆಗೆ ಸಿದ್ಧಗೊಂಡಿದ್ದ ಬೀಜಗಳು ಹಲವು ರೈತರ ಮನೆಗಳಲ್ಲೇ ಉಳಿದಿವೆ. ತಾಲೂಕಿನಲ್ಲಿ 19,540 ಹೆಕ್ಟೇರ್ ನೀರಾವರಿ ಹಾಗೂ 38,052 ಹೆಕ್ಟೇರ್ ಖುಷ್ಕಿ ಪ್ರದೇಶ ಸೇರಿದಂತೆ ಒಟ್ಟು 57,592 ಹೆಕ್ಟೇರ್‌ನಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಮಳೆ ಕೊರತೆಯಿಂದ ಬಿತ್ತನೆ ಪ್ರಮಾಣ ಶೇ.80ರ ಗಡಿ ದಾಟಿಲ್ಲ ಎನ್ನಲಾಗುತ್ತಿದೆ. ಬಿತ್ತನೆಯಾದ ಬೆಳೆಗಳಲ್ಲಿಯೂ ಸಮರ್ಪಕ ಬೆಳವಣಿಗೆ ಕಂಡುಬಂದಿಲ್ಲ. ಇದರೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ ಮತ್ತೊಂದು ಸಮಸ್ಯೆಯಾಗಿ ಪರಿಣಮಿಸಿದೆ. ನೀರಾವರಿ ಸೌಲಭ್ಯ ಹೊಂದಿರುವ ರೈತರು ಸಹ ಬೆಳೆಗಳಿಗೆ ನೀರು ಹಾಯಿಸಲು ಪರದಾಡುವಂತಾಗಿದೆ. ಕುಡಿಯುವ ನೀರಿನ ಸಮಸ್ಯೆಯೂ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ನೀರು ಹಾಗೂ ಮೇವಿನ ಕೊರತೆ ಎದುರಾಗುವ ಆತಂಕ ಕಾಡುತ್ತಿದೆ.ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ರೈತರುತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ, ಬೆಳೆ ವಿಮೆ ಪರಿಹಾರ, ಕುಡಿಯುವ ನೀರು, ಜಾನುವಾರುಗಳಿಗೆ ನೀರು ಮತ್ತು ಮೇವು ಸೇರಿದಂತೆ ಅಗತ್ಯ ಸರ್ಕಾರಿ ನೆರವನ್ನು ತ್ವರಿತವಾಗಿ ಒದಗಿಸಬೇಕೆಂಬ ಒತ್ತಾಯ ರೈತರಿಂದ ಕೇಳಿಬರುತ್ತಿದೆ. ಮುಂಗಾರು ಅವಧಿಯಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರೂ, ಹಿಂಗಾರು ಬೆಳೆಗಳಿಗೆ ಅಗತ್ಯವಾದ ಮಳೆಯ ಲಕ್ಷಣಗಳು ಸದ್ಯ ಕಾಣಿಸುತ್ತಿಲ್ಲ. ಹೀಗಾಗಿ, ಕೃಷಿಯನ್ನೇ ನಂಬಿಕೊಂಡಿರುವ ಸಾವಿರಾರು ಕುಟುಂಬಗಳ ಬದುಕು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ಈಗಾಗಲೇ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಬೆಳೆ ಹಾನಿ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆ. ಸರ್ಕಾರವು ರೈತರ ಸಂಕಷ್ಟವನ್ನು ಪರಿಗಣಿಸಿ ಬೆಳೆ ಪರಿಹಾರ, ಸಾಲ ಮನ್ನಾ ಹಾಗೂ ವಿಶೇಷ ಪ್ಯಾಕೇಜ್ ಸೇರಿದಂತೆ ಅಗತ್ಯ ನೆರವು ನೀಡಬೇಕು ಎಂಬುದು ಅನ್ನದಾತರ ಪ್ರಮುಖ ಕೋರಿಕೆ. ಮಳೆ ಕೈಕೊಟ್ಟಿರುವ ಈ ಸಂದರ್ಭದಲ್ಲಿ ರೈತರ ಬದುಕಿಗೆ ಆಸರೆಯಾಗಬೇಕಾದದ್ದು ಕೇವಲ ಪರಿಹಾರವಲ್ಲ, ಮುಂದಿನ ಹಂಗಾಮಿನ ಕೃಷಿಗೆ ಅಗತ್ಯವಾದ ಬೀಜ, ನೀರು, ವಿದ್ಯುತ್ ಹಾಗೂ ಆರ್ಥಿಕ ನೆರವನ್ನೂ ಸಮರ್ಪಕವಾಗಿ ಒದಗಿಸಬೇಕಾಗಿದೆ. ಇಲ್ಲವಾದಲ್ಲಿ ಬರದ ಹೊಡೆತ ಇನ್ನಷ್ಟು ತೀವ್ರವಾಗುವ ಆತಂಕ ರೈತ ಸಮುದಾಯದಲ್ಲಿದೆ.​ನೀರಾವರಿ ಕ್ಷೇತ್ರ 18500 ಹೆಕ್ಟೇರ್ ಹೊಂದಿದ್ದು, ತಾಲೂಕಿನ ವಾರ್ಷಿಕ ಸರಾಸರಿ ಮಳೆಯ ಪ್ರಮಾಣ 568.0 ಮಿ.ಮೀ ಆಗಿದೆ. ವಾಡಿಕೆಯಂತೆ ಈ ಬಾರಿ ಜೂನ್ 1ರಿಂದ ಇಲ್ಲಿಯವರೆಗೆ 529ಮಿ.ಮೀ ಆಗಿದೆ. ಇದರಲ್ಲಿ ಈವರೆಗೆ 350 ಮಿ.ಮೀ ಆಗಿದ್ದು, ಶೇ.34 ಮಳೆ ಕೊರತೆಯಾಗಿದೆ. ​ಮಳೆಯಾಶ್ರಿತ ಬೆಳೆಗಳ ಕ್ಷೇತ್ರ 58,357 ಹೆಕ್ಟೇರ್, ನೀರಾವರಿ ಬೆಳೆಗಳ ಕ್ಷೇತ್ರ 23643 ಹೆಕ್ಟೇರ್, ತೋಟಗಾರಿಕೆ ಕ್ಷೇತ್ರ 4207 ಹೆಕ್ಟೇರ್.​ ಸಣ್ಣ ಮತ್ತು ಅತಿ ಸಣ್ಣ ರೈತರು 19,149 ದೊಡ್ಡ 8117 ರೈತರು. ಈ ಬಾರಿ ಹಿಂಗಾರು ಹಂಗಾಮಿನಲ್ಲಿ ಕಡಲೆಬೀಜ 1170 ಕ್ವಿಂಟಲ್, ಜೋಳ 30 ಕ್ವಿಂಟಲ್ ಬೀಜ ದಾಸ್ತಾನು ಇದೆ. ಹಿಂಗಾರು ಮಳೆಯ ನಿರೀಕ್ಷೆಯಲ್ಲಿ ರೈತರು ಇದ್ದಾರೆ ಎಂದು ದೇವರಹಿಪ್ಪರಗಿ ಕೃಷಿ ಇಲಾಖೆ ಅಧಿಕಾರಿ ಶರಣಗೌಡ ಬಿರಾದಾರ ಮಾಹಿತಿ ನೀಡಿದ್ದಾರೆ.-----

ಕೋಟ್‌ಮಳೆ ಕೈಕೊಟ್ಟ ಪರಿಣಾಮ ಹತ್ತಿ ಬೆಳೆ ಸಂಪೂರ್ಣ ಹಾಳಾಗಿದೆ. ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗದೆ ಕಣ್ಣೀರಿನಿಂದಲೇ ಹತ್ತಿ ಗಿಡಗಳನ್ನು ಕಿತ್ತುಹಾಕುವ ಪರಿಸ್ಥಿತಿ ಬಂದಿದೆ. ಬೀಜ, ಗೊಬ್ಬರ, ಔಷಧಿ ಹಾಗೂ ಕೂಲಿ ವೆಚ್ಚ ಮಾಡಿದ್ದರೂ ಕೈಗೆ ಬಂದದ್ದು ಏನೂ ಇಲ್ಲ ಎಂದು ರೈತನೊಬ್ಬ ಸುಮಾರು 3ಎಕರೆ ಹತ್ತಿ ಬೆಳೆ ಕಿತ್ತು ಹಾಕಿದ್ದೇನೆ. ಸರ್ಕಾರ ಕೂಡಲೇ ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ನೀಡಬೇಕು.-ಶಿವಪ್ಪ ಭೀಮಪ್ಪ ರಾಜನಾಳ, ರೈತ ಸಾತಿಹಾಳ----

ಕೋಟ್‌ಸರ್ಕಾರ ಆರಂಭದಲ್ಲಿ ಮಧ್ಯಮ ಬರ ಎಂದು ಘೋಷಿಸಿತ್ತು. ಆದರೆ, ತಾಲೂಕಿನಲ್ಲಿನ ಬೆಳೆ ಹಾನಿಯ ತೀವ್ರತೆ ಹಾಗೂ ರೈತರ ಸಂಕಷ್ಟದ ಕುರಿತು ಮುಖ್ಯಮಂತ್ರಿ ಹಾಗೂ ಸಚಿವರ ಮುಂದೆ ಅಧಿಕಾರಿಗಳೊಂದಿಗೆ ನಾನು ನಿರಂತರವಾಗಿ ಒತ್ತಾಯಿಸಿದ್ದೇನೆ. ಇದರ ಪರಿಣಾಮವಾಗಿ ಇದೀಗ ತೀವ್ರ ಬರ ಘೋಷಣೆಯಾಗಿದೆ. ಸರ್ಕಾರ ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಬೆಳೆ ಪರಿಹಾರ, ಬೆಳೆ ವಿಮೆ ಹಾಗೂ ವಿಶೇಷ ಪ್ಯಾಕೇಜ್ ಘೋಷಿಸಿ ರೈತರ ನೆರವಿಗೆ ಧಾವಿಸಬೇಕು.-ರಾಜುಗೌಡ ಪಾಟೀಲ, ಶಾಸಕರು, ದೇವರಹಿಪ್ಪರಗಿ----

ಕೋಟ್‌ಮುಂಗಾರು ಮಳೆಯೊಂದಿಗೆ ಹಿಂಗಾರು ಮಳೆಯ ಸಮಸ್ಯೆಯೂ ಎದುರಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತಿದ ಬೆಳೆಗಳು ಬಾಡಿ ಹೋಗುತ್ತಿದ್ದು, ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಈಗಾಗಲೇ ಮೂರು ಬಾರಿ ಚರ್ಚೆ ನಡೆಸಲಾಗಿದೆ. ಆದಷ್ಟು ಬೇಗ ರೈತರಿಗೆ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ಹಿಂಗಾರು ಹಂಗಾಮಿನ ಬೆಳೆ ವಿಮೆಯಡಿ ಸುಮಾರು ₹72 ಕೋಟಿ ಹಣ ಬಿಡುಗಡೆಯಾಗಿದೆ. ಅದರಲ್ಲಿ ₹16 ಕೋಟಿ ಜಿಲ್ಲೆಯ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಉಳಿದ ಪರಿಹಾರವನ್ನು ಅರ್ಹ ರೈತರಿಗೆ ತ್ವರಿತ ತಲುಪಿಸಲಾಗುವುದು.

-ಶಿವನಗೌಡ ಪಾಟೀಲ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು, ವಿಜಯಪುರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಫಿನಾಡಿನಲ್ಲಿ ವರುಣನ ಆಗಮನ; ರೈತರ ಮೊಗದಲ್ಲಿ ಸಂತಸ
ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ