ಕಸ್ತೂರಿ ರಂಗನ್ ವರದಿ ಜಾರಿಗೊಳಿಸದಂತೆ ಕ್ರಮಕ್ಕೆ ರೈತ ಹೋರಾಟ ಸಮಿತಿ ಮನವಿ

KannadaprabhaNewsNetwork |  
Published : Aug 25, 2024, 01:52 AM IST
ತಾಲ್ಲೂಕಿನ ಸಿ ಅ್ಯಂಡ್ ಡಿ ಜಾಗಕ್ಕೆ ಹಕ್ಕುಪತ್ರ ನೀಡಬೇಕು. ಕಸ್ತೂರಿ ರಂಗನ್ ವರದಿ ಜಾರಿಗೊಳಿಸದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ರೈತ ಹೋರಾಟ ಸಮಿತಿಯಿಂದ ಶಾಸಕ ಹಾಗು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ | Kannada Prabha

ಸಾರಾಂಶ

ಸೋಮವಾರಪೇಟೆ ತಾಲೂಕಿನ ಸಿ ಅ್ಯಂಡ್ ಡಿ ಜಾಗಕ್ಕೆ ಹಕ್ಕುಪತ್ರ ನೀಡಬೇಕು. ಕಸ್ತೂರಿ ರಂಗನ್ ವರದಿ ಜಾರಿಗೊಳಿಸದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ರೈತ ಹೋರಾಟ ಸಮಿತಿಯಿಂದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ತಾಲೂಕಿನ ಸಿ ಅ್ಯಂಡ್ ಡಿ ಜಾಗಕ್ಕೆ ಹಕ್ಕುಪತ್ರ ನೀಡಬೇಕು. ಕಸ್ತೂರಿ ರಂಗನ್ ವರದಿ ಜಾರಿಗೊಳಿಸದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ರೈತ ಹೋರಾಟ ಸಮಿತಿಯಿಂದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.

ಒಕ್ಕಲಿಗರ ಸಮುದಾಯ ಭವನದ ಶ್ರೀಗಂಧ ಹಾಲ್‌ನಲ್ಲಿ ಶನಿವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಶಾಸಕರಿಗೆ ಸಿ ಅ್ಯಂಡ್ ಡಿ ಸಮಸ್ಯೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕೃಷಿ ಭೂಮಿ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಪ್ರಮುಖರು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಕೂರ್ಗ್ ಲ್ಯಾಂಡ್ ರೆಜ್ಯುಲೇಶನ್ ೧೮೮೯ ರ ಕಾಯ್ದೆ ಪೂರ್ವದಲ್ಲಿ ಅಂದಿನ ಜನಸಂಖ್ಯೆಗೆ ಅನುಗುಣವಾಗಿ ವಿವಿಧ ನಿಭಂದನೆಗಳನ್ನೊಳಗೊಂಡಂತೆ ರೈತರಿಗೆ ಹಿಡುವಳಿ ಜಮೀನನ್ನು ನೀಡಲಾಗಿರುತ್ತದೆ. ನಂತರ ಜನಸಂಖ್ಯೆ ಬೆಳೆದಂತೆ ರೈತರು ಪೈಸಾರಿ ಜಮೀನನ್ನು ಭೂ ಮಂಜೂರಾತಿ ಕಾಯ್ದೆ ಅಡಿ ಮಂಜೂರಾತಿ ಮಾಡಿಸಿಕೊಂಡಿರುತ್ತಾರೆ. ಇನ್ನು ಮಂಜೂರಾತಿಗೆ ಅನೇಕ ಅರ್ಜಿಗಳು ಬಾಕಿ ಇರುತ್ತವೆ. ಅಂತಹ ಭೂಮಿಯನ್ನು ಈಗ ಸಿ ಅ್ಯಂಡ್ ಡಿ ಭೂಮಿ ಎಂದು ಅರಣ್ಯ ಭೂಮಿಯನ್ನಾಗಿ ಪರಿವರ್ತನೆ ಮಾಡಲು ಸಿದ್ದತೆ ನಡೆಯಯುತ್ತಿದೆ. ಸರ್ಕಾರ ಮಧ್ಯೆ ಪ್ರವೇಶಿಸಿ ರೈತರನ್ನು ರಕ್ಷಣೆ ಮಾಡಬೇಕು ಎಂದು ರೈತ ಪ್ರಮುಖರು ಮನವಿ ಮಾಡಿದರು.

ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ರಾಷ್ಟ್ರದ ೮ ರಾಜ್ಯಗಳ ಪೈಕಿ ಕರ್ನಾಟಕ ಸಹ ಸಂಕಷ್ಟಕ್ಕೆ ಸಿಲುಕಲಿದೆ. ಕರ್ನಾಟಕದ ೧೫೫೩ ಗ್ರಾಮಗಳು ಕೊಡಗಿನ ಮೂಲ ನಿವಾಸಿಗಳು, ರೈತರು, ಕಾಫಿ ಬೆಳೆಗಾರರು, ಅನಾದಿ ಕಾಲದಿಂದ ಉಳಿಸಿ, ಬೆಳೆಸಿಕೊಂಡು ಬಂದಿರುವ ಸಂಸ್ಕೃತಿ, ಗ್ರಾಮೀಣ ಬದುಕು ಕಣ್ಮರೆಯಾಗಲಿದೆ ಎಂದು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಹೇಳಿದರು.

ಯಾವುದೇ ಮಾಹಿತಿ ನೀಡದೇ, ಜಂಟಿ ಸರ್ವೆ ನಡೆಸದೆ, ಸಿ ಮತ್ತು ಡಿ ಭೂಮಿ ವ್ಯವಸಾಯಕ್ಕೆ ಯೋಗ್ಯವಲ್ಲದ ಜಮೀನು ಎಂದು ಏಕಾಏಕಿ ಕಂದಾಯ ಅಧಿಕಾರಿಗಳು ನೀಡಿದ ಅವೈಜ್ಞಾನಿಕ, ಏಕಪಕ್ಷೀಯವಾಗಿ ವರದಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೋರಾಟ ಸಮಿತಿ ಸಂಚಾಲಕ ಕೆ.ಬಿ.ಸುರೇಶ್ ಹೇಳಿದರು. ಸಿ ಅ್ಯಂಡ್ ಡಿ ಭೂಮಿ ರಕ್ಷಿತ ಅರಣ್ಯ ಎಂದಾದರೆ ಇದೊಂದು ರೈತರ ಮರಣ ಶಾಸನ ಆಗಲಿದೆ ಎಂದರು.

ಮನವಿ ಸ್ವೀಕರಿಸಿದ ಶಾಸಕ ಎ.ಎಸ್. ಪೊನ್ನಣ್ಣ, ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್‌ನಲ್ಲಿ ವ್ಯಾಜ್ಯ ಇದ್ದು, ಈ ಬಗ್ಗೆ ಮುಖ್ಯಮಂತ್ರಿ ಹಾಗು ಅರಣ್ಯ ಸಚಿವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರೈತ ಮುಖಂಡರಾದ ಬಿ.ಜೆ. ದೀಪಕ್, ಎಸ್.ಜಿ. ಮೇದಪ್ಪ, ಎ.ಆರ್. ಮುತ್ತಣ್ಣ, ಕೆ.ಎಂ. ಲೋಕೇಶ್, ಹೂವಯ್ಯ, ಎಚ್.ಈ. ರಮೇಶ್, ರಾಜಪ್ಪ ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ