ಮತಯಂತ್ರದಲ್ಲಿ ಅಭ್ಯರ್ಥಿಗಳ ಹಣೆಬರಹ ಭದ್ರ

KannadaprabhaNewsNetwork | Published : May 8, 2024 1:01 AM

ಸಾರಾಂಶ

ಪ್ರಜಾತಂತ್ರದ ಬಹುದೊಡ್ಡ ಹಬ್ಬ ಎಂದೇ ಕರೆಯುವ ಲೋಕಸಭೆ ಚುನಾವಣೆಗೆ ಸಂಭ್ರಮದ ತೆರೆ ಬಿದ್ದಿದ್ದು, ಗಣತಂತ್ರದ ವೈಭವಕ್ಕೆ ಮತದಾರರು ಅಂತಿಮ ಮುದ್ರೆ ಒತ್ತಿದ್ದಾರೆ.

ಈಶ್ವರ ಶೆಟ್ಟರ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಜಾತಂತ್ರದ ಬಹುದೊಡ್ಡ ಹಬ್ಬ ಎಂದೇ ಕರೆಯುವ ಲೋಕಸಭೆ ಚುನಾವಣೆಗೆ ಸಂಭ್ರಮದ ತೆರೆ ಬಿದ್ದಿದೆ. ಕಳೆದ ಐವತ್ತು ದಿನಗಳ ಚುನಾವಣೆ ಪ್ರಕ್ರಿಯೆ ಜೊತೆಗೆ ವಿವಿಧ ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರ ಸೇರಿದಂತೆ ಗಣತಂತ್ರದ ವೈಭವಕ್ಕೆ ಮತದಾರರು ಅಂತಿಮ ಮುದ್ರೆ ಒತ್ತಿದ್ದಾರೆ. ಈ ಮೂಲಕ ಮತದಾರರ ತೀರ್ಪು ಮತಯಂತ್ರಗಳಲ್ಲಿ ಭದ್ರಗೊಂಡಿದ್ದು, ಮತದಾರರ ಹಣೆಬರಹ ನಿರ್ಧಾರಕ್ಕೆ ಇನ್ನೂ ತಿಂಗಳು ಕಾಯಬೇಕಿದೆ.

ಚುನಾವಣೆಯನ್ನು ಯಶಸ್ವಿಯಾಗಿ ನಡೆಸುವುದು ಜಿಲ್ಲಾಡಳಿತಕ್ಕೆ ಸವಾಲಾದರೆ, ರಾಜಕೀಯ ಪಕ್ಷಗಳಿಗೆ ತಮ್ಮ ಅಭ್ಯರ್ಥಿಗಳ ಜಯಕ್ಕೆ ರಣತಂತ್ರ ರೂಪಿಸುವುದು ಸವಾಲಿನ ಕೆಲಸವಾಗಿತ್ತು. ಇಂತಹ ಸವಾಲುಗಳ ನಡುವೆ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಚುನಾವಣೆ ಯಶಸ್ವಿಯಾಗಿ ಮುಗಿದಿದ್ದು, ಕಳೆದೆರಡು ತಿಂಗಳ ಆಡಳಿತದ ಶ್ರಮಕ್ಕೆ ಜಿಲ್ಲೆಯ ಮತದಾರರು ಸಹ ಶಾಂತ ರೀತಿಯಿಂದ ಸ್ಪಂದಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳು ಸೇರಿದಂತೆ ಗದಗ ಜಿಲ್ಲೆಯ ನರಗುಂದ ವಿಧಾನಸಭೆ ವ್ಯಾಪ್ತಿಯ ಮತದಾರರನ್ನೊಳಗೊಂಡ ಬಾಗಲಕೋಟೆ ಲೋಕಸಭೆ ಕ್ಷೇತ್ರ ಹಲವು ವೈವಿಧ್ಯತೆಯನ್ನು ಒಳಗೊಂಡಿದೆ. ಒಂದು ಕಡೆ ಕೃಷ್ಣೆ, ಘಟಪ್ರಭೆ, ಮಲಪ್ರಭೆಗಳ ಬತ್ತಿದ ನದಿಗಳು, ತೀವ್ರ ಬರಗಾಲ, ಬೆಲೆ ಏರಿಕೆ ಸಮಸ್ಯೆಯಿಂದ ತತ್ತರಿಸಿರುವ ಜಿಲ್ಲೆಯ ಮತದಾರ ತನ್ನ ಹಲವು ಸಮಸ್ಯೆಗಳ ನಡುವೆಯೂ ಮತದಾನ ಮಾಡುವ ಮೂಲಕ ಜವಾಬ್ದಾರಿ ಮೆರೆದಿದ್ದಾನೆ. ಇದೆ ನಿಜವಾದ ಪ್ರಜಾಪ್ರಭುತ್ವದ ಗೆಲವು ಎನ್ನಬಹುದು.

ಮತದಾನ ಹೆಚ್ಚಳಕ್ಕೆ ಜಿಲ್ಲಾಡಳಿತ ಹರಸಾಹಸ :

ಇತ್ತೀಚಿನ ಚುನಾವಣೆಗಳಲ್ಲಿ ಕೇಂದ್ರ ಚುನಾವಣೆ ಆಯೋಗ ಮತದಾರರನ್ನು ಮತಯಂತ್ರಕ್ಕೆ ಕರೆತರಲು ಪಡುತ್ತಿರುವ ಶ್ರಮ ನೋಡಿದರೆ ಆಯಾ ಲೋಕಸಭೆ ಕ್ಷೇತ್ರಗಳಲ್ಲಿ ಕನಿಷ್ಠ ಶೇ.85ರಷ್ಟು ಮತದಾನವಾಗಬೇಕು. ಆದರೆ ಅದು ಕಷ್ಟ ಸಾಧ್ಯ ಎನಿಸುತ್ತಿದೆ.

ಬಾಗಲಕೋಟೆ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಹೆಚ್ಚಳಕ್ಕೆ ಜಿಪಂ ಸಿಇಒ ಶಶಿಧರ ಕುರೇರ ನೇತೃತ್ವದ ಸ್ವೀಪ್ ತಂಡ ಕಳೆದ 45 ದಿನಗಳಿಂದ ಹಾಕಿದ ಪರಿಶ್ರಮ ನಿಜಕ್ಕೂ ಮೆಚ್ಚುವಂತದ್ದು. ರಂಗೋಲಿ ಬಿಡಿಸುವುದು, ಬೈಕ್ ರ್‍ಯಾಲಿ, ಸಾಮೂಹಿಕ ಮತದಾನದ ಜಾಗೃತಿ ಸೇರಿದಂತೆ ಹಲವು ಬಗೆಯ ತಂತ್ರಗಳನ್ನು ಬಳಸಿ ಮತ ಪ್ರಮಾಣ ಹೆಚ್ಚಳಕ್ಕೆ ಮಾಡಿದ ಕಾಳಜಿಯನ್ನು ಕಂಡು ಎಲ್ಲ ಮತದಾರರು ಕತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದರೆ ಅವರಿಗೂ ಸಹ ಒಂದು ಸಣ್ಣ ಗೆಲುವು ಕಂಡ ಖುಷಿ ನೀಡುತ್ತಿತ್ತು.ಕಟ್ಟುನಿಟ್ಟಿನ ತಪಾಸಣೆ:

ಬಾಗಲಕೋಟ ಲೋಕಸಭೆ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಜಿಲ್ಲಾಡಳಿತ ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಇದರ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ಆಕ್ರಮ ಹಣ ಸಾಗಣೆ, ಅಕ್ರಮ ಮದ್ಯ ಮಾರಾಟ ಹಾಗೂ ಸಾಗಣೆ ತಡೆದು ದಾಖಲೆ ಪ್ರಮಾಣದಲ್ಲಿ ಹಣ ಹಾಗೂ ಮದ್ಯ ವಶಪಡಿಸಿಕೊಳ್ಳಲು ಸಾಧ್ಯವಾಯಿತು. ಜಿಲ್ಲಾಧಿಕಾರಿಗಳು ಸ್ವತಃ ಕಾಲಕಾಲಕ್ಕೆ ತಪಾಸಣೆ ಕೇಂದ್ರಗಳಿಗೆ ಭೇಟಿ ನೀಡಿ ಸಿಬ್ಬಂದಿಗೆ ನೀಡಿದ ಮಾರ್ಗದರ್ಶನದ ಪರಿಣಾಮ ಅಕ್ರಮಗಳ ಕಡಿವಾಣಕ್ಕೆ ಸಹಕಾರಿಯಾಯಿತು ಎನ್ನಬಹುದು.

Share this article